ಶಹಾಪುರ,
: ನಿರಂತರ ಪ್ರಯತ್ನ, ಕಠಿಣ ಪರಿಶ್ರಮ, ಶ್ರದ್ಧೆ, ಯೋಜಿತ ಅಧ್ಯಯನ ಹಾಗೂ ಸಕಾರಾತ್ಮಕ ಚಿಂತನೆಯಿಂದ ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಸರ್ಕಾರಿ ಮಾದರಿ ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ರಾಘವೇಂದ್ರ ಬಂಡಿಮನಿ ಹೇಳಿದರು.
ನಗರದ ಗಣೇಶ ಬಡಾವಣೆಯ “ಆಸರೆ” ಗ್ರಂಥಾಲಯದಲ್ಲಿ ಆಯೋಜಿಸಿದ್ದ ಉಚಿತ ಪ್ರೇರಣಾತ್ಮಕ ತರಗತಿಯಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಯೋಜಿತ ಓದು, ಸಮಯದ ಸದ್ಬಳಕೆ ಮತ್ತು ಏಕಾಗ್ರತೆ ಅತ್ಯಂತ ಮುಖ್ಯವೆಂದರು. ಗ್ರಂಥಾಲಯದಲ್ಲಿರುವ ಉತ್ತಮ ಅಧ್ಯಯನ ವಾತಾವರಣವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ ಅಧ್ಯಯನದ ವಿವಿಧ ಕೌಶಲ್ಯಗಳು ಹಾಗೂ ತಾರ್ಕಿಕ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಆಸರೆ ಗ್ರಂಥಾಲಯದಲ್ಲಿ ವೈ-ಫೈ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕರ ಆಪ್ತ ಕಾರ್ಯದರ್ಶಿ ಶಿವಶರಣ ಇಟಗಿ, ಪ್ರೇರಣಾತ್ಮಕ ಉಪನ್ಯಾಸಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಆಸರೆ ಗ್ರಂಥಾಲಯದ ಕಾರ್ಯ ಶ್ಲಾಘನೀಯವಾಗಿದೆ ಎಂದರು. ವಿದ್ಯಾರ್ಥಿಗಳ ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಗ್ರಂಥಾಲಯ ದಾರಿದೀಪವಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿ ಶಿವರಾಜ ರಾಠೋಡ ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲತೆಯ ಮಹತ್ವ ತಿಳಿಸಿದರು. ಆಸರೆ ಗ್ರಂಥಾಲಯದ ಸಂಸ್ಥಾಪಕ ಹಾಗೂ ಅರ್ಥಶಾಸ್ತ್ರ ಅಧ್ಯಾಪಕ ಡಾ. ದೇವಪ್ಪ ಹೊಸ್ಮನಿ ಗ್ರಂಥಾಲಯದ ಧ್ಯೇಯ, ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜಶಾಸ್ತ್ರ ಉಪನ್ಯಾಸಕ ಡಾ. ರಾಘವೇಂದ್ರ ಹಾರಣಗೇರಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಶ್ನೋತ್ತರ ಸಂವಾದದಲ್ಲಿ ಭಾಗವಹಿಸಿದರು. ಕು. ಸೌಜನ್ಯ ನಿರೂಪಿಸಿದರು. ಕು. ಪ್ರೀತಿ ಕರಕಳ್ಳಿ ಪ್ರಾರ್ಥಿಸಿದರು. ಕು. ರೇಣುಕಾ ಹೊಸಕೇರಾ ಸ್ವಾಗತಿಸಿದರು. ಚಂದ್ರಶೇಖರ ಗೋಗಿ ವಂದಿಸಿದರು. ಲೋಹಿತರಡ್ಡಿ, ಶಕೀಲ್ ಹಾಗೂ ಮಲ್ಲಿಕಾರ್ಜುನ ಹೊಸ್ಮನಿ ಕಾರ್ಯಕ್ರಮದ ನಿರೂಪಿಸಿದರು.