ಕನಕ ವಿಚಾರಮಂಥನ 14

ಅನುಭಾವಿಗಳನ್ನು ಗೌರವಿಸದ ಮನುಷ್ಯಸಮಾಜ ‘ಭವಿ’ ಗಳನ್ನು ಹೊತ್ತು ಮೆರೆಸುತ್ತದೆ ! : ಮುಕ್ಕಣ್ಣ ಕರಿಗಾರ
*************
ಭಾರತದಲ್ಲಿ ದೇವರು ಧರ್ಮಗಳ ಹೆಸರಿನಲ್ಲಿ ತತ್ತ್ವಕ್ಕಿಂತ ಮಿಥ್ಯಾಚರಣೆಗೆ ಹೆಚ್ಚಿನ ಮನ್ನಣೆ ಇದೆ.ಧರ್ಮವನ್ನು ಗುತ್ತಿಗೆ ಹಿಡಿಯುವ ಮನುಷ್ಯರಲ್ಲಿ ಕೆಲವರ ಪ್ರವೃತ್ತಿ,ಬುದ್ಧಿವಂತಿಕೆ ಜನಸಾಮಾನ್ಯರ ಶೋಷಣೆಗೆ ಕಾರಣವಾಗಿದೆ.ಪುರೋಹಿತಶಾಹಿ ವ್ಯವಸ್ಥೆಯು ಪಟ್ಟಭದ್ರರೊಡನೆ ಕೈಕುಲುಕಿಸಿ ರಾಷ್ಟ್ರದ ಸಾಮಾಜಿಕ ಜೀವನವನ್ನು ನಿಯಂತ್ರಿಸುತ್ತಿರುವುದು ಭಾರತದ ಇತಿಹಾಸ ಸಾರುವ ಸತ್ಯಸಂಗತಿ.ಹಿಂದೆ ‘ಪುರೋಹಿತಶಾಹಿ ‘ಎಂದರೆ ಅದು ಬ್ರಾಹ್ಮಣರಿಗೆ ಮಾತ್ರ ಅನ್ವಯವಾಗುತ್ತಿತ್ತು.ಆದರೆ ಈಗ ಎಲ್ಲ ಜಾತಿ- ಜನಾಂಗಗಳಲ್ಲಿ ಕಾಣಿಸಿಕೊಂಡಿದೆ ಪುರೋಹಿತಶಾಹಿವ್ಯವಸ್ಥೆ. ಮನೆಗುರುಗಳು,ಕುಲಗುರುಗಳು,ಜಾತಿಗುರುಗಳು,ಧರ್ಮಗುರುಗಳು ಎನ್ನುವವರು ಪುರೋಹಿತಶಾಹಿ ವ್ಯವಸ್ಥೆಯ ಪ್ರತಿನಿಧಿಗಳು. ಬಸವಣ್ಣನವರು ಕೆಳವರ್ಗದ,ತಳಸಮುದಾಯದ ಜನರಲ್ಲಿ ಶಿವಚೈತನ್ಯವನ್ನುಂಟು ಮಾಡಬೇಕು ಎನ್ನುವ ಮಹದುದ್ದೇಶದಿಂದ ಕಪಟ,ಕುಟಿಲಗಳ ಸ್ಥಾನಗಳಾಗಿದ್ದ ದೇವಸ್ಥಾನ,ಮಠ- ಮಂದಿರ ವ್ಯವಸ್ಥೆಯನ್ನು ಧಿಕ್ಕರಿಸಿದರು.ಸಮಾಜದ ಮಹಿಳೆಯರು, ತುಳಿತಕ್ಕೊಳಗಾದವರಿಗೆ ಧರ್ಮದ ಹೆಸರಿನಲ್ಲಿ ಆಗುತ್ತಿದ್ದ ಅಪಮಾನ,ಶೋಷಣೆಗಳನ್ನು ತಪ್ಪಿಸಲೆಂದು ದೇಹವನ್ನೇ ದೇವಾಲಯವನ್ನಾಗಿಸಿ ಸರ್ವರ ಕೈಗಳಲ್ಲಿ ‘ ಚುಳುಕಾಗುವ’ ಇಷ್ಟಲಿಂಗವನ್ನಿತ್ತರು.ಆದರೆ ಬಸವಬೆಳಕಿನ ಕ್ರಾಂತಿಯು ಮರೆಯಾಗಿ ,ಬಸವಣ್ಣನವರ ವಿಚಾರಜಾಗೃತಿಯ ನಿಲುವನ್ನು ಅಪಾರ್ಥಮಾಡಿಕೊಂಡ ಸ್ವಾರ್ಥಿಗಳು,ಉದರಂಭರಣವಿದ್ಯಾಪ್ರವೀಣರುಗಳು ಜಾತಿಜಾತಿಗೆ ಒಂದೊಂದು ಮಠ- ಪೀಠಕಟ್ಟಿ ಅವುಗಳಿಗೆ ಗುರುಗಳು,ಜಗದ್ಗುರುಗಳು ಎನ್ನುವ ಮಹಾನುಭಾವರುಗಳನ್ನು ಪ್ರತಿಷ್ಠಾಪಿಸಿ ಬೆಳಕನ್ನು ಮರೆಮಾಡಿ ಕತ್ತಲೆಯಾಟವನ್ನು ಮುಂದುಮಾಡಿದ್ದಾರೆ.
ಕನಕದಾಸರ ಕಾಲದಲ್ಲೂ ಇಂತಹ ಸಲ್ಲದ ಅಧಾರ್ಮಿಕ ಆಚರಣೆ ನಡೆಯುತ್ತಿರಬೇಕು.ಅವರು ‘ ಆರು ಬದುಕಿದರಯ್ಯ ಹರಿ ನಿನ್ನ ನಂಬಿ’ ಎನ್ನುವ ನಿಂದಾಸ್ತುತಿ ಕೀರ್ತನೆಯಲ್ಲಿ ಭಕ್ತರು,ಜ್ಞಾನಿಗಳು ,ಯೋಗಿಗಳನ್ನು ಗುರುತಿಸಲರಿಯದ ಜನಸಮುದಾಯವು ಮಠ ಪೀಠಗಳಲ್ಲಿ ವಿರಾಜಮಾನರಾದ,ಕಾವಿಧಾರಿಗಳನ್ನು ನಿಜಸಂತರು,ಶರಣರು,ಯೋಗಿಗಳು ಎನ್ನುವ ಭ್ರಮೆಗೆ ಒಳಗಾದುದನ್ನು ನಯವಾಗಿ ಪ್ರಸ್ತಾಪಿಸಿದ್ದಾರೆ’ ವರ ಕಾಗಿನೆಲೆಯಾದಿಕೇಶವನ ಭಜಿಸಿದರೆ ತಿರಿವೆನೆಂದರು ತಿರುಪೆ ಕೂಳ್ ಪುಟ್ಟದೈ ಕೃಷ್ಣ’ ಎಂದು ತಮ್ಮೊಡೆಯ ಹರಿಯನ್ನು ಕೆಣಕುವ ಮೂಲಕ.ಹರಿಭಕ್ತರಾದವರು ಮನೆಮನೆಗೆ ಬಂದು ಭಿಕ್ಷೆಬೇಡಿದರೂ ತುತ್ತು ಅನ್ನಕೊಡದಷ್ಟು ಸಣ್ಣಮನಸ್ಸಿನವರಾದ ಜನರು ಹರಿಯ ಹೆಸರಿನಲ್ಲಿ ಮಠ ಮಂದಿರಗಳಲ್ಲಿ ಕುಳಿತವರಿಗೆ ಲಕ್ಷ ಕೋಟಿಗಳ ಕಾಣಿಕೆ ನೀಡುತ್ತಿದ್ದಾರೆ.ಹರಿಭಕ್ತರು ಮಾತ್ರವಲ್ಲ ಹರಭಕ್ತರೂ ಸೇರಿದಂತೆ ಭಾರತೀಯ ಧಾರ್ಮಿಕ ವ್ಯವಸ್ಥೆಯಲ್ಲಿ ಇದೊಂದು ಪದ್ಧತಿಯಾಗಿದೆ, ಪ್ರತಿಷ್ಠೆಯಾಗಿದೆ,ಧಾರ್ಮಿಕ ಆಚರಣೆ ಎಂಬಂತೆ ಬಿಂಬಿಸಲಾಗುತ್ತಿದೆ.’ ಧರ್ಮ’ ಎಂದರೆ ಮೌಲ್ಯಗಳನ್ನು ಎತ್ತಿಹಿಡಿಯುವುದು, ‘ ಗುರು’ ಎಂದರೆ ಅಜ್ಞಾನವನ್ನು ನಿವಾರಿಸುವವನು.ಇಂದಿನ ಧಾರ್ಮಿಕ ವ್ಯವಸ್ಥೆಯಲ್ಲಿ ಧರ್ಮ ಮತ್ತು ಗುರುತತ್ತ್ವಗಳು ಮೌಲ್ಯಕಳೆದುಕೊಂಡು ಅಪಮೌಲ್ಯಕ್ಕೀಡಾಗಿವೆ ಜನತೆಯ ಅಜ್ಞಾನದಿಂದ.
ಹರಿದಾಸರು,ಭಕ್ತರು,ಅನುಭಾವಿಗಳು,ಯೋಗಿಗಳು ಭಿಕ್ಷಾನ್ನದಿಂದ ಹೊಟ್ಟೆತುಂಬಿಸಿಕೊಳ್ಳಬೇಕು ಎನ್ನುವುದು ಧಾರ್ಮಿಕ ನಿಯಮ, ಯೋಗಸಿದ್ಧಿಯ ಅನಿವಾರ್ಯತೆ.ಅನುಭಾವಿಗಳು, ಯೋಗಿಗಳಿಗೆ ‘ ಸಂಗ್ರಹಬುದ್ಧಿ’ ಸಲ್ಲದು ಎನ್ನುವ ಕಾರಣದಿಂದ ಭಿಕ್ಷಾನ್ನವನ್ನು ಯೋಗಜೀವನದ ನಿಯಮವನ್ನಾಗಿಸಲಾಗಿದೆ.ಯೋಗಿಗಳು, ಸಂತರು,ಅನುಭಾವಿಗಳು ಭಿಕ್ಷಾನ್ನದಿಂದ ಬದುಕಬೇಕು.ಹೆಚ್ಚು ಭಿಕ್ಷೆಬೇಡದೆ ಐದು ಮನೆಗಳ ಭಿಕ್ಷೆಬೇಡಬೇಕು.ಆ ಐದು ಮನೆಗಳಲ್ಲಿ ನೀಡಿದ ಭಿಕ್ಷೆಯಿಂದಲೇ ಬದುಕಬೇಕು. ಬೇಡಿದ ಐದು ಮನೆಗಳಲ್ಲಿ ಭಿಕ್ಷೆ ನೀಡಿದರೂ ಸರಿ ನೀಡದಿದ್ದರೂ ಸರಿ.ಆರನೇಮನೆ ಎಂದು ಮತ್ತೊಂದು ಮನೆಗೆ ಭಿಕ್ಷೆಗೆ ಹೋಗಬಾರದು.ಭಿಕ್ಷಾನ್ನವನ್ನುಣ್ಣುವಾಗ ಎದುರಿಗಿರುವ ನಾಯಿ,ಕಾಗೆಗಳಂತಹ ಪಶುಪಕ್ಷಿಗಳಿಗೆ ಅನ್ನವನ್ನಿತ್ತು ತಾನು ತಿನ್ನಬೇಕು.ಇದು ಭಿಕ್ಷಾತತ್ತ್ವ ! ಕಾವಿಧಾರಿಗಳು,ಸಂನ್ಯಾಸಿಗಳು, ವಿರಕ್ತರು ಎನ್ನುವವರು ಪಾಲಿಸಲೇಬೇಕಾದ ಆಧ್ಯಾತ್ಮಿಕ ನಿಯಮ! ನಮ್ಮಲ್ಲಿ ಎಷ್ಟುಜನ ಕಾವಿಧಾರಿಗಳು ಈ ನಿಯಮ ಪಾಲಿಸುತ್ತಾರೆ ? ಬೇಡಿ ತಿನ್ನದವ ಸಂನ್ಯಾಸಿಯಲ್ಲ,ಕಾಸಿನಾಸೆಗೆ ಬಿದ್ದವ ಕಾಷಾಯಧಾರಿಯಲ್ಲ.
ಕನಕದಾಸರು ತಮ್ಮ ಒಡೆಯ ಹರಿಯನ್ನು ನಿಂದಾಸ್ತುತಿ ಮೂಲಕ ಕೆಣಕುತ್ತಾರೆ ‘ ಅಯ್ಯಾ ಕೃಷ್ಣನೆ ನಿನ್ನ ಹೆಸರು ಹೇಳಿ ಭಿಕ್ಷೆಬೇಡಿದರೂ ತುತ್ತು ಅನ್ನ ಸಿಗುತ್ತಿಲ್ಲ.ನೀನೆಂಥಹ ಜಗದ್ರಕ್ಷಕ ?’ ಎಂದು ಪರಿಹಾಸ್ಯಗೈಯುತ್ತ.ಇದು ಕನಕದಾಸರ ನಿಂದಾಸ್ತುತಿ ಹೌದಾದರೂ ಹರಿದಾಸರಾದ ಬಳಿಕ ಇಂತಹ ಅನುಭವ ಅವರಿಗೆ ಸಾಕಷ್ಟುಬಾರಿ ಆಗಿರಬೇಕು.ಕನಕದಾಸರನ್ನು ಸಾಮಾನ್ಯ ದಾಸ ಇಲ್ಲವೆ ಭಿಕ್ಷುಕ ಎಂದು ತಿಳಿದ ಜನರು ಮನೆಬಾಗಿಲಿಗೆ ಬಂದ ಕನಕದಾಸರನ್ನು ಗುರುತಿಸದೆ ಅನ್ನನೀಡದೆ ಕಳಿಸಿರಬೇಕು.ಜಗತ್ತಿನ ಜನರಿಗೆ ಬೇಕುಬೇಕಾದುದೆಲ್ಲವನ್ನು ನೀಡುವ ಕಾರಣದಿಂದ ‘ವರದ’ ನೆಂದು ಬಿರುದುಗೊಂಡ ವರ ಕಾಗಿನೆಲೆಯಾದಿಕೇಶವನ’ ನಾಮಗಳನ್ನು ಸ್ತುತಿಸುತ್ತ ಹಾಡಿ ಬೇಡಿದರೆ ತುತ್ತು ಅನ್ನವೂ ಸಿಗುತ್ತಿಲ್ಲ ಎನ್ನುವುದು ಅಧಾರ್ಮಿಕ ಸಾಮಾಜಿಕ ನಡತೆ.
ಹರಿನಾಮವನ್ನು ಹಾಡಿ ಬೇಡುವವರಿಗೆ ನೀಡದೆ ಕಳಹುವವರು ಕಾಡಿ,ಪೀಡಿಸುವ ಮಠ ಪೀಠಗಳ ಮಹಾನುಭಾವರುಗಳು ಕೇಳಿದಷ್ಟು ಕೊಡುತ್ತಾರೆ ಎನ್ನುವುದು ವಿರೋಧಾಭಾಸವಾದರೂ ವಾಸ್ತವ.ಅನುಭಾವಿಗಳು, ಸಂತರಿಗೆ ಭಿಕ್ಷೆನೀಡಿದರೆ ಪುಣ್ಯಬರುತ್ತದೆ; ಗುಡಿಗುಂಡಾರ,ಮಠ ಪೀಠಗಳಲ್ಲಿ ಕುಳಿತವರಿಗೆ ದೇಣಿಗೆ,ಕಾಣಿಕೆ ನೀಡಿದರೆ ಯಾವ ಫಲವೂ ಇಲ್ಲ.ಪಾಪ! ಫಲಾಪೇಕ್ಷೆ ಇಲ್ಲದೆ ಮಠ ಮಾನ್ಯಗಳಿಗೆ ನೀಡುತ್ತಿರಬೇಕು ಭಕ್ತಮಹಾಶಯರುಗಳು ಲಕ್ಷ ಕೋಟಿಗಳ ದೇಣಿಗೆಯನ್ನು ! ಅನುಭಾವಿಗಳಿಗೆ ತುತ್ತು ಅನ್ನ ನೀಡದವರು ಭವಿಗಳು ಇದ್ದ ಎಡೆಯಲ್ಲಿಗೆ ತೆರಳಿ ಲಕ್ಷ,ಕೋಟಿಗಳ ಕಾಣಿಕೆ ನೀಡುತ್ತಾರೆ.ಮಠ ಪೀಠಾಧೀಶರುಗಳು ಕಟ್ಟಿಸುವ ವ್ಯಾಪರೋದ್ಯಮವಾದ ಶಾಲೆ ಕಾಲೇಜುಗಳ ಸ್ಥಾಪನೆಯು ಸಾರ್ಥಕ ಕಾರ್ಯ ಎಂದು ಭ್ರಮಿಸುತ್ತಾರೆ.ಸ್ವಾಮಿ,ಸಂತರುಗಳಿಗೆ ಭವ್ಯ ಅರಮನೆಯಂತಹ ವಿಲಾಸಿ ಮಠಗಳನ್ನು ಕಟ್ಟಿಸುವುದು,ಅವರುಗಳಿಗೆ ಕಾರು,ಹೆಲಿಕಾಪ್ಟರ್ ಗಳನ್ನು ಕೊಡಿಸುವುದು ಧಾರ್ಮಿಕ ಕಾರ್ಯ ಎಂದು ಭ್ರಮಿಸಿದ್ದಾರೆ ಅಜ್ಞಾನಿಗಳು.ಸ್ವಾಮಿಗಳಿಗೆ ಬೆಳ್ಳಿ ಬಂಗಾರಗಳ ಕಿರೀಟಧಾರಣೆ,ಬೆಳ್ಳಿ ನಾಣ್ಯಗಳ ತುಲಾಭಾರ ಮಾಡುವುದು ಪುಣ್ಯದ ಕೆಲಸವೆಂದು ಭ್ರಮಿಸಿದ್ದಾರೆ ಅನ್ಯಾಯದ ಹಣಗಳಿಸಿ ಶ್ರೀಮಂತರಾದವರು. ಗುರು ಜಗದ್ಗುರುಗಳೆಂಬ ಯೋಗಶಕ್ತಿಶೂನ್ಯರುಗಳನ್ನು ಮಹಾತ್ಮರೆಂಬಂತೆ ಭ್ರಮಿಸಿ ಅಡ್ಡಪಲ್ಲಕ್ಕಿಗಳಲ್ಲಿ ಕೂಡಿಸಿ ಮೆರವಣಿಗೆ ಮಾಡುತ್ತಾರೆ ; ಮಲಭಾಂಡದೇಹಿಗಳಾದ ಮಲಿನದೇಹಿಗಳನ್ನು ತಲೆಯ ಮೇಲೆ ಹೊತ್ತು ತಿರುಗುತ್ತಾರೆ.ಇದೆಲ್ಲ ಅಧಾರ್ಮಿಕ ಆಚರಣೆ,ಯೋಗಪಥಕ್ಕೆ ಸಲ್ಲದ ನಡೆ.
‘ ವರ ಕಾಗಿನೆಲೆಯಾದಿಕೇಶವನ ಭಜಿಸಿದರೆ ತಿರಿವೆನೆಂದರು ತಿರುಪೆ ಕೂಳ್ ಪುಟ್ಟದೈ ಕೃಷ್ಣ’ ಎನ್ನುವ ಸಾಲುಗಳು ಬಸವಣ್ಣನವರ ‘ ಉಂಬ ಜಂಗಮ ಬಂದರೆ ಹೋಗೆಂಬರು ,ಉಣ್ಣದ ಲಿಂಗಕ್ಕೆ ಬೋನವನ್ನರ್ಪಿಸುವರು’ ‘ ಕಲ್ಲನಾಗರಕ್ಕೆ ಹಾಲನ್ನೆರೆಯುವರು,ಉಂಬ ಜಂಗಮ ಬಂದರೆ ಹೋಗೆಂಬರು’ ಎನ್ನುವ ವಚನಗಳ ಸಾಲುಗಳನ್ನು ನೆನಪಿಸುತ್ತವೆ.ಬಸವಣ್ಣನವರು ಹೇಳುವ ‘ ಉಂಬಜಂಗಮ’ ಮತ್ತು ಕನಕದಾಸರು ಹೇಳುವ ‘ ತಿರಿದುಂಬ ಹರಿಭಕ್ತ’ ರು ಸಮಾಜವು ಅವರನ್ನು ನಿಕೃಷ್ಟವಾಗಿ ಕಂಡರೂ ಅವರು ಆಧ್ಯಾತ್ಮಿಕವಾಗಿ ಎತ್ತರದ ಸ್ಥಾನದಲ್ಲಿದ್ದಾರೆ.ಅಂಥಹ ‘ನಿಜಜಂಗಮರು’ , ನಿಜದಾಸರು’ ಗಳಿಗೆ ಅನ್ನವನ್ನಿಕ್ಕಿದರೆ ಅನ್ನದಾತರ ಸಕಲಪಾಪಗಳು ಸುಟ್ಟು ಅವರಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ. ಬಸವಣ್ಣನವರು ಮತ್ತು ಕನಕದಾಸರು ಸಮಸಮಾಜ,ಸರ್ವೋದಯ ಸಮಾಜವನ್ನು ಕಟ್ಟಲು ಸಂಗ್ರಹಬುದ್ಧಿ ಸಲ್ಲದು,ಅಂದಂದಿನ ಅನ್ನವನ್ನು ಅಂದಂದೇ ಸಂಪಾದಿಸಿ ತಿನ್ನಬೇಕು ಎನ್ನುವ ನಿರ್ಮೋಹಿ,ನಿಸ್ಸಂಗತತ್ತ್ವವನ್ನು ಪ್ರತಿಪಾದಿಸಿದ ಸಮಾಜಸುಧಾರಕರುಗಳು
೦೪.೦೪.೨೦೨೬