ಶಹಾಪುರ,,
ಅಮೆರಿಕ-ಭಾರತ ವ್ಯಾಪಾರ ಒಪ್ಪಂದವು ಕೃಷಿ ಕ್ಷೇತ್ರಕ್ಕೆ ಮಾರಕವಾಗಿದ್ದು ದೇಶದ ಆರ್ಥಿಕ ಹಿತಾಸಕ್ತಿಯನ್ನು ಬಲಿಕೊಟ್ಟು ಅಮೆರಿಕಕ್ಕೆ ಶರಣಾಗುವ ತಂತ್ರವಾಗಿದೆ.ಅಮೆರಿಕದ ಉತ್ಪನ್ನಗಳಿಗೆ ತೆರೆದಿಡುವ ಮೂಲಕ ದೇಶದ ರೈತರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ. ಇದು ಅಮೆರಿಕಕ್ಕೆ ಶರಣಾಗುವ ಗುಲಾಮಗಿರಿಯ ಸಂಕೇತ ಎಂದು ಗೋ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮಲ್ಲಿಕಾರ್ಜುನ ಚಾಗನೂರ ಉಭಯ ದೇಶಗಳ ಒಪ್ಪಂದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಭೀಮರಾಯನ ಗುಡಿ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ರಾಷ್ಟ್ರೀಯ ಕಿಸಾನ್ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿರುವ ಜಾಗೃತಿ ಅಧಿವೇಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಒಪ್ಪಂದಗಳು ಪರಸ್ಪರ ಪ್ರಯೋಜನಗಳಲ್ಲಿ ಸಮಾನತೆಯನ್ನು ಆಧರಿಸಿರಬೇಕು.ನಮ್ಮ ಆಡಳಿತಗಾರರು ಅಮೆರಿಕದೊಂದಿಗೆ ಸಹಿ ಮಾಡಿದ ತಾತ್ಕಾಲಿಕ ವ್ಯಾಪಾರ ಒಪ್ಪಂದವು ಟ್ರಂಪ್ ಅವರನ್ನು ಮೆಚ್ಚಿಸಲು ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತೋರುತ್ತದೆ.ಭಾರತ, ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ,ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿರುವುದು ಖಂಡಿತ. ಭಾರತೀಯರಿಗೆ, ಮುಖ್ಯವಾಗಿ ದೇಶದ ರೈತ ಸಮುದಾಯಕ್ಕೆ ಆಗುತ್ತಿರುವ ನಷ್ಟವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ. ಭಾರತಕ್ಕೆ ಹೋಲಿಸಿದರೆ ಅತೀ ಹೆಚ್ಚಿನ ಪ್ರಮಾಣದ ಸಬ್ಸಿಡಿ ಪಡೆಯುತ್ತಿರುವ ಅಮೆರಿಕದ ರೈತರು ಭಾರತದ ಕೃಷಿ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಿದೆ ಎಂದರು.
ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಲೆಬಾಗಿರುವ ಪ್ರಧಾನಿ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ಕೈಬಿಟ್ಟು ಅಮೆರಿಕ ಮತ್ತು ವೆನಿಜುವೆಲಾ ದೇಶಗಳಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ಈ ಒಪ್ಪಂದದ ಮುಖ್ಯಾಂಶವಾಗಿದೆ. ಇದು ಭಾರತದ ಸಂಪೂರ್ಣ ಶರಣಾಗತಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಏರಿಕೆಯಾಗಲಿದ್ದು ಅದರ ಪರಿಣಾಮವಾಗಿ ಉಳಿದ ಅಗತ್ಯ ವಸ್ತುಗಳು ಕೂಡಾ ದುಬಾರಿಯಾಗಲಿದೆ. ಆದರೆ ಭಾರತೀಯ ರೈತರ ಪಾಲಿಗೆ ಇದು ಅಸಾಧ್ಯ ಅಗಸ್ಟ 15ರಂದು ದೇಶದ ಪ್ರಧಾನ ಮಂತ್ರಿ ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜ ಸಾಕ್ಷಿಯಾಗಿ ರೈತರಿಗೆ ನೀಡಿದ ಭರವಸೆ ಏನಾಯಿತು.? ಹತ್ತಿಯ ಮೇಲಿನ ಶೇಕಡ 11ರಷ್ಟು ಆಮದು ಸುಂಕವನ್ನು ಮೂರನೇ ದಿನ ತೆಗೆದುಹಾಕಿ ನಮ್ಮ ಹತ್ತಿ ಬೆಳೆಯುವ ರೈತರನ್ನು ಮಣ್ಣುಮುಕ್ಕಿಸಿದ ನಂತರವೂ ನಾವು ಅದನ್ನು ಹೇಗೆ ನಂಬುವುದು.? ಈ ದೇಶದ ಕೋಟ್ಯಾಂತರ ರೈತ ಕುಟುಂಬಗಳ ಪರವಾಗಿ ಸಂಯುಕ್ತ ಕಿಸಾನ್ ಮೋರ್ಚ ಈ ಒಪ್ಪಂದಕ್ಕೆ ತನ್ನ ವಿರೋಧವನ್ನು ಘೋಷಿಸಿದೆ. ಘೋಷಿಸಿದ ಕೆಲವೇ ಗಂಟೆಗಳಲ್ಲಿ ಬೇಳೆಕಾಳುಗಳನ್ನು ತೆಗೆದುಹಾಕಿ ಎಂದು ಹೇಳಲು ಶ್ವೇತ ಭವನದಿಂದ ಫ್ಯಾಕ್ಟಶೀಟ್ ಗಳನ್ನು ಬಿಡುಗಡೆಗೊಳಿಸಲಾಯಿತು ಎಂದರು.
ಜಾಗೃತಿ ಅಧಿವೇಶನವನ್ನು ದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲೆ ಅಧ್ಯಕ್ಷ ಮಾಧವ್ ರೆಡ್ಡಿ ಅವರು, ವೆನೇಜು ವೆಲಾ ಮತ್ತು ಇರಾನ್ ವಿರುದ್ಧ ಅಮೆರಿಕ ಮಾಡುತ್ತಿರುವುದು ಸೈನಿಕ ದುರಕ್ರಮಣವನ್ನು ಯುದ್ಧ ಎಂದು ಹೇಳುವದಾದರೆ ಭಾರತ ಮತ್ತು ಇರಾನ್ ಬಾಂಗ್ಲಾದೇಶ ದಂತಹ ದೇಶಗಳ ಆಕ್ರಮಣಕಾರಿ ಆರ್ಥಿಕ ಮತ್ತು ವಾಣಿಜ್ಯ ಯುದ್ಧ ಸೇಬು, ಕಿತ್ತಾಳೆ,ಸೋಯಾಬೀನ್ ಎಣ್ಣೆ, ಜೋಳ ಹಾಲು ಡೈರಿ ಉತ್ಪನ್ನಗಳು ಮೇವು ಎಥೇನಾಲ್ ಇತ್ಯಾದಿಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕುವ ಈ ಮಧ್ಯಂತರ ಒಪ್ಪಂದವು ಅತ್ಯಂತ ಹಾನಿಕಾರಕವಾಗಿದೆ. ಮಾರ್ಪಡಿಸಿದ ಬೀಜ ತಳಿಗಳ ಮೂಲಕ, ಬೃಹತ್ ಸರಕಾರಿ ಸಬ್ಸಿಡಿಗಳನ್ನು ಪಡೆಯುವ ಮೂಲಕ ಅಮೆರಿಕವು ತನ್ನ ಕಾರ್ಪೊರೇಟರ್ ರೈತರ ಪ್ರಯೋಜನಕ್ಕಾಗಿ ನಮ್ಮ ಬಡ ರೈತ ಮತ್ತು ಜನರು ತಮ್ಮ ಬದುಕನ್ನು ಕಳೆದುಕೊಳ್ಳಬೇಕೆ ? ಲಕ್ಷಾಂತರ ಎಕರೆ ಭೂಮಿಯನ್ನು ಹೊಂದಿ ಕೋಟ್ಯಾಂತರ ರೂಪಾಯಿ ಸಬ್ಸಿಡಿಗಳನ್ನು ಪಡೆಯುವ ಅಮೆರಿಕ ಕಾರ್ಪೊರೇಟ್ ಕಂಪನಿಗಳು ಬೆಳೆದ ಎಲ್ಲಾ ರೀತಿಯ ಕಸವನ್ನು ಆಮದು ಮಾಡಿಕೊಳ್ಳುವುದರಿಂದ ನಮ್ಮ ರೈತರ ಮತ್ತು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ದೇಶದ ಜನರ ಬದುಕಿನ ಮೇಲೆ ಚಪ್ಪಡಿ ಕಲ್ಲು ಎಳೆದಂತಾಗುತ್ತದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ.ಜಾಗತಿಕವಾಗಿ ಭಾರತ ಹಿಂದೆಂದೂ ಇಷ್ಟೊಂದು ದುರ್ಬಲವಾಗಿರಲಿಲ್ಲ. ರಾಜತಾಂತ್ರಿಕವಾಗಿ ಎದುರಾಗುವ ಒತ್ತಡಗಳನ್ನು ಇಲ್ಲಿಯ ವರೆಗಿನ ಎಲ್ಲ ಪ್ರಧಾನಿಗಳು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದರು.ಈ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಎಐಕೆಎಂಕೆಎಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಹರಿ ಅವರು, ಅಮೆರಿಕದ ಡಾಲರ್ ಪ್ರಾಬಲ್ಯವನ್ನು ವಿರೋಧಿಸಿ, ಡಿ-ಡಾಲರೈಸೇಶನ್ ಅಳವಡಿಸಿಕೊಂಡ ರಷ್ಯಾ, ಇರಾನ್, ವೆನೆಜುವೆಲಾ, ಚೀನಾ ಮುಂತಾದ ದೇಶಗಳು ಅಮೆರಿಕದಿಂದ ಕಠಿಣ ಆರ್ಥಿಕ ನಿರ್ಬಂಧಗಳು, ಆಸ್ತಿ ಮುಟ್ಟುಗೋಲು, ವ್ಯಾಪಾರ ತಡೆಗಳು ಮತ್ತು ಹೆಚ್ಚಿದ ರಾಜತಾಂತ್ರಿಕ ಒತ್ತಡಗಳನ್ನು ಎದುರಿಸುತ್ತಿವೆ. ಈ ದೇಶಗಳು ತಮ್ಮ ಸ್ವಂತ ಕರೆನ್ಸಿಗಳಲ್ಲಿ
ವ್ಯಾಪಾರ ನಡೆಸಿ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಇದರಿಂದ ಅಮೆರಿಕ ವಿಚಲಿತವಾಗಿ ತನ್ನ ಪ್ರಾಬಲ್ಯ ಹೇರುತ್ತಿದೆ.ಪ್ರಧಾನಿ ನರೇಂದ್ರ ಮೋದಿ ಕಣ್ಣಲ್ಲಿ ಭಯ ಕಾಣುತ್ತಿದೆ. ಈ ಒಪ್ಪಂದದ ಬಳಿಕ ಅಮೆರಿಕದ ಆಮದು 46 ಬಿಲಿಯನ್ ಡಾಲರ್‌ಗಳಿಂದ 146 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಲಿದೆ. ಆದರೆ, ಅಮೆರಿಕಕ್ಕೆ ಭಾರತದ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಆದರೆ ಭಾರತಕ್ಕೆ ಅಮೆರಿಕದ ಬದ್ಧತೆ ಇದೆ. ನಾವು ಮೂರ್ಖರಂತೆ ನಿಂತಿದ್ದೇವೆ.ಭಾರತವು ಪ್ರತಿವರ್ಷ 29 ಲಕ್ಷ ಕೋಟಿ ಮೌಲ್ಯದ ಅಮೆರಿಕ ಉತ್ಪನ್ನಗಳನ್ನು ಖರೀದಿಸಲಿದೆ ಎಂದು ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭರವಸೆ ನೀಡಿದ್ದಾರೆ. ಈ ಒಪ್ಪಂದವು ಭಾರತೀಯ ರೈತರನ್ನು ನಾಶ ಮಾಡಲಿದೆ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ, ಹಿರಿಯ ರೈತ ಮುಖಂಡ ಮಲ್ಲಣ್ಣ ಪರಿವಾಣ, ನ್ಯಾಯವಾದಿ ಉಮೇಶ್ ಮುಡಬೂಳ, ಪತ್ರಕರ್ತ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿದರು. ಯುವ ವಕೀಲರಾದ ಅಮರೇಶ ಇಟ್ಟಿಗಿ, ಶರಣಪ್ಪ ಪ್ಯಾಟಿ, ಮಲ್ಲಿಕಾರ್ಜುನ ಮಕ್ತಾಪುರ, ಸುಭಾಷ ರಾಂಪುರೆ, ಅರವಿಂದ ಮುಡಬೂಳ, ಹಿರಿಯ ಪತ್ರಕರ್ತ ಬಸವರಾಜ ಕರೆಗಾರ, ರೈತ ಮುಖಂಡರಾದ ಭೀಮಣ್ಣ ಯಾದಗಿರಿ ಶಿರವಾಳ, ನಿಂಗಣ್ಣ ಗೋಪಾಲಿ, ದೇವರಾಜ್ ನಾಯಕ್, ತುಳಿಜಾ ರಾಮ್, ಗುರುಬಸಪ್ಪ ಹಾಲ್‌ರ, ಸಿದ್ದಣ್ಣ ಹವಾಲ್ದಾರ್, ವೆಂಕಟೇಶ ಹವಲ್ದಾರ್. ಪ್ರಕಾಶ್ ಕುಲಕರ್ಣಿ ಮದ್ರಿಕಿ ಕೆಪಿಆರ್‌ಎಸ್ ಪಕ್ಷ, ಸಿರಾಜುದ್ದೀನ್ ಪಟೇಲ್ ಅಭಿಶಾಳ, ಬೀರಪ್ಪ ಪೂಜಾರಿ, ಭೀಮಣ್ಣ ಪೂಜಾರಿ, ಶರಣಪ್ಪ ಕಣಜಿಗಿ, ಭಾಷಾಭಿದರಾಣಿ, ಸಮೀರ್ ದೋರನಹಳ್ಳಿ, ಹನುಮಂತರಾಯ ಬಿದರಾಣಿ. ಶ್ರೀನಿವಾಸ್ ಹವಲ್ದಾರ್, ಲಿಂಗಯ್ಯ, ಚಂದ್ರಶೇಖರ್ ನಾಯ್ಕಲ್ ಸೇರಿದಂತೆ ಇತರರು ಇದ್ದರು.