Blog
ಮಹತ್ವಾಕಾಂಕ್ಷಿಗಳಿಗೆ ಗ್ರಹಣಗಳು ನೀಡುವ ಸಂದೇಶ
ಚಿಂತನೆ
ಮಹತ್ವಾಕಾಂಕ್ಷಿಗಳಿಗೆ ಗ್ರಹಣಗಳು ನೀಡುವ ಸಂದೇಶ
ಮುಕ್ಕಣ್ಣ ಕರಿಗಾರ
ಖಗೋಳ ವಿಸ್ಮಯವಾದ ಗ್ರಹಣಗಳ ಬಗ್ಗೆ ಜನಪದರ ನಂಬಿಕೆ ಮತ್ತು ವಿಜ್ಞಾನದಲ್ಲಿ ಪರಸ್ಪರ ವಿಭಿನ್ನವಾದ ನಿಲುವು,ನಂಬಿಕೆಗಳಿವೆ.ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳನ್ನು ದೈವೀಶಕ್ತಿ ಮತ್ತು ರಾಕ್ಷಸೀ ಶಕ್ತಿಗಳ ನಡುವಿನ ಹೋರಾಟ ಎಂದು ಜನಪದರು ಭಾವಿಸಿದ್ದರೆ ಭೂಮಿಯ ಪರಿಭ್ರಮಣೆಯ ಕಾರಣದಿಂದ ಸೂರ್ಯ ಚಂದ್ರರ ಕಕ್ಷೆಯಲ್ಲಿ ಭೂಮಿ ಬರುವಾಗ ಉಂಟಾಗುವ ಖಗೋಳ ವಿದ್ಯಮಾನ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.ವೈಜ್ಞಾನಿಕ ಯುಗದಲ್ಲಿ ಬದುಕುತ್ತಿರುವ ನಮಗೆ ವಿಜ್ಞಾನದ ವಿವರಣೆ ಸಮ್ಮತ. ಜ್ಯೋತಿಷಶಾಸ್ತ್ರ ಮತ್ತು ಜನಪದರ ನಂಬಿಕೆಯಂತೆ ಶಿಷ್ಟಶಕ್ತಿ ಮತ್ತು ದುಷ್ಟಶಕ್ತಿಗಳ ನಡುವಿನ ಹೋರಾಟವಾದ ಗ್ರಹಣಗಳು ಮನುಷ್ಯರ ಜೀವನಕ್ಕೆ ಅದರಲ್ಲೂ ಮಹಾತ್ವಾಕಾಂಕ್ಷಿಗಳು,ಮಹಾಪುರುಷರುಗಳಿಗೆ,ಪುರುಷಸಿಂಹರುಗಳಿಗೆ ಒಂದು ಸಂದೇಶವನ್ನು ನೀಡುತ್ತವೆ.ಜನಸಾಮಾನ್ಯರ ಭಯಕ್ಕೆ ಕಾರಣವಾದ,ವಿಜ್ಞಾನಿಗಳ ಕೌತುಕಕ್ಕೆ ಕಾರಣವಾದ ಗ್ರಹಣಗಳು ಮಹಾನ್ ವ್ಯಕ್ತಿಗಳ ಬದುಕಿಗೆ ಮಹೋನ್ನತ ಸ್ಫೂರ್ತಿಯಾಗಿವೆ!
ಜ್ಯೋತಿಷ ಮತ್ತು ಜನಪದರ ನಂಬಿಕೆಯಂತೆ ಛಾಯಾಗ್ರಹಗಳಾದ ರಾಹು ಮತ್ತು ಕೇತುಗಳು ಚಂದ್ರ ಸೂರ್ಯರನ್ನು ನುಂಗುತ್ತವೆ.ಆದರೆ ರಾಹುಕೇತುಗಳು ಸೂರ್ಯಚಂದ್ರರನ್ನು ನುಂಗಿಯೂ ಅವರನ್ನು ತಮ್ಮ ಒಡಲಲ್ಲಿ ಇಟ್ಟುಕೊಳ್ಳಲಾಗದೆ ಮತ್ತೆ ಹೊರ ಉಗುಳುತ್ತವೆ.ಇದೇ ಗ್ರಹಣ.ಅಂದರೆ ಗ್ರಹಣ ವಿನಾಶವಲ್ಲ,ತಾತ್ಕಾಲಿಕ ಹಿನ್ನಡೆ.ಇದೇ ನಾವು ಗ್ರಹಣಗಳಿಂದ ಗ್ರಹಿಸಬೇಕಾದ ಸಂದೇಶ.
ಸೂರ್ಯ ಮತ್ತು ಚಂದ್ರರು ಜಗತ್ತಿಗೆ ಬೆಳಕು ಮತ್ತು ಬೆಳದಿಂಗಳನ್ನು ಪ್ರಸಾದಿಸುತ್ತಾರೆ.ಉರಿಯುವ ಗೋಳವಾದ ಸೂರ್ಯನಂತೂ ಪ್ರಖರ ಶಕ್ತಿಯ ಮೂಲ.ಭೂಮಿಯಿಂದ ಅನಂತ ದೂರದಲ್ಲಿದ್ದರೂ ನಾವು ಸೂರ್ಯನ ತುಸುಬಿಸಿಲಿನ ತಾಪವನ್ನು ಸಹಿಸಿಕೊಳ್ಳಲಾರೆವು.ಸೂರ್ಯನ ತಾಪವನ್ನು ಸಹಿಸಿಕೊಳ್ಳದೆ ಅವನಪತ್ನಿ ಉಷೆಯು ಛಾಯೆಯನ್ನು ಸೃಷ್ಟಿಸಿ ತಪಸ್ಸಿಗೆ ಹೊರಟಳಂತೆ.ಸೂರ್ಯನ ಪತ್ನಿಯೇ ಸಹಿಸದ ತಾಪವನ್ನು ಇತರರು ಸಹಿಸಲುಂಟೆ? ಇಂತಹ ಭಯಂಕರ ತಾಪಿಯಾದ ಸೂರ್ಯನನ್ನು ರಾಹು ಕೇತುಗಳು ನುಂಗುತ್ತವೆ ಎಂದರೆ? ಖಂಡಿತವಾಗಿ ಆ ಛಾಯಾಗ್ರಹಗಳು ಸೂರ್ಯನನ್ನು ಬಹಳಹೊತ್ತು ತಮ್ಮ ಲ್ಲಿ ಹಿಡಿದಿಟ್ಟುಕೊಳ್ಳಲಾರವು.ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳ ಗ್ರಹಣದ ಅವಧಿಯೂ ಕೂಡ ಇದನ್ನು ಮತ್ತಷ್ಟು ಸ್ಪಷ್ಟ ಪಡಿಸುತ್ತದೆ.ಹೆಚ್ಚೆಂದರೆ ಕೆಲವೇ ನಿಮಿಷಗಳ ಕಾಲ ಸೂರ್ಯಗ್ರಹಣವು ಸಂಭವಿಸಿದರೆ ಚಂದ್ರಗ್ರಹಣವು ಹಲವು ಘಂಟೆಗಳ ಕಾಲವೂ ಸಂಭವಿಸುತ್ತದೆ.ಸೂರ್ಯ ಉರಿಯುವ ಸ್ವಭಾವಶಕ್ತಿಯನ್ನು ಛಾಯಾ ಗ್ರಹಗಳಿಗೆ ಹೆಚ್ಚುಹೊತ್ತು ತಡೆಹಿಡಿಯಲಾಗದು.ಆದರೆ ಚಂದ್ರನು ಶೀತಲಕಿರಣಗಳನ್ನುಳ್ಳವನಾದ್ದರಿಂದ ಅವನೊಂದಿಗೆ ತುಸು ಹೆಚ್ಚುಹೊತ್ತು ಸೆಣಸಬಹುದು.ರಾಹು ಮತ್ತು ಕೇತುಗಳು ಸೂರ್ಯಚಂದ್ರರನ್ನು ನುಂಗಬಹುದು ಆದರೆ ಆಪೋಶನ ತೆಗೆದುಕೊಳ್ಳಲಾಗದು.ಸೂರ್ಯ ಚಂದ್ರರು ರಾಹು ಕೇತುಗಳನ್ನು ಮೆಟ್ಟಿ ಅವರ ಬಂಧನದಿಂದ ಹೊರಬರುತ್ತಾರೆ.
ಮಹಾಪುರುಷರು,ಮಹತ್ವಾಕಾಂಕ್ಷಿಗಳು ಸೂರ್ಯ ಚಂದ್ರರ ಗ್ರಹಣಗಳನ್ನು ಬಾಳಿನ ಸ್ಫೂರ್ತಿಯನ್ನಾಗಿ ತೆಗೆದುಕೊಳ್ಳಬೇಕು.ಆಕಾಶದಲ್ಲಿ ಲಕ್ಷಾಂತರ ಖಗೋಳ ಕಾಯಗಳಿವೆ.ಆದರೆ ಅವುಗಳಲ್ಲಿ ಭೂಮಿ ಮತ್ತು ಭೂಮಿಯ ಮೇಲಣ ಜೀವಜಾಲಕ್ಕೆ ಶಕ್ತಿ,ಬೆಳಕು ನೀಡುವ ಗ್ರಹಗಳೆಂದರೆ ಸೂರ್ಯ ಮತ್ತು ಚಂದ್ರರು.ನಕ್ಷತ್ರಗಳಿಗೂ ಸ್ವಯಂ ಪ್ರಕಾಶವಿದೆಯಾದರೂ ಅವು ಭೂಮಿಯಿಂದ ಬಹುದೂರದ ಅನಂತದಲ್ಲಿ ಇರುವುದರಿಂದ ನಮಗೆ ಸೂರ್ಯ ,ಚಂದ್ರರು ಮಾತ್ರ ಪ್ರತ್ಯಕ್ಷವಾಗಿ ಕಾಣಿಸುವುದರಿಂದ ಅವರಿಬ್ಬರ ಪ್ರಭಾವ ಹೆಚ್ಚು ಇದೆ.ಸೂರ್ಯ ಮತ್ತು ಚಂದ್ರರಿಬ್ಬರು ಮಹಾನ್ ಶಕ್ತಿಶಾಲಿಗಳು,ಕೋಟ್ಯಾಂತರ ನಕ್ಷತ್ರಗಳು,ಆಕಾಶಕಾಯಗಳ ನಡುವೆ ಪ್ರಕಾಶಮಾನವಾಗಿ ಹೊಳೆಯುತ್ತ ಭುವಿಯನ್ನು ಬೆಳಗುವವರು.ಅತ್ಯಂತ ಶಕ್ತಿಶಾಲಿಗಳಾದ,ಜಗತ್ತಿನ ಆಗು ಹೋಗುಗಳ ಪ್ರತ್ಯಕ್ಷಕಾರಣರಾದ ಸೂರ್ಯ ಚಂದ್ರರನ್ನು ರಾಹು ಕೇತುಗಳು ನುಂಗುತ್ತವೆ ಎನ್ನುವುದು ಮಹಾಪುರುಷರಿಗೆ ಒಂದು ದೊಡ್ಡ ಸಂದೇಶ ನೀಡುತ್ತದೆ.ಜಗತ್ತು ಮಹಾನ್ ವ್ಯಕ್ತಿಗಳನ್ನು ಬೆರಗುಗಣ್ಣುಗಳಿಂದ ನೋಡಿದರೂ ಮಹಾಪುರುಷರುಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ.ಎಲ್ಲರಂತೆ ಇರದೆ ತಮ್ಮ ಸ್ವಂತಿಕೆಯನ್ನು ಹೊಂದಿರುವುದೇ ಮಹಾಪುರುಷರ ಸಮಸ್ಯೆಯ ಕಾರಣ,ಜಗತ್ತು ಅವರನ್ನು ಅಪಾರ್ಥ ಮಾಡಿಕೊಳ್ಳುವ ಕಾರಣ!
ಜಗತ್ತಿನ ಜನರಲ್ಲಿ ತೊಂಬತ್ತರಷ್ಟು ಜನ ಅಜ್ಞಾನಿಗಳು ಎನ್ನಲಾಗದೆ ಇದ್ದರೂ ಸತ್ಯವನ್ನು ಅರ್ಥಮಾಡಿಕೊಳ್ಳದ ಜನರು ಎನ್ನಬಹುದು.ಈ ತೊಂಬತ್ತರಷ್ಟು ಜನರಲ್ಲಿ ಬುದ್ಧಿ ಇಲ್ಲವೆಂದಲ್ಲ ಆದರೆ ಅದು ಪ್ರಖರವಾಗಿಲ್ಲ,ಪ್ರಕಾಶಮಾನವಾಗಿಲ್ಲ.ಆಕಾಶದಲ್ಲಿ ಕೋಟ್ಯಾಂತರ ಚುಕ್ಕೆಗಳಿದ್ದರೂ ರಾತ್ರಿಯಲ್ಲಿ ಬೆಳದಿಂಗಳು ನೀಡುವವನು ಚಂದ್ರನೊಬ್ಬನೆ! ನಕ್ಷತ್ರಗಳು ಮಿನುಗುತ್ತವೆ ನಿಜ ,ಆದರೆ ಬೆಳದಿಂಗಳನ್ನು ನೀಡಲಾರವು.ಹಾಗೆಯೇ ಬಹುಪಾಲು ಜನರು ನಕ್ಷತ್ರಗಳಂತೆ,ಚಂದ್ರ ಮಹಾಪುರುಷರ ಸಂಕೇತ.ಜಗತ್ತಿನ ಕತ್ತಲೆಯನ್ನು ಸೂರ್ಯನು ಹೊಡೆದೋಡಿಸುವಂತೆ ಮಹಾಪುರುಷರುಗಳು ಜಗತ್ತಿನಲ್ಲಿ ಕವಿದ ಅಜ್ಞಾನ ಅಂಧಕಾರಗಳನ್ನು ಹೊಡೆದಟ್ಟಲು ಅವತರಿಸುತ್ತಾರೆ.ಹುಂಬನಂಬಿಕೆಗಳಿಗೆ ಕೊರಳೊಡ್ಡಿ ಬದುಕುವ ಜನರಿಗೆ ಮಹಾಪುರುಷರ ಸತ್ಯವಾಕ್ಯಗಳು ಅರ್ಥವಾಗುವುದಿಲ್ಲ.ಅದಾಗಲೇ ಜಗತ್ತನ್ನು, ಜನರನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವ ಪಟ್ಟಭದ್ರರು ಮತ್ತು ಪುರೋಹಿತಶಾಹಿಪ್ರವೃತ್ತಿಯ ಜನರಿಗೆ ಮಹಾತ್ಮರ ಆಗಮನವೇ ದೊಡ್ಡ ಸಮಸ್ಯೆ, ತಲೆನೋವು ಆಗಿ ಕಾಡುತ್ತದೆ.ಜನರ ಅಜ್ಞಾನ,ಮೌಢ್ಯವನ್ನು ಬಂಡವಾಳ ಮಾಡಿಕೊಂಡು ಬದುಕುತ್ತಿರುವವರಿಗೆ ಅಧ್ಯಾತ್ಮಸಾಧಕರುಗಳ,ಸಿದ್ಧಿಪುರುಷರ ಲೋಕಕಲ್ಯಾಣದ ವಿಚಾರಗಳು ಅರ್ಥವಾಗುವುದಿಲ್ಲ. ಮಠ ಮಂದಿರಗಳಲ್ಲಿ ಕುಳಿತವರೆಲ್ಲ ಸಂತರಲ್ಲ,ಶರಣರಲ್ಲ.ತಮ್ಮ ವೇಷಭೂಷಣಗಳಿಂದ,ವಕ್ರಬುದ್ಧಿಯಿಂದ ಜನರನ್ನು ವಂಚಿಸಿ ಹೊಟ್ಟೆಹೊರೆಯುವ ಅಲ್ಪಜೀವಿಗಳು ಎಂದೂ ದೊಡ್ಡವರು ಆಗುವುದಿಲ್ಲ.ದಡ್ಡಜನರಿಂದ ದೊಡ್ಡವರು ಆದವರಿಗೆ ಆಧ್ಯಾತ್ಮಿಕ ಪಥದಲ್ಲಿ ಯಾವುದೇ ಬೆಲೆ ಇಲ್ಲ,ಪರಮಾತ್ಮನು ಅಂಥಹ ತುಚ್ಛಜೀವಿಗಳ ಬಗ್ಗೆ ಆಸಕ್ತಿ ವಹಿಸುವುದಿಲ್ಲ.ಪರಮಾತ್ಮನು ತನ್ನ ಲೋಕಕಲ್ಯಾಣಗುಣವನ್ನು ಎತ್ತಿ ಹಿಡಿಯಲು ತನ್ನ ಸಂಕಲ್ಪದಂತೆ ಅವತರಿಸಿದ ವಿಭೂತಿಪುರುಷರ ಬದುಕುಗಳಲ್ಲಷ್ಟೇ ಆಸಕ್ತನಾಗುತ್ತಾನೆ,ವಿಭೂತಿಪುರುಷರ ಬದುಕಿನಲ್ಲಿ ತನ್ನ ಪ್ರಭಾವ- ಪ್ರೇರಣೆಗಳನ್ನುಂಟು ಮಾಡುವ ಮೂಲಕ ಅವರನ್ನು ಲೋಕೋತ್ತರವ್ಯಕ್ತಿಗಳನ್ನಾಗಿಸುತ್ತಾನೆ.ಮಹಾಪುರುಷರು ಜಗತ್ತನ್ನು ಬೆಳಗುವ ಸೂರ್ಯ ಚಂದ್ರರು ಇದ್ದಂತೆ.ಲೋಕಸಮಸ್ತರ ಕಲ್ಯಾಣದ ಕಾರಣದಿಂದ ಮಹಾಪುರುಷರುಗಳ ಅವತರಣವಾಗಿರುತ್ತದೆ.
ಪಟ್ಟಭದ್ರರುಗಳು ಅಜ್ಞಾನಿ ಜನರನ್ನು ಬಳಸಿಕೊಂಡು ಲೋಕೋತ್ತಮರಾದ ಸಂತರು,ಶರಣರು,ದಾರ್ಶನಿಕರುಗಳಿಗೆ ತೊಂದರೆ ಕೊಡುತ್ತಾರೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು.ಮಹಾಪುರುಷರ ಜೀವನದ ಬಗ್ಗೆ ಜನರಲ್ಲಿ ಸಂದೇಹವನ್ನುಂಟು ಮಾಡುವುದು,ಅವರತ್ತ ಜನರು ಹೋಗದಂತೆ ಕುಯುಕ್ತಿ- ಕುತಂತ್ರಗಳನ್ನು ಮಾಡುವುದು ಮಹಾಪುರುಷರ ಪ್ರಭಾವ ಸಮಾಜದ ಮೇಲೆ ಆಗದಂತೆ ತಡೆಯಲು ಪ್ರಯತ್ನಿಸುವುದನ್ನು ಮಾಡುತ್ತಾರೆ ಪಟ್ಟಭದ್ರರುಗಳು.ಕತ್ತಲೆಯನ್ನು ಬೆಳಕು ಎಂದು ಭ್ರಮಿಸಿದ ಜನರಿಗೆ ಬೆಳಕಿನ ನಿಜಸ್ವರೂಪ ಅರ್ಥವಾಗುವುದಿಲ್ಲ.ಕತ್ತಲೆಯೇ ಜೀವನದ ಪರಮಾರ್ಥ ಎಂದು ಭ್ರಮಿಸಿದವರಿಗೆ ಜೀವನದ ಪರಮಾರ್ಥ ಲಭಿಸುವುದೆಂತು? ಪರಮಾತ್ಮನ ಅನುಗ್ರಹ ದೊರಕುವುದೆಂತು? ಪರಮಾತ್ಮನ ಮಾಯೆಯಾಗಿರುವ ಪಟ್ಟಭದ್ರರು ಜಗತ್ತನ್ನು ,ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬಯಸುತ್ತಾರೆ.ಇಂತಹ ಪಟ್ಟಭದ್ರರ ಕಪಿಮುಷ್ಟಿಯಿಂದ ಜನಸಾಮಾನ್ಯರ ನ್ನು ಬಿಡಿಸಿ ಅವರನ್ನು ಉದ್ಧರಿಸಲು ಪ್ರಯತ್ನಿಸುತ್ತಾರೆ ಮಹಾಪುರುಷರು.
ಮಹಾಪುರುಷರ ಮಹೋನ್ನತ ಜೀವನ,ಸಾರ್ವಕಾಲಿಕ ಸಂದೇಶವನ್ನು ಅರ್ಥಮಾಡಿಕೊಳ್ಳದ ಮುಗ್ಧ ಜನತೆ ಪಟ್ಟಭದ್ರರ ಮಾತುಗಳ ಮೋಹಕ ಸೆಳವಿಗೆ ಸಿಕ್ಕು ಬಲಿಯಾಗುತ್ತಾರೆ.ತಮ್ಮ ಜೀವನದ ಉನ್ನತಿಯ ಪಥದಿಂದ ವಂಚಿತರಾಗುತ್ತಾರೆ.ಪಟ್ಟಭದ್ರರ ಕುಟಿಲ ಕುಯುಕ್ತಿಗಳಿಂದ ಮಹಾಪುರುಷರ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ,ಅವಹೇಳನಗಳು ನಡೆಯುತ್ತವೆ.ಅವಿವೇಕಿಗಳನ್ನು ಅವಧೂತರು ಎಂದು ಭ್ರಮೆಗೀಡಾದ ಜನರು ಶಿವಚೇತನರುಗಳ ಕೈಲಾಸದ ಕಲ್ಯಾಣಪಥದಿಂದ ದೂರವಾಗುತ್ತಾರೆ.ಪಟ್ಟಭದ್ರರು ಮತ್ತು ಕೆಟ್ಟಜನತೆ ಎಷ್ಟೇ ಕೆಡುಕನ್ನು ಉಂಟು ಮಾಡಿದರೂ ಎಷ್ಟೇ ತೊಂದರೆ ಕೊಟ್ಟರೂ ಮಹಾಪುರುಷರುಗಳು ಅವನ್ನೆಲ್ಲ ಮೆಟ್ಟಿನಿಲ್ಲುತ್ತಾರೆ,ತಮ್ಮ ಧೀರೋದಾತ್ತ ನಿಲುವಿನಿಂದ ಜಗದ್ವಂದ್ಯರಾಗುತ್ತಾರೆ.ಪಟ್ಟಭದ್ರರು ಮತ್ತು ದಡ್ಡ ಜನತೆಯು ನೀಡುವ ತೊಂದರೆ,ಉಪದ್ರವಗಳೇ ಮಹಾಪುರುಷರನ್ನು ಕಾಡುವ ‘ ಗ್ರಹಣ’ ಗಳಾಗಿದ್ದು ಮಹಾಪುರುಷರು ತಮ್ಮ ಆತ್ಮಬಲದಿಂದ ಕವಿದ ಕತ್ತಲೆಯ ಮಾಯೆಯನ್ನು ಸರಿಸಿ ಹೊರಬರುತ್ತಾರೆ,ಗ್ರಹಣ ಮೋಕ್ಷಪಡೆಯುತ್ತಾರೆ.ದುಷ್ಟಜನರ ಕೂಟದ ದುರ್ನಡೆಯು ರಾಹು ಕೇತುಗಳೆಂಬ ಗ್ರಹಣಗಳಾದರೆ ಆತ್ಮಬಲವನ್ನುಳ್ಳ ಸತ್ಯಶರಣರು ಸೂರ್ಯ ಚಂದ್ರರಾಗಿ ಜನರಿಗೆ ಆದರ್ಶರಾಗುತ್ತಾರೆ,ಜಗತ್ತನ್ನು ಬೆಳಗುತ್ತಾರೆ
೧೩.೦೯.೨೦೨೫