ಕಾಗಿನೆಲೆ,,
ಕಾಗಿನೆಲೆ ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು ಕನಕದಾಸರ ಕುರಿತು ಬರೆದ ‘ ಕನಕದಾಸರ ಶಿವಕೀರ್ತನೆಗಳು’ ಮತ್ತು ‘ ಉಡುಪಿಯ ಕೃಷ್ಣನನ್ನು ‘ ಕಿಂಡಿಯಲ್ಲಿ ಕಂಡ ಕನಕದಾಸರು’ ಎನ್ನುವ ಎರಡು ಪುಸ್ತಕಗಳನ್ನು ಎಪ್ರಿಲ್ 04,2026 ರಂದು ಕಾಗಿನೆಲೆಯಲ್ಲಿ ಸಂತ ಕನಕದಾಸರ ದಿವ್ಯ ಹಸ್ತಗಳಿಂದಲೇ ಲೋಕಾರ್ಪಣೆಗೊಳಿಸಲಾಯಿತು.ಇಂದು ಕಾಗಿನೆಲೆಯ ಕನಕದಾಸರ ಐಕ್ಯಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕಗಳನ್ನು ಕನಕದಾಸರ ಮೂರ್ತಿಯ ಹಸ್ತಸ್ಪರ್ಶ ಮಾಡಿಸುವ ಮೂಲಕ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಆಯುಕ್ತರಾದ ಮುಕ್ಕಣ್ಣ ಕರಿಗಾರ ಮಾತನಾಡಿ, ಕನಕದಾಸರು ನನಗೆ ವಿಗ್ರಹಮಾತ್ರವಲ್ಲ,ಜಾಗೃತ ಚೇತನಾತ್ಮರು,ಯೋಗಸಮಾಧಿಯೊಳಿರುವ ಸಿದ್ಧಪುರುಷರು. ಬರಿಕಣ್ಣುಗಳಿಂದ ನೋಡುವವರಿಗೆ ಕನಕಸತ್ತ್ವ ಅರ್ಥವಾಗದು,ಅರಳ್ದ ಅನಿಮಿಷನೇತ್ರಗಳಿಂದ ನೋಡುವವರಿಗೆ ಕನಕದಾಸರ ವಿಭೂತಿ ವ್ಯಕ್ತಿತ್ವದ ಬೆಡಗು ಅರ್ಥವಾಗುತ್ತದೆ.ಅವರ ಸನ್ನಿಧಿಯಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡುವುದೆಂದರೆ ಸ್ವತಃ ಕನಕದಾಸರೇ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದಂತೆ.ನಾನು ನನ್ನ ಪುಸ್ತಕಗಳ ಲೋಕಾರ್ಪಣೆ ಕಾರ್ಯದಲ್ಲಿ ಎಂದೂ ಅಂತಹ ವಿಶೇಷ ಆಸಕ್ತಿಯನ್ನು ತೋರಿಸಿಲ್ಲ.ಕೆಲವರು ತಮ್ಮ ಪುಸ್ತಕಗಳ ಬಿಡುಗಡೆ ಸಮಾರಂಭವನ್ನೇ ಹಬ್ಬದೋಪಾದಿಯಲ್ಲಿ ದೊಡ್ಡಕಾರ್ಯಕ್ರಮಗಳನ್ನೇರ್ಪಡಿ ಆಚರಿಸುತ್ತಾರೆ. ಸಾಹಿತಿಯಾದವನು ತನ್ನ ಸಾಹಿತ್ಯಕ ಸತ್ತ್ವ,ಸಮಾಜಬದ್ಧತೆಯ ತತ್ತ್ವದಿಂದ ಪ್ರಸಿದ್ಧನಾಗಬೇಕೇ ಹೊರತು ಪ್ರಚಾರದಿಂದಲ್ಲ.ಲಾಬಿ ಮಾಡಿ ಪ್ರಶಸ್ತಿಪಡೆಯುವವರಿಗೆ,ಪದವಿ ಪ್ರಶಸ್ತಿಗಳೇ ದೊಡ್ಡವು ಎಂದು ಭಾವಿಸಿದವರಿಗೆ ಪ್ರಚಾರ ಕಾರ್ಯಕ್ರಮಗಳ ಅಗತ್ಯವಿರುತ್ತದೆ.ಪ್ರಚಾರಪ್ರಿಯನಲ್ಲದ ನನ್ನಂಥವರಿಗೆ ವೇದಿಕೆಗಳನ್ನೇರ್ಪಡಿಸಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವುದರಿಂದ ಆಗಬೇಕಾದುದು ಏನೂ ಇಲ್ಲ ಎಂದರು.

ಕನಕದಾಸರ ಐಕ್ಯಮಂಟಪದಲ್ಲಿ ಇಂದು ನಡೆದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕರಾದ ಡಾ. ಜಗನ್ನಾಥ ಗೇನಣ್ಣನವರ್,ಪ್ರಾಧಿಕಾರದ ಸಿಬ್ಬಂದಿಯವರಾದ ಸಹಾಯಕ ಇಂಜಿನಿಯರ್ ಶಿವಕುಮಾರ ಘಂಟಿ, ಅಶೋಕ ಗಾಜಿ,ಗಣೇಶ,ನವೀನ್ ಹಂಸನೂರು,ಕುಮಾರಸ್ವಾಮಿ ಕುಲಕರ್ಣಿ, ಸಂಗಮೇಶ ವಾಲೀಕಾರ್ ಮತ್ತು ವಿಜಯ್ ಬ್ಯಾಡಗಿ ಪಾಲ್ಗೊಂಡಿದ್ದರು. ಪುಸ್ತಕ ಲೋಕಾರ್ಪಣೆಯ ನಂತರ ಎರಡು ಪುಸ್ತಕಗಳ ಪ್ರಾರಂಭಿಕ ಪ್ರತಿಗಳನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಯವರಿಗೆ ನೀಡಲಾಯಿತು.

