ರಸ್ತಾಪುರದ ಭೀಮಕವಿ ಕನ್ನಡ ಸಾಹಿತ್ಯದ ಧ್ರುವತಾರೆ: ಡಾ. ಶಾಂತಪ್ಪ ಡಂಬಳ

ಶಹಾಪುರ: 
ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಶಿಕ್ಷಕ, ನಾಟಕಕಾರ, ಪುರಾಣ ರಚನಕಾರ, ಪ್ರವಚನಕಾರ ಹಾಗೂ ಕವಿ ರಸ್ತಾಪುರದ ಭೀಮಕವಿ ಕನ್ನಡ ಸಾರಸ್ವತ ಲೋಕದ ಧ್ರುವತಾರೆಯಾಗಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಸ್ತರಣಾ ಕೇಂದ್ರದ ಸಹಾಯಕ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ. ಶಾಂತಪ್ಪ ಎನ್. ಡಂಬಳ ಹೇಳಿದರು.
ನಗರದ ಕನ್ನಡ ಭವನದಲ್ಲಿ ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಗರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ಚೇತನ – ರಸ್ತಾಪುರದ ಭೀಮಕವಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೀಮಕವಿ ಅಪಾರ ಪಾಂಡಿತ್ಯ ಹಾಗೂ ಅದ್ಭುತ ಪ್ರತಿಭೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಕಾವ್ಯಗಳು, ಬಯಲಾಟಗಳು ಮತ್ತು ಪುರಾಣಗಳು ಸಗರನಾಡಿನ ಗ್ರಾಮೀಣ ಜಾನಪದ ಬದುಕಿನಲ್ಲಿ ವಿಶೇಷ ಸ್ಥಾನ ಪಡೆದಿವೆ ಎಂದು ಹೇಳಿದರು.
ಶರಭಲಿಂಗೇಶ್ವರ, ಮಹಾಂತೇಶ್ವರ, ಚರಬಸವೇಶ್ವರ ಸೇರಿದಂತೆ ಅನೇಕ ಶರಣರ ಪುರಾಣಗಳನ್ನು ರಚಿಸುವ ಮೂಲಕ ಶರಣರ ಜೀವನ, ತತ್ವ ಹಾಗೂ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಭೀಮಕವಿ, ಸಾಹಿತ್ಯ ಮತ್ತು ಮೌಲ್ಯಾಧಾರಿತ ಬದುಕಿನ ಸಮನ್ವಯವನ್ನು ತಮ್ಮ ಕೃತಿಗಳಲ್ಲಿ ಮೂಡಿಸಿದ್ದಾರೆ. ಅವರ ಪ್ರಕಟಿತ ಹಾಗೂ ಅಪ್ರಕಟಿತ ಸಾಹಿತ್ಯವನ್ನು ಸಂಗ್ರಹಿಸಿ ಅಧ್ಯಯನ, ಪ್ರಕಟಣೆ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಗತಿಪರ ಚಿಂತಕ ಹಾಗೂ ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷ ಆರ್. ಚನ್ನಬಸ್ಸು ವನದುರ್ಗ ಮಾತನಾಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜವನ್ನು ಬೆಳಗಿಸಿದ ಭೀಮಕವಿಯ ವ್ಯಕ್ತಿತ್ವ ಮತ್ತು ಸಾಧನೆ ಇಂದಿನ ಪೀಳಿಗೆಗೆ ಆದರ್ಶವಾಗಿದೆ. ಇಂತಹ ಮಹನೀಯರ ಸಾಹಿತ್ಯವನ್ನು ಜನರಿಗೆ ಪರಿಚಯಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಮಾತನಾಡಿ, ಭೀಮಕವಿಯ ಸಾಹಿತ್ಯ ಮತ್ತು ಚಿಂತನೆಗಳನ್ನು ಯುವಜನತೆಗೆ ಪರಿಚಯಿಸುವ ಮೂಲಕ ಉತ್ತಮ ಸಾಹಿತ್ಯಿಕ ವಾತಾವರಣ ನಿರ್ಮಿಸಲು ಪರಿಷತ್ತು ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಶಿವಣ್ಣ ಇಜೇರಿ, ಡಾ. ಗೋವಿಂದರಾಜ ಆಲ್ದಾಳ, ಡಾ. ನಾಗಣ್ಣ ಕಿಲಾರಿ, ಸಣ್ಣನಿಂಗಪ್ಪ ನಾಯ್ಕೊಡಿ, ಡಾ. ದೇವಿಂದ್ರಪ್ಪ ಹಡಪದ, ಭೀಮಕವಿಯ ವಂಶಸ್ಥ ಭೀಮಕವಿ ಟಣಕೆದಾರ, ಶರಣಬಸವ ಪೊಲೀಸ್ ಬಿರಾದಾರ, ಮಹೇಶ ಪತ್ತಾರ, ಡಾ. ರಾಘವೇಂದ್ರ ಹಾರಣಗೇರಾ, ಚಂದ್ರಕಲಾ ಗೂಗಲ್, ಸಾಯಬಣ್ಣ ಮಡಿವಾಳಕರ್, ಪ್ರಕಾಶ ದೊರೆ, ದೇವಿಂದ್ರಪ್ಪ ವಿಶ್ವಕರ್ಮ, ಬಸವರಾಜ ಗುಡಿಮನಿ, ಮೀನಾಕ್ಷಿ ಹೊಸಮನಿ, ಕಾವೇರಿ ಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ಕರೇಗಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ರಂಗನಾಥ ದೊರೆ ಕಾರ್ಯಕ್ರಮ ನಿರೂಪಿಸಿದರು. ನಿರ್ಮಲಾ ತುಂಬಗಿ ಸ್ವಾಗತಿಸಿದರು. ಚಂದ್ರಶೇಖರ ವೈದ್ಯ ಪ್ರಾರ್ಥಿಸಿದರು. ಸುರೇಶಬಾಬು ಅರುಣಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಬಳಿಕ ಡಾ. ಧರ್ಮಣ್ಣ ಬಡಿಗೇರ, ಭೀಮಣ್ಣ ಅಂಚೆಸೂಗುರ, ಅಂಬ್ಲಯ್ಯ ಸೈದಾಪುರ, ನಾಗರಾಜ ಹಾಗೂ ಶರಬಣ್ಣ ಅವರು ರಸ್ತಾಪುರದ ಭೀಮಕವಿಯ ಸಾಹಿತ್ಯದ ಕುರಿತು ಸಂವಾದ ನಡೆಸಿದರು.

Leave a Reply

Your email address will not be published. Required fields are marked *