ದೋರನಹಳ್ಳಿಯಲ್ಲಿ ಗುರುಪೂರ್ಣಿಮಾ ವೈಭವ: ಮಠಗಳಲ್ಲಿ ಭಕ್ತಿಸಾಗರ

ಶಹಾಪೂರ : ಗುರುಪೂರ್ಣಿಮೆಯ ಅಂಗವಾಗಿ ದೋರನಹಳ್ಳಿಯ ಹಿರೇಮಠ, ಚಿಕ್ಕಮಠ, ಶ್ರೀಸಿದ್ದಾರೂಢ ಸಿದ್ದಾಶ್ರಮ ಹಾಗೂ ಏಕದಂಡಗಿ ಮಠಗಳಲ್ಲಿ ಬುಧವಾರ ಭಕ್ತಿಭಾವದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ಗುರುಗಳ ದರ್ಶನ ಪಡೆದು ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ತಾಲೂಕಿನ ದೋರನಹಳ್ಳಿಯಲ್ಲಿ ಶ್ರೀಶಾಂಭವಿಮಾತಾ ಚಿಕ್ಕಮಠದಲ್ಲಿ ಪೂಜ್ಯ ಶ್ರೀ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಮಹರ್ಷಿ ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಗುರು-ಶಿಷ್ಯ ಪರಂಪರೆಯನ್ನು ಬಲಪಡಿಸಿದ ಸ್ಮರಣೀಯ ದಿನವೇ ಗುರುಪೂರ್ಣಿಮೆ ಎಂದು ವಿವರಿಸಿದರು. ಗುರು-ಶಿಷ್ಯರ ಸಂಬಂಧ ಯುಗಯುಗಾಂತರಗಳಿಂದ ಜ್ಞಾನ ಮತ್ತು ಸಂಸ್ಕೃತಿಯ ವಿಸ್ತಾರಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಗುಡ್ಡದ ಶ್ರೀಮಹಾಂತೇಶ್ವರ ದೇವಸ್ಥಾನದಲ್ಲಿ ಸಗರ ಗ್ರಾಮದ ತುಂಬಗಿ ಪರಿವಾರದವರ ವತಿಯಿಂದ ಗುರು ವಂದನಾ ಹಾಗೂ ಪಾದಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಹಿರೇಮಠದ ಪೂಜ್ಯ ಶ್ರೀ ಅಭಿನವ ಮಹಾಂತೇಶ್ವರ ಶಿವಾಚಾರ್ಯರಿಗೆ ಭಕ್ತರು ಪಾದಪೂಜೆ ಸಲ್ಲಿಸಿದರು. ಆಶೀರ್ವಚನ ನೀಡಿದ ಶ್ರೀಗಳು, ಗುರು ಮತ್ತು ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವಿನಾಭಾವ ಸಂಬಂಧ ಹೊಂದಿದ್ದು, ಜೀವನದಲ್ಲಿ ಗುರಿ ತಲುಪಲು ಗುರುಗಳ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.

ಶ್ರೀಸಿದ್ದಾರೂಢ ಸಿದ್ದಾಶ್ರಮದಲ್ಲೂ ಗುರುಪೂರ್ಣಿಮೆಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಅವಧೂತರಾದ ಶ್ರೀ ಭೀಮಾಶಂಕರಾನಂದ ಅವಧೂತರು ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಭಕ್ತರು ದರ್ಶನ ಪಡೆದು ಮಂತ್ರಾಕ್ಷತೆ ಸ್ವೀಕರಿಸಿ ಕೃತಾರ್ಥರಾದರು.

ಕಾರ್ಯಕ್ರಮದ ಅಂಗವಾಗಿ ಚಿಕ್ಕಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮಹಾಂತೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಗೆ ಹುಗ್ಗಿ, ಚಪಾತಿ, ರೊಟ್ಟಿ, ಪಲ್ಯ, ಅನ್ನ, ಸಾಂಬಾರ್ ಹಾಗೂ ಹಪ್ಪಳದ ಮಹಾಪ್ರಸಾದ ವಿತರಿಸಲಾಯಿತು. ಜಿಟಿ-ಜಿಟಿ ಮಳೆಯ ನಡುವೆಯೂ ಭಕ್ತರು ಉತ್ಸಾಹದಿಂದ ಮಹಾಪ್ರಸಾದ ಸ್ವೀಕರಿಸಿದರು.

ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕೀಯ ಮುಖಂಡರಾದ ಮಹೇಶರೆಡ್ಡಿಗೌಡ ಮುದ್ನಾಳ, ಡಾ. ಭೀಮಣ್ಣ ಮೇಟಿ, ಚಂದ್ರಶೇಖರ ಮಾಗನೂರ, ಪರಶುರಾಮ ಕುರಕುಂದಿ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ ಹಾಗೂ ರಾಜು ಆನೇಗುಂದಿ ಸೇರಿದಂತೆ ಅನೇಕ ಗಣ್ಯರು ವಿವಿಧ ಮಠಗಳಿಗೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದರು.

Leave a Reply

Your email address will not be published. Required fields are marked *