ಗುರು ವಂದನೆಯಲ್ಲಿ ಸಹಜ ಯೋಗಿಗಳ ಮಹಾಸಂಗಮ

ಶಹಾಪುರ, 
 ಗುರು ಪೂರ್ಣಿಮೆ ಅಂಗವಾಗಿ ಸಹಜ ಯೋಗ ಪ್ರತಿಷ್ಠಾನ ರಾಯಚೂರು, ಶಹಾಪುರ ಶಾಖೆಯ ವತಿಯಿಂದ ಗುರುವಾರ ನಗರದದಲ್ಲಿ ಗುರು ವಂದನಾ ಕಾರ್ಯಕ್ರಮ  ನೆರವೇರಿತು. ಪೂಜ್ಯ ಶ್ರೀ ಗುರುದತ್ತ ಗುರೂಜೀ ಹಾಗೂ ಶ್ರೀ ವಿರೂಪಾಕ್ಷ ಗುರೂಜೀ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಚೂರು, ಯಾದಗಿರಿ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸತ್ಸಂಗಿಗಳು ಭಾಗವಹಿಸಿ ಗುರುಗಳಿಗೆ ಭಕ್ತಿಪೂರ್ವಕ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗುರುಪೀಠಕ್ಕೆ ಪುಷ್ಪಾರ್ಚನೆ, ಪಾದಪೂಜೆ, ಭಜನೆ ಹಾಗೂ ಧ್ಯಾನ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಗುರುದತ್ತ ಗುರೂಜೀ,ಗುರು ಪೂರ್ಣಿಮೆ ನಮ್ಮೊಳಗಿನ ಜ್ಞಾನ, ಸಂಸ್ಕಾರ ಮತ್ತು ಗುರುತ್ವವನ್ನು ಜಾಗೃತಗೊಳಿಸುವ ಪವಿತ್ರ ದಿನವಾಗಿದೆ. ಧ್ಯಾನ, ಸೇವೆ ಮತ್ತು ಸದಾಚಾರದ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ತಿಳಿಸಿದರು.
ಶ್ರೀ ವಿರೂಪಾಕ್ಷ ಗುರೂಜೀ ಅವರು ಸಹ ಆಧ್ಯಾತ್ಮಿಕ ಜೀವನದಲ್ಲಿ ಗುರುಗಳ ಮಾರ್ಗದರ್ಶನದ ಮಹತ್ವವನ್ನು ವಿವರಿಸಿ, ಆತ್ಮೋನ್ನತಿಗೆ ಸಹಜ ಯೋಗ ಸಾಧನೆಯ ಅಗತ್ಯವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಸತ್ಸಂಗಿಗಳು ಭಜನೆ, ಧ್ಯಾನ ಹಾಗೂ ಗುರು ವಂದನೆಯಲ್ಲಿ ತೊಡಗಿಸಿಕೊಂಡು ಭಕ್ತಿಭಾವ ಮೆರೆದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸ್ವಯಂಸೇವಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕೊನೆಯಲ್ಲಿ ಮಹಾಪ್ರಸಾದ ವಿತರಿಸಲಾಯಿತು.

Leave a Reply

Your email address will not be published. Required fields are marked *