Blog
ಜಿಪಂ.ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ವರ್ಗಾವಣೆ : ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ನೇಮಕ
‘ಕಲ್ಯಾಣ’ದಿಂದ ಕಾಗಿನೆಲೆಗೆ..
ಮುಕ್ಕಣ್ಣ ಕರಿಗಾರ
‘ ನೆಲದ ಋಣ ಮನುಷ್ಯರ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ’ ಎನ್ನುವ ಮಾತನ್ನು ನಾನು ಆಗಾಗ ಹೇಳುತ್ತಿರುತ್ತೇನೆ.ನನ್ನ ಬದುಕಿನ ಅನುಭವವೂ ನನ್ನ ನಂಬಿಕೆಯನ್ನು ಪುಷ್ಟೀಕರಿಸಿದೆ.ನಾನು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಗೆ ವರ್ಗಾವಣೆಗೊಂಡು ಬಂದಿದ್ದು ಅನಿರೀಕ್ಷಿತ ಹಾಗೆಯೇ ಈಗ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಿಂದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ಹೋಗುತ್ತಿರುವುದೂ ಅಷ್ಟೇ ಅನಿರೀಕ್ಷಿತ.
ಅಗಸ್ಟ್ 01,2024 ರಂದು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯ ಕರ್ತವ್ಯಕ್ಕೆ ಹಾಜರಾದ ನಾನು ನವೆಂಬರ್ ನವೆಂಬರ್ 03,2025 ರಂದು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಂಡೆ.ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಹೃದಯ ಸಂಪನ್ನ ಐಎಎಸ್ ಅಧಿಕಾರಿಗಳಾಗಿರುವ ಡಾ. ಗಿರೀಶ ದಿಲೀಪ್ ಬದೋಲೆಯವರು ನನ್ನ ವರ್ಗಾವಣೆ ಬಗ್ಗೆ ಸ್ವಲ್ಪ ಬೇಸರಗೊಂಡು ‘ ಅವಸರ ಮಾಡಬೇಡಿ,ನಾಲ್ಕುದಿನ ತಡೆದು ರಿಲೀವ್ ಆಗಿ’ ಅಂತ ಹೇಳಿದರೂ ನಾನೇ ಸ್ವಯಂ ಆಸಕ್ತಿ ವಹಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರನ್ನು ಮನವಿ ಮಾಡಿಕೊಂಡು ರಿಲೀವ್ ಆದೆ.
ಮುಖ್ಯಮಂತ್ರಿಗಳವರೇ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ನೇಮಿಸಲು ಸೂಚಿಸಿದ್ದರು ಮತ್ತು ಅಕ್ಟೋಬರ್ 29 ರಂದು ಮುಖ್ಯಮಂತ್ರಿಗಳವರ ಅಧ್ಯಕ್ಷತೆಯಲ್ಲಿ ನಡೆದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ನನ್ನ ನೇಮಕಾತಿ ಆದೇಶ ಹೊರಬೀಳದೆ ಇದ್ದುದಕ್ಕೆ ಗರಂ ಆಗಿದ್ದರಂತೆ ! ಆ ಕಾರಣದಿಂದ ಅಕ್ಟೋಬರ್30 ರಂದು ನನ್ನ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ನೇಮಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಲಾಗಿತ್ತು.ನಿನ್ನೆ ಬೀದರಿನಿಂದ ಬೆಂಗಳೂರಿಗೆ ಹೊರಟು ಬಂದಿದ್ದು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುತ್ತಿದ್ದೇನೆ.
೦೪.೧೧.೨೦೨೫