ಶಹಾಪುರ,,
ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ದೋರನಹಳ್ಳಿ ಪಟ್ಟಣದ ಪಿಎಂಶ್ರೀ ಕೆಪಿಎಸ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚುನಾವಣಾ ಆಯೋಗದ ಮಾದರಿಯಲ್ಲೇ ಶಾಲಾ ಸಂಸತ್ ಚುನಾವಣೆ ನಡೆಸಿ ಗಮನ ಸೆಳೆದಿದೆ.

ಶುಕ್ರವಾರ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳು ತರಗತಿವಾರು ಪ್ರಚಾರ ನಡೆಸಿ ತಮ್ಮ ಪ್ರಣಾಳಿಕೆಗಳನ್ನು ಮಂಡಿಸಿ ಮತಯಾಚಿಸಿದರು. ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ಭರವಸೆಗಳನ್ನು ನೀಡಿ ಮತದಾರರ ಮನ ಗೆಲ್ಲಲು ಪ್ರಯತ್ನಿಸಿದರು.
ಮತದಾನದ ವೇಳೆ ವಿದ್ಯಾರ್ಥಿಗಳು ಗುರುತಿನ ಚೀಟಿ ಪ್ರದರ್ಶಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಚುನಾವಣಾ ಆಯೋಗದ ಮಾದರಿಯಲ್ಲೇ ನಡೆದಿದ್ದು, ಮತದಾನ ಮುಗಿದ ಬಳಿಕ ಬ್ಯಾಲೆಟ್‌ಗಳನ್ನು ಭದ್ರಪಡಿಸಿ ಶನಿವಾರ ಮತ ಎಣಿಕೆ ನಡೆಸಲಾಯಿತು.

ಮತ ಎಣಿಕೆಯಲ್ಲಿ ಸಾಬಣ್ಣ, ಮನೋಜ್, ಶಿವರಾಜ್, ವಾಣಿಶ್ರೀ, ಪ್ರಾರ್ಥನಾ, ಭಾಗ್ಯಶ್ರೀ, ಶರಣಮ್ಮ, ಮಾಲಾಶ್ರೀ ಹಾಗೂ ಫಯಾಜ್ ಆಯ್ಕೆಯಾಗಿದ್ದು, ಸಾಬಣ್ಣ ಮುಖ್ಯಮಂತ್ರಿಯಾಗಿ ಹಾಗೂ ಮನೋಜ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇತರರಿಗೆ ವಿವಿಧ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಿ ಶಾಲಾ ಸಂಸತ್ ರಚಿಸಲಾಯಿತು. ಬಳಿಕ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಗುರು ಸಿದ್ದಪ್ಪ ಸಿಂಘೆ, ಶಿಕ್ಷಕರಾದ ಅನಿಲ್‌ಕುಮಾರ, ನೀಲಮ್ಮ, ಉಮಾರಾಣಿ, ರೇಷ್ಮಾ, ಶೀಲಾ, ಶಿಲ್ಪಾ, ಶಿವಲೀಲಾ, ಪ್ರಿಯಾಂಕ ಹಾಗೂ ಅತಿಥಿ ಶಿಕ್ಷಕರಾದ ಚಂದ್ರಶೇಖರ, ಸಂಗಣ್ಣ, ರೇಣುಕಾ, ಶಕುಂತಲಾ, ಸುಷ್ಮಾ, ಭಾಗೀರಥಿ, ಶ್ವೇತಾ, ಮಹಾಲಕ್ಷ್ಮಿ, ವಿಜಯಲಕ್ಷ್ಮಿ, ಗ್ರಂಥಪಾಲಕ ಹಯ್ಯಾಳಪ್ಪ ಗುಂಟನೂರ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.