ನಿಯೋಜನೆ ರದ್ದುಪಡಿಸಿ ಮಂಜುನಾಥರನ್ನು ಮೂಲ ಇಲಾಖೆಗೆ ಕಳುಹಿಸಿ ಪ್ರದೀಪ ಅಣಬಿ ಆಗ್ರಹ

ಶಹಾಪುರ : ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬೆರಳಚ್ಚುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಅವರನ್ನು ಯಾದಗಿರಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಮಾಡಿರುವ ನಿಯೋಜನೆಯನ್ನು ರದ್ದುಪಡಿಸಿ, ಕೂಡಲೇ ಮೂಲ ಇಲಾಖೆಗೆ ಮರಳಿ ಕಳುಹಿಸುವಂತೆ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಶಹಾಪುರ ಘಟಕದ ಪ್ರದೀಪ ಅಣಬಿ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಮಂಜುನಾಥ ಅವರನ್ನು 2021ರ ಡಿಸೆಂಬರ್ 30ರಂದು ಜಿಲ್ಲಾ ಪಂಚಾಯಿತಿ ಕಚೇರಿಗೆ ನಿಯೋಜಿಸಲಾಗಿದ್ದು, ಸುಮಾರು ನಾಲ್ಕು ವರ್ಷಗಳಿಂದ ನಿಯೋಜನೆಯಲ್ಲೇ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬೆರಳಚ್ಚುಗಾರರ ಅವಶ್ಯಕತೆ ಇಲ್ಲದಿದ್ದರೂ ನಿಯೋಜನೆಯನ್ನು ಮುಂದುವರಿಸಿರುವುದು ನಿಯಮಬಾಹಿರವಾಗಿದೆ. ಬೆರಳಚ್ಚುಗಾರರ ಬದಲಾಗಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಸ್ಟೆನೋಗ್ರಾಫರ್ ಅಗತ್ಯವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಮಂಜುನಾಥ ಅವರು ರಾಜಕೀಯ ಪ್ರಭಾವ ಬಳಸಿ ತಮ್ಮ ನಿಯೋಜನೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ ಎಂಬ ಆರೋಪವನ್ನು ಪ್ರದೀಪ ಅಣಬಿ ಮಾಡಿದ್ದಾರೆ. ಅಲ್ಲದೆ, ಅವರ ಮೂಲ ಇಲಾಖೆಯಲ್ಲಿಯೂ ಇದುವರೆಗೆ ಪರ್ಯಾಯ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚಿನ ಅವಧಿಯ ನಿಯೋಜನೆ ಕುರಿತು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ನಿಯೋಜನೆಯ ನಿಯಮಗಳನ್ನು ಪರಿಶೀಲಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ನಿಯೋಜನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಜುನಾಥ ಅವರನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿ, ಯಾದಗಿರಿಗೆ ಮರಳಿ ಕಳುಹಿಸುವ ಮೂಲಕ ಮೂಲ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ನೀಗಿಸಬೇಕು. ಈ ಕುರಿತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *