ಆರ್ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಭಾರೀ ಅಕ್ರಮ : 1:5ರಡಿ ಕಡಿತ ಅಂಕಗಳ ಫಲಿತಾಂಶ ಪ್ರಕಟ : ಮರು ಪರೀಕ್ಷೆಗೆ ಆಗ್ರಹ

ರಾಯಚೂರು,;

ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಆರ್ಡಿಸಿಸಿ) ನಲ್ಲಿ ನಡೆದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲ ಭಾರೀ ಅಕ್ರಮ ನಡಿದಿದೆ ಎನ್ನುವ ಆರೋಪಗಳು ಕೇಳಿಬಂದಿವೆ.ಬ್ಯಾಂಕಿನಲ್ಲಿ ಖಾಲಿ ಇದ್ದ ವಿವಿಧ ವೃಂದದ ಹುದ್ದೆಗಳಿಗೆ ನವೆಂಬರ 21,2025 ರಂದು ನೇಮಕಾತಿ ಪ್ರಕಟಣೆ ಹೊರಡಿಸಿತ್ತು.ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ, ನಂತರ ಲಿಖಿತ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯ ನಂತರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೀ-ಆನ್ಸರ್ ಬಿಡುಗಡೆ ಬಳಿಕ ಲೆಕ್ಕ ಹಾಕಿದ ಅಂಕಗಳು ಮತ್ತು ಅಂತಿಮ ಫಲಿತಾಂಶದಲ್ಲಿ ಪ್ರಕಟವಾದ ಅಂಕಗಳು ಹೊಂದಾಣಿಕೆಯಾಗದಿರುವುದು ಕಂಡು ಬಂದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ಸಂಪೂರ್ಣ ಅಂಕಪಟ್ಟಿ (ಮಾರ್ಕ್ಸ್ ಲಿಸ್ಟ್) ಪ್ರಕಟಿಸದೇ, ಯಾರು ಎಷ್ಟು ಅಂಕ ಪಡೆದಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸದಿರುವುದು ನೇಮಕಾತಿ ಪಾರದರ್ಶಕತೆಗೆ ಧಕ್ಕೆ ತಂದಿದೆ.ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ನಿಯಮ 18ರ ಪ್ರಕಾರ, ಲಿಖಿತ ಪರೀಕ್ಷೆಯ ಅಂಕಗಳನ್ನು ಅಭ್ಯರ್ಥಿಗಳಿಗೆ ನೀಡಬೇಕಾಗಿದ್ದರೂ, ಅದು ಪಾಲನೆಯಾಗಿಲ್ಲ ಎನ್ನಲಾಗಿದೆ.ಈಗಾಗಲೆ 1:5 ರಡಿ ತಾತ್ಕಾಲಿಕ ಕಡಿತ ಅಂಕಗಳನ್ನು  ಪ್ರಕಟಿಸಿರುವುದರಲ್ಲಿ ಕೂಡ ಅಕ್ರಮ ಕಂಡುಬಂದಿದ್ದು, ಆಯ್ಕೆ ಪ್ರಕ್ರಿಯೆ ಸರಿಯಾಗಿ ಅನುಸರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೌಲ್ಯಮಾಪನ ವಿಧಾನ ಸ್ಪಷ್ಟವಾಗದೇ, ಫಲಿತಾಂಶ ಪ್ರಕಟಣೆ ಅಪೂರ್ಣವಾಗಿದೆ ಎಂದು ದೂರಲಾಗಿದೆ. ನೇಮಕಾತಿ ಪ್ರಕ್ರಿಯೆಯ ಸ್ಥಗಿತಗೊಳಿಸಿ ಮರುಪರೀಕ್ಷೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಎಸ್.ಎಂ. ಹಿರೇಮಠ ಆಗ್ರಹಿಸಿದ್ದಾರೆ.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪ :

ಕೇಂದ್ರ ಸರ್ಕಾರದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ (ಆಗಸ್ಟ್ 2025) ಪ್ರಕಾರ, ಸಹಕಾರಿ ಬ್ಯಾಂಕುಗಳಲ್ಲಿ ನಿರ್ದೇಶಕರ ಗರಿಷ್ಠ ಅವಧಿ 10 ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಈ ನಿಯಮ 1 ಆಗಸ್ಟ್ 2025ರಿಂದ ಜಾರಿಯಲ್ಲಿದ್ದರೂ, ಆರ್ಡಿಸಿಸಿ ಬ್ಯಾಂಕಿನಲ್ಲಿ ಅದನ್ನು ಉಲ್ಲಂಘಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ರಾಜ್ಯದ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಈ ಸಂಬಂಧ ಸುತ್ತೋಲೆ ಜಾರಿಯಾಗಿದ್ದರೂ, ಅದನ್ನು ಲೆಕ್ಕಿಸದೆ ನವೆಂಬರ್‌ನಲ್ಲಿ ಮ್ಯಾನೇಜರ್‌, ಅಸಿಸ್ಟೆಂಟ್ ಮ್ಯಾನೇಜರ್‌ ಹಾಗೂ ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಅನರ್ಹ ನಿರ್ದೇಶಕರಿಂದ ಆಡಳಿತ ನಿರ್ವಹಣೆ

ಬ್ಯಾಂಕ್ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ತೋರಣದಿನ್ನಿ ಸೇರಿದಂತೆ ಕೆಲವು ನಿರ್ದೇಶಕರು 10 ವರ್ಷಕ್ಕಿಂತ ಹೆಚ್ಚು ಅವಧಿಗೆ ಕಾರ್ಯನಿರ್ವಹಿಸಿರುವುದಾಗಿ ಆರೋಪಿಸಲಾಗಿದೆ. ನಿಯಮ ಪ್ರಕಾರ ಅನರ್ಹರಾಗಬೇಕಿದ್ದರೂ, ಅವರು ಆಡಳಿತ ಮುಂದುವರೆಸಿ ನೇಮಕಾತಿ ನಡೆಸಿರುವುದು ಕಾನೂನು ಉಲ್ಲಂಘನೆ ಎನ್ನಲಾಗುತ್ತಿದೆ.ಇದರಿಂದ ನೇಮಕಾತಿಯ ವಿಶ್ವಾಸಾರ್ಹತೆ ಮೇಲೆಯೂ ಗಂಭೀರ ಅನುಮಾನಗಳು ಮೂಡಿವೆ ಹಾಗಾಗಿ ನೇಮಕಾತಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಸ್. ಎಂ. ಹಿರೇಮಠ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *