ಶಹಾಪುರ:
ತಾಲೂಕಿನ ಬೀರಲಿಂಗೇಶ್ವರ ಸಭಾಭವನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ, ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 228ನೇ ಜಯಂತಿಯನ್ನು ಆಚರಿಸಲಾಯಿತು.
ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಯಲ್ಲಪ್ಪ ನರಿ ಮಾತನಾಡಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸಂಗೊಳ್ಳಿ ರಾಯಣ್ಣನವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ರಾಯಣ್ಣನವರ ದೇಶಪ್ರೇಮ, ಧೈರ್ಯ, ಸಾಹಸ ಮತ್ತು ಹೋರಾಟದ ಮನೋಭಾವ ಇಂದಿನ ಯುವಜನತೆಗೆ ಸ್ಫೂರ್ತಿಯಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಏಕತೆ, ಅಖಂಡತೆ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ ಕಮತಗಿ ರಸ್ತಾಪುರ ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ವೀರ ಪರಾಕ್ರಮ, ಅಪ್ರತಿಮ ಸಾಹಸ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿದೆ. ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ರಾಯಣ್ಣನವರ ತ್ಯಾಗ ಮತ್ತು ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ರಾಯಣ್ಣನವರ ಧೈರ್ಯ, ದೇಶಭಕ್ತಿ ಮತ್ತು ಹೋರಾಟದ ಗುಣಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ರಾಯಪ್ಪ ಚೆಲುವಾದಿ ಮಾತನಾಡಿ,
ಸಂಗೊಳ್ಳಿ ರಾಯಣ್ಣನವರು ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಲ್ಲ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ವೀರರಾಗಿದ್ದಾರೆ. ಅವರ ದೇಶಭಕ್ತಿ, ಧೈರ್ಯ, ಸಾಹಸ ಮತ್ತು ಸ್ವಾಭಿಮಾನದ ಹೋರಾಟ ಇಂದಿನ ಯುವಕರಿಗೆ ಸದಾ ದಾರಿದೀಪವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಮನಪ್ಪ ಪೂಜಾರಿ ಅಗಸ್ತಿಹಾಳ, ಭೀಮರಾಯ ಚಿಟೆನರ್, ನಾಗಪ್ಪಗೌಡ ಶಹಾಪುರ, ಶರಬಣ್ಣ ರಸ್ತಾಪುರ, ಶಾಂತಗೌಡ ನಾಗನಟಗಿ, ದೇವಿಂದ್ರಪ್ಪ ನಾಶಿ, ಸೀನುನಾಶಿ, ನಾನೆಗೌಡ ಮೇಟಿ, ರವಿ ರಾಜಾಪುರ, ಭೀಮಾಶಂಕರ ಹುಲಕಲ್, ಭೀಮರಾಯ ಭಂಡಾರಿ, ಭಲಬೀಮ ಮಡ್ನಾಳ, ಸಿದ್ದಣ್ಣ ಕನ್ನೆಕೋಳುರ, ಶರಣು ಹೋತಪೇಟ, ಮರ್ದಾನೆಪ್ಪ ಸಲಾದಪುರ, ಸಾಬಣ್ಣ ಗೋಸಿ, ಮಲ್ಲಣಗೌಡ ತಿಪ್ಪನಹಳ್ಳಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.