ಶಹಾಪುರ : ಲೋಕಕ್ಕೆ ಜ್ಞಾನದ ಬೆಳಕನ್ನು ನೀಡಿದ ಮಹಾನ್ ಋಷಿ ಶ್ರೀ ವೇದವ್ಯಾಸರು ಭರತಖಂಡದಲ್ಲಿ ಅವತರಿಸಿದ ಮೇರುಶಕ್ತಿ ಎಂದು ಉತ್ತರಾಧಿ ಮಠದ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದ ಹಳಪೇಟೆಯ ಶ್ರೀ ರಾಯರ ಸನ್ನಿಧಿಯಲ್ಲಿ ಆಶೀರ್ವಚನ ನೀಡಿದ ಅವರು, ವೇದಜ್ಞಾನದ ಮೂಲಕ ಮೋಕ್ಷದ ಮಾರ್ಗವನ್ನು ತೋರಿದವರು ಶ್ರೀ ವೇದವ್ಯಾಸರು. ಅವರಿಂದಲೇ ವೇದಗಳ ವಿಭಾಗವಾಗಿದ್ದು, ನಂತರ ಬ್ರಹ್ಮಸೂತ್ರಗಳನ್ನು ಶ್ರೀ ಮಧ್ವಾಚಾರ್ಯರು ರಚಿಸಿದರು. ಅವುಗಳಿಗೆ ಟೀಕಾಕೃತ್ಪಾದರು ಭಾಷ್ಯ ಬರೆದು ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಗುರುಪರಂಪರೆಯ ಸ್ಮರಣೆ ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ವಿಶೇಷವಾಗಿ ಗುರುಪೂರ್ಣಿಮೆಯ ದಿನ ಗುರುಗಳನ್ನು ಸ್ಮರಿಸಿ ಗ್ರಂಥಾಧ್ಯಯನ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಸಿ ಆತ್ಮೋನ್ನತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬೆಳಗ್ಗೆಯಿಂದ ಭಕ್ತರು ಶ್ರೀಗಳಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಶ್ರೀಗಳು ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿದರು. ನಂತರ ಹಿರಿಯ ನ್ಯಾಯವಾದಿ ಶ್ರೀನಿವಾಸರಾವ ಕುಲಕರ್ಣಿ ಕೊಳ್ಳೂರ ಅವರ ನಿವಾಸದಲ್ಲಿ ವಿಶೇಷ ಶ್ರೀರಾಮದೇವರ ಪೂಜೆ ಜರುಗಿತು. ಸಮಸ್ತ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀಗಳ ಫಲ-ಮಂತ್ರಾಕ್ಷತೆ ಸ್ವೀಕರಿಸಿ ಕೃತಾರ್ಥರಾದರು.