ದೇವಸ್ಥಾನದ’ ಮುಚ್ಚಿದ ಬಾಗಿಲು’ ತೆರೆಯಲು ಪ್ರಾರ್ಥಿಸಿ ಉಡುಪಿಕೃಷ್ಣ ನ ‘ಸೇವೆ’ ಯನ್ನು ಬೇಡುವ ಕನಕದಾಸರು

ಕನಕ ವಿಚಾರ ಮಂಥನ ೧೭

ದೇವಸ್ಥಾನದ’ ಮುಚ್ಚಿದ ಬಾಗಿಲು’ ತೆರೆಯಲು ಪ್ರಾರ್ಥಿಸಿ ಉಡುಪಿಕೃಷ್ಣ ನ ‘ಸೇವೆ’ ಯನ್ನು ಬೇಡುವ ಕನಕದಾಸರು

                          ಮುಕ್ಕಣ್ಣ ಕರಿಗಾರ

        ಕನಕದಾಸರು ಕೃಷ್ಣನ ದರ್ಶನಕ್ಕೆಂದು ಉಡುಪಿಯ ಕೃಷ್ಣ ಮಂದಿರಕ್ಕೆ ಬಂದಾಗ ಮಡಿವಂತ ಬ್ರಾಹ್ಮಣರು ಕನಕದಾಸರು ಕೃಷ್ಣದೇಗುಲದತ್ತ ಬರುವುದನ್ನು ತಡೆದು ನಿಂದಿಸಿ ನುಡಿದು ಹೊಡೆದಟ್ಟುತ್ತಾರೆ.ಮತ್ತೆ ಎಲ್ಲಿಯಾದರೂ ಈ ಶೂದ್ರ ಮಂದಿರವನ್ನು ಪ್ರವೇಶಿಸಿಯಾನು ಎನ್ನುವ ಲೆಕ್ಕಾಚಾರದಲ್ಲಿ ಕೃಷ್ಣ ಮಂದಿರಕ್ಕೆ ಬೀಗ ಜಡಿದು ತಮ್ಮ ಮನೆಗಳಿಗೆ ತೆರಳುತ್ತಾರೆ. ಕನಕದಾಸರು ತಮ್ಮ ಒಡೆಯ ಕೃಷ್ಣನನ್ನು ಪರಿಪರಿಯಾಗಿ ಸ್ತುತಿಸಿ,ಕರೆದು ತಾವು ನಿಂತಿದ್ದ ಪಶ್ಚಿಮ ದಿಕ್ಕಿಗೆ ಕೃಷ್ಣನನ್ನು ತಿರುಗಿಸಿ ದರ್ಶನ ಪಡೆಯುತ್ತಾರೆ.ಅದು ಭಕ್ತ ಭಗವಂತರಿಬ್ಬರ ನಡುವಿನ ಅನೋನ್ಯ,ಆತ್ಮಾನುಬಂಧದ ಸಂಬಂಧ,ಲೌಕಿಕಾರ್ಥಕ್ಕೆ ಎಟುಕದ ದಿವ್ಯಾನುಭೂತಿ.’ ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ,ಕೂಗಿದರು ಧ್ವನಿ ಕೇಳಲಿಲ್ಲವೆ ನರಹರಿಯೆ’ ಎನ್ನುವ ಕೀರ್ತನೆಯನ್ನು ಭಾವಪರವಶರಾಗಿ ಹಾಡಿದಾಗ ಕನಕದಾಸರಿಗೆ ಉಡುಪಿಯ ಕೃಷ್ಣನು ದರ್ಶನ ನೀಡುತ್ತಾನೆ.

 

ಕನಕದಾಸರ ಈ ಕೀರ್ತನೆಯು ಧ್ವನಿಪೂರ್ಣವಾಗಿದೆ,ಅರ್ಥಪೂರ್ಣವಾಗಿದೆ,ಮಹತ್ವದ್ದು ಆಗಿದೆ.ಕನಕದಾಸರು ಈ ಕೀರ್ತನೆಯಲ್ಲಿ ಉಡುಪಿಯ ಕೃಷ್ಣನನ್ನು ಬಾಗಿಲನ್ನು ತೆರೆದು ಸೇವೆಯನು ಕೊಡಲು ಪ್ರಾರ್ಥಿಸುತ್ತಾರೆ.ಅಂದರೆ ಕೃಷ್ಣಮಂದಿರದ ಮುಚ್ಚಿದ ಬಾಗಿಲನ್ನು ತೆರೆದು ದರ್ಶನ ನೀಡಲು ಆಗ್ರಹಿಸುತ್ತಿದ್ದಾರೆ.ಕನಕದಾಸರು ಮಂದಿರದ ಒಳಪ್ರವೇಶಿಸಬಹುದು ಎನ್ನುವ ಮುಂದಾಲೋಚನೆಯಿಂದ ಮಡಿವಂತ ಅರ್ಚಕ ಬ್ರಾಹ್ಮಣರು ಕೃಷ್ಣಮಂದಿರದ ಬಾಗಿಲು ಹಾಕಿ ಬೀಗ ಜಡಿದು ಹೋಗಿದ್ದಾರೆ. ಶೂದ್ರರಾದ ಕನಕದಾಸರಿಗೆ ಕೃಷ್ಣ ಮಂದಿರದಲ್ಲಿ ಪ್ರವೇಶಿಸುವ ಹಕ್ಕು ಇಲ್ಲ ಎನ್ನುವ ಧಾರ್ಮಿಕ ಅಧಿಕಾರವನ್ನು ಚಲಾಯಿಸಿದ್ದಾರೆ ಬ್ರಾಹ್ಮಣ ಅರ್ಚಕರು. ಶೂದ್ರರು ಮತ್ತು ದಲಿತರಿಗೆ ದೇವಸ್ಥಾನಗಳನ್ನು ಪ್ರವೇಶಿಸುವ ಧಾರ್ಮಿಕ ಹಕ್ಕನ್ನು ಕಸಿದುಕೊಂಡ ಅಮಾನವೀಯ ಆಚರಣೆಯ ಸಂಕೇತ ಇದು.ಪುರೋಹಿತಶಾಹಿಯು ಧರ್ಮ ದೇವರುಗಳ ಮೇಲೆ ತಮ್ಮ ಅಧಿಪತ್ಯಸ್ಥಾಪಿಸಿ ಮೆರೆಯುತ್ತಿದ್ದುದರ ನಿದರ್ಶನ. ಇಂದಿಗೂ ಅಲ್ಲಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆಯ ಸುದ್ದಿಗಳು ವರದಿಯಾಗುತ್ತಿರುತ್ತವೆ.

ಭಾರತದ ಧಾರ್ಮಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಶೂದ್ರರು,ದಲಿತರಿಗೆ ಯಾವ ಬೆಲೆಯೂ ಇರಲಿಲ್ಲ ಹಿಂದೆ.ದೇವಸ್ಥಾನಗಳ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಲಾಗಿತ್ತು ಶೂದ್ರರು ಮತ್ತು ದಲಿತರಿಗೆ.ಬ್ರಾಹ್ಮಣರು, ಕ್ಷತ್ರಿಯರೆಂದು ಹೇಳಿಕೊಳ್ಳುತ್ತಿದ್ದ ಆಳರಸರುಗಳು ಮತ್ತು ಮೇಲ್ವರ್ಗದ ಕೆಲವೇ ಜಾತಿಗಳ ಜನರಿಗೆ ಮಾತ್ರ ದೇವಸ್ಥಾನಗಳ ಪ್ರವೇಶದ ಹಕ್ಕು, ಅಧಿಕಾರ ಇತ್ತು.ಶೂದ್ರರು,ದಲಿತರು ದೇವಸ್ಥಾನಗಳ ಅಂಗಳದ ಕಸಹೊಡೆಯುವ,ದೇವಸ್ಥಾನಗಳಿಗೆ ಕಟ್ಟಿಗೆ ತರುವ,ಕಲ್ಲುಹೊರುವ ಕೆಲಸದಲ್ಲಿ ಮಾತ್ರ ಸಾರ್ಥಕತೆ ಕಾಣಬೇಕಿತ್ತು,ಧನ್ಯತೆ ಮೆರೆಯಬೇಕಿತ್ತು.ಶೂದ್ರರು,ದಲಿತರಿಗೆ ದೇವಮಂದಿರಗಳಿಗೆ ಪ್ರವೇಶಿಸುವ ಹಕ್ಕು ಏಕೆ ದೇವರ ನಾಮವನ್ನು ಸಹ ಸ್ಮರಿಸುವ ಅಧಿಕಾರ ಇರಲಿಲ್ಲ. ತಳಸಮುದಾಯಗಳ ಜನರು ದೇವರ ನಾಮ ಸ್ಮರಿಸಿದರೆ ಪವಿತ್ರನಾದ ದೇವರು ಅಪವಿತ್ರನಾಗುತ್ತಾನೆ ಎನ್ನುವ ಕೊಳಕುಬುದ್ಧಿಯ ಜನ ಕೆಳವರ್ಗದ ಜನತೆ ದೇವರ ನಾಮಸ್ಮರಣೆ ಮಾಡದಂತೆ ನಿರ್ಬಂಧ ವಿಧಿಸಿದ್ದರು.ದೇವರ ನಾಮ ಜಪಿಸಿದ ಹಲವರು ಹಿಂದೆ ನಿರ್ದಯಿಮನುಷ್ಯರ ಕ್ರೌರ್ಯಕ್ಕೆ ಬಲಿಯಾದದ್ದೂ ಉಂಟು.ಮಹಾಕವಿ ಕುವೆಂಪು ಅವರ ‘ ಶೂದ್ರತಪಸ್ವಿ’ ನಾಟಕವು ಶೂದ್ರರು ಧಾರ್ಮಿಕ ಹಕ್ಕಿನಿಂದ ವಂಚಿತರಾಗಿದ್ದ ಅಂದಿನ ಸಮಾಜದ ಪುರೋಹಿತರ ಮತ್ತು ಪಟ್ಟಭದ್ರರ ಕಾಪಟ್ಯವನ್ನು ಚಿತ್ರಿಸುವ,ಸಾರ್ವಕಾಲಿಕ ಸಂದೇಶವನ್ನು ಸಾರುವ ನಾಟಕ.ಶಂಭೂಕ ವಧೆಯು ತಳಸಮುದಾಯಗಳ ಧಾರ್ಮಿಕ ಹಕ್ಕಿನ ಮೇಲೆ ಮೇಲ್ವರ್ಗದವರ ಪೈಶಾಚಿಕ ಕೃತ್ಯ,ಧರ್ಮಸ್ವಾತಂತ್ರದ ಮೇಲಿನ ಹಲ್ಲೆ,ದೌರ್ಜನ್ಯ.

ಕನಕದಾಸರಿಗೆ ಭಾರತೀಯ ಜಡಸಮಾಜದ ದರ್ಪ- ದೌರ್ಜನ್ಯಗಳ ಪರಿಚಯ ಚೆನ್ನಾಗಿ ಇದೆ.ವಿಜಯನಗರದ ಅರಸರ ಡಣ್ಣಾಯಕರಾಗಿದ್ದ ಅವರಿಗೆ ಪುರೋಹಿತರ ಪ್ರಾಬಲ್ಯ, ಮೆದುಳಿಲ್ಲದ ತಲೆಗಳ,ಬುದ್ಧಿಶೂನ್ಯ ಅರಸರುಗಳ ದರ್ಪ ಚೆನ್ನಾಗಿ ತಿಳಿದಿದೆ.ಕನಕದಾಸರು ಇಲ್ಲಿ ಉಡುಪಿಯ ಕೃಷ್ಣನನ್ನು ಮುಚ್ಚಿದ ಬಾಗಿಲನ್ನು ತೆರೆ ಎಂದು ಪ್ರಾರ್ಥಿಸುವ ಕಾರಣ ದೇವರಿಂದ ಮಾತ್ರ ಅಸಮಾನತೆಯ ಈ ಸಾಮಾಜಿಕ ವಾತಾವರಣವನ್ನು ಸುಧಾರಿಸಲು,ತಿದ್ದಲು ಸಾಧ್ಯ ಎನ್ನುವ ಅವರ ನಂಬಿಕೆ.ಪುರೋಹಿತರು ಪಟ್ಟಭದ್ರರು ಒಟ್ಟಾಗಿ,ಗುಟ್ಟಿನಿಂದ ಸಾಧಿಸುತ್ತಿದ್ದ ಧಾರ್ಮಿಕ ಅಧಿಕಾರವನ್ನು ತಳಸಮುದಾಯಗಳ ಜನರು ಪಡೆಯುವುದು ಅಸಾಧ್ಯದ ಮಾತು ಎಂದೇ ಕನಕದಾಸರು ತಮ್ಮ ಒಡೆಯ ಹರಿಯನ್ನು ಪ್ರಾರ್ಥಿಸುತ್ತಿದ್ದಾರೆ ‘ಮುಚ್ಚಿದಬಾಗಿಲನ್ನು ತೆರೆ’ ಎಂದು. ಅಂದರೆ ದೇವರೇ ಈ ಬ್ರಾಹ್ಮಣರಿಗೆ ಸದ್ಬುದ್ಧಿಯನ್ನು ಕೊಡಬೇಕು ಇಲ್ಲವೆ ಸರ್ವಶಕ್ತನಾದ ಭಗವಂತನೇ ಸಾಮಾಜಿಕ ಅಸಮಾನತೆಯ ವಿಷಮಯ ಪರಿಸ್ಥಿತಿಯನ್ನು ಬದಲಾಯಿಸಬೇಕು ಎನ್ನುವ ಭಾವನೆ ಅವರದ್ದು.

ಕೀರ್ತನೆಯ ಪಲ್ಲವಿಯಲ್ಲಿ ಕನಕದಾಸರು ಉಡುಪಿಯ ಕೃಷ್ಣನನ್ನು ಬಾಗಿಲನು ತೆರೆದು ‘ ಸೇವೆ’ ಯನ್ನು ಕೊಡು ಎಂದು ಪ್ರಾರ್ಥಿಸುತ್ತಿದ್ದಾರೆಯೇ ಹೊರತು ಪೂಜೆಯನ್ನು ಸ್ವೀಕರಿಸು, ನಿನ್ನ ಪೂಜೆಯನ್ನು ಮಾಡುವೆ ಎಂದು ಪ್ರಾರ್ಥಿಸುತ್ತಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.ಶೂದ್ರರಿಗೆ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಇದ್ದದ್ದು ‘ಸೇವೆಯ ಭಾಗ್ಯ’ ಮಾತ್ರ.ಚಾತುರ್ವರ್ಣ ವ್ಯವಸ್ಥೆಯಲ್ಲಿ ಪಾದಗಳಾಗಿದ್ದ ಶೂದ್ರರು ಮೇಲ್ವರ್ಗದವರ ಸೇವೆ- ಶುಶ್ರೂಷೆಗಳಲ್ಲಿಯೇ ಜೀವನದ ಸಾರ್ಥಕತೆಯನ್ನು ಕಾಣಬೇಕಾಗಿದ್ದವರು.ಸಹಸ್ರಾರು ವರ್ಷಗಳಿಂದ ರೂಢಿಯಲ್ಲಿರುವ ಸೇವಕತನದ ಅನಿವಾರ್ಯತೆಯು ಕನಕದಾಸರಲ್ಲಿ ಸಹಜವಾಗಿ ಹೊರಹೊಮ್ಮಿದೆ.ಕನಕದಾಸರು ‘ಸೇವೆಯನು ಕೊಡು’ ಎಂದು ಪ್ರಜ್ಞಾಪೂರ್ವಕವಾಗಿ ಕೃಷ್ಣನನ್ನು ಪ್ರಾರ್ಥಿಸಿಲ್ಲ.ಅವರು ಅರಿಯದಂತೆ ಅವರ ಬಾಯಿಂದ ಬಂದ ಈ ಮಾತು ಜಡಸಾಮಾಜಿಕ ವ್ಯವಸ್ಥೆಯಲ್ಲಿ ಶೂದ್ರರು ಧಾರ್ಮಿಕ ಹಕ್ಕುಗಳಿಂದ ವಂಚಿತರಾಗಿದ್ದ ಕ್ರೌರ್ಯದ ನಿದರ್ಶನ.ಬಾಯಿಸತ್ತ ಜನರ,ಧ್ವನಿ ಅಡಗಿದ,ಧ್ವನಿ ಉಡುಗಿದ ಬವಣೆಯ ಸಂಕೇತ.ದೇವರ ಪೂಜೆಯ ಹಕ್ಕು ಏನಿದ್ದರೂ ಮೇಲ್ವರ್ಗದವರದ್ದು,ಸೇವಿಸುವ ಸೌಭಾಗ್ಯ ಮಾತ್ರ ಶೂದ್ರರದ್ದು.ಶೂದ್ರಪ್ರಜ್ಞೆಯ ಅಸಹಾಯಕ ನೋವು ಕನಕದಾಸರ ಪ್ರಾರ್ಥನೆಯ ಹಿಂದೆ ಇದೆ.

ಕೀರ್ತನೆಯ ಪಲ್ಲವಿಯ ಎರಡನೇ ಸಾಲಿನಲ್ಲಿ ಕನಕದಾಸರು ‘ ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ’ ಎಂದು ತಮ್ಮ ಒಡೆಯ ಹರಿಯನ್ನು ಪ್ರಶ್ನಿಸುತ್ತಾರೆ.ಶೂದ್ರನಾದ ನಾನು ನಿನ್ನ ಪೂಜೋಪಚಾರಗಳನ್ನು ಅರಿಯೆನು,ಮಂತ್ರ ತಂತ್ರಗಳನ್ನು ಬಲ್ಲವನಲ್ಲ.ವೇದ ಓದಲು ಬಾರದ ನಾನು ನಿನ್ನ ಸ್ವಸ್ತಿವಾಚನ ಮಾಡಲಾರೆ,ಮಂತ್ರಘೋಷ ಹೇಳಲಾರೆ.ಋಕ್ಕುಗಳನ್ನು ಪಠಿಸಲಾರೆ,ಸೂಕ್ತಗಳನ್ನು ಅರ್ಥೈಸಲಾರೆ,ಗೀತಗಳನ್ನು ಹಾಡಲಾರೆ‌.ನನ್ನದೇನಿದ್ದರೂ ಕೂಗಿ ಕರೆಯುವ ಕೆಲಸ.ನಿನ್ನ ನಾಮಗಳನ್ನು ಕೂಗಿ ಕೆರಯುವ ಮೂಢಭಕ್ತಿ ಮಾತ್ರ ನನ್ನದು.ಹಾಗಾಗಿ ನಾನು ನಿನ್ನನ್ನು ‘ ಕೃಷ್ಣನೆ,ನನ್ನ ಒಡೆಯನೆ’ ಎಂದು ಕೂಗಿಕರೆಯುತ್ತಿದ್ದೇನೆಯೇ ಹೊರತು ನಿನ್ನ ಸ್ತೋತ್ರಗಳನ್ನು ಪಠಿಸಲಾರೆನು,ಷೋಡಶೋಪಚಾರ,ಅಷ್ಟೋಪಚಾರ ಪೂಜೆಗಳನ್ನರಿಯೆನು ಎನ್ನುತ್ತಾರೆ. ಧಾರ್ಮಿಕ ಹಕ್ಕಿನಿಂದ ವಂಚಿತರಾದ,ದೇವರ ನಾಮವನ್ನು ಸ್ಮರಿಸಲು ಅಧಿಕಾರವಿಲ್ಲದ ಜನರಿಗೆ ದೇವರ ಸುಂದರಹೊಗಳಿಕೆ,ಬಣ್ಣಕಟ್ಟಿದ ನಾಮಗುಣವಿಶೇಷಗಳ ಪರಿಚಯವಾದರೂ ಹೇಗಿರುತ್ತದೆ ? ಹಾಗಾಗಿ ಕೂಗಿಕರೆಯುವ ಕೆಲಸವಷ್ಟೇ ಮಾಡಬಲ್ಲರು ಶೂದ್ರರು.ನಾನು ಅಷ್ಟುಹೊತ್ತಿನಿಂದ ನಿನ್ನನ್ನು ಕೂಗಿ ಕರೆಯುತ್ತಿದ್ದರೂ ನನ್ನ ಧ್ವನಿ ಕೇಳಲಿಲ್ಲವೆ ಹರಿಯೆ ನಿನಗೆ ಎನ್ನುವ ಕನಕದಾಸರ ಪ್ರಶ್ನೆಯಲ್ಲಿ ಪರಮಾತ್ಮನಾದ ನೀನೂ ಬ್ರಾಹ್ಮಣರ ವೇದಮಂತ್ರಗಳಿಗೆ ಕಟ್ಟುಬಿದ್ದಿದ್ದಿ ಏನು ಎಂದು ಕೆಣಕುವ ಭಾವವಿದೆ.ಪರಮಾತ್ಮನು ಭಕ್ತರ ಕೂಗಿನ ಆರ್ತತೆಗೆ ಓಗೊಡುವ ಕರುಣಾಮಯಿಯೇ ಹೊರತು ವೇದಘೋಷಗಳ ಶಾಸ್ತ್ರೋಪಚಾರದ ಪೂಜೆಯ ಹಂಗಿಗನಲ್ಲ ಎನ್ನುವ ಆಧ್ಯಾತ್ಮಿಕ ಸೂತ್ರವನ್ನು ಬಲ್ಲ ಕನಕದಾಸರು ನನ್ನ ಕೂಗಿನ ಆರ್ತತೆಯನ್ನು,ನನ್ನ ಕರೆಯ ಕಳಕಳಿಯನ್ನು ಅರ್ಥಮಾಡಿಕೊ ಎಂದು ಪ್ರಾರ್ಥಿಸುತ್ತಿದ್ದಾರೆ‌.

ಪಲ್ಲವಿಯ ಮೊದಲಸಾಲಿನಲ್ಲಿ ‘ ಬಾಗಿಲನು ತೆರೆದು ಸೇವೆಯನು ಕೊಡು’ ಎಂದು’ ಹರಿ’ ಯನ್ನು ಪ್ರಾರ್ಥಿಸುವ ಕನಕದಾಸರು ಪಲ್ಲವಿಯ ಎರಡನೇ ಸಾಲಿನಲ್ಲಿ ‘ ಕೂಗಿದರು ಧ್ವನಿ ಕೇಳಲಿಲ್ಲವೇ ‘ ನರಹರಿಯೆ’ ಎನ್ನುತ್ತಾರೆ.ಹರಿ ಮಹಾವಿಷ್ಣುವಾದರೆ ನರಹರಿಯು ವಿಷ್ಣುವಿನ ಅವತಾರವಾದ ನರಸಿಂಹನು.ಹರಿಯು ತನ್ನ ಪರಮಾತ್ಮಸ್ವರೂಪದಲ್ಲಿ ಲೋಕವ್ಯವಹಾರದಲ್ಲಿ ಆಸಕ್ತನಾಗಲಾರ.ಆದರೆ ನರಸಿಂಹನು ದುಷ್ಟನಿಗ್ರಹ ಕಾರ್ಯಕ್ಕೆ ಅವತರಿಸಿದ ಲೋಕರಕ್ಷಕ.ಸ್ತುತಿಪ್ರಿಯನಾಗಿ ವೇದಮಂತ್ರಗಳನ್ನು ಕೇಳುತ್ತ ವೈಕುಂಠದಲ್ಲಿ ನಿದ್ರಿಸುವ ಹರಿಗಿಂತ ಭಕ್ತನ ಕೂಗಿನ ಆರ್ತತೆಯ ಧ್ವನಿಕೇಳಿ ಅವತರಿಸುವ ನರಸಿಂಹನೇ ಪ್ರಿಯನಾಗುತ್ತಾನೆ ಕನಕದಾಸರಿಗೆ.ಬಾಲಕ ಪ್ರಹ್ಲಾದನ ಮುಗ್ಧಭಕ್ತಿ ಮತ್ತು ನಂಬಿಕೆಯನ್ನು ದಿಟಗೊಳಿಸಲು ಹರಿಯು ನರಸಿಂಹನಾಗಿ ಕಂಬದಿಂದ ಹೊರಬಂದ ಲೀಲೆಯ ಪ್ರಭಾವ ಕನಕದಾಸರ ಮೇಲೆ ಸಾಕಷ್ಟು ಆಗಿದೆ ಎಂತಲೇ ಅವರು ತಮ್ಮ ಕೀರ್ತನೆಗಳಲ್ಲಿ ನರಸಿಂಹನನ್ನು ವಿಶೇಷವಾಗಿ ಪ್ರಾರ್ಥಿಸುತ್ತಾರೆ.ಹರಿಯ ಮೂಲತತ್ತ್ವ ಮತ್ತು ಧರೆಯನ್ನು ಉದ್ಧರಿಸುವ ಅವತಾರದ ತತ್ತ್ವಗಳೆರಡರ ವಿವೇಚನೆಯು ಇಲ್ಲಿದೆ.

 

              ೦೯.೦೪.೨೦೨೬