ವಡಿಗೇರಾ,
ಗ್ರಾಮೀಣ ಕೂಲಿ ಕಾರ್ಮಿಕರಿಗೆ ನಿರಂತರ ಉದ್ಯೋಗ ಒದಗಿಸಿ ಗೂಳೆ ತಡೆಗಟ್ಟುವ ಉದ್ದೇಶದಿಂದ ವಿಕಸಿತ ಭಾರತ ಫಾರ್ ಗ್ಯಾರಂಟಿ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಕಿರಾಣಬಾಬು ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜುಲೈ 1ರಿಂದ ವಿಬಿ-ಜಿ ರಾಮ್-ಜಿ ಯೋಜನೆ ಜಾರಿಯಾಗಿದ್ದು, ಪಿಡಿಒಗಳು, ತಾಂತ್ರಿಕ ಸಹಾಯಕರು ಹಾಗೂ ಸಿಬ್ಬಂದಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಯೋಜನೆಯಡಿ ದಿನಗೂಲಿ ಮೊತ್ತವನ್ನು ₹382ಕ್ಕೆ ಹಾಗೂ ವಾರ್ಷಿಕ ಮಾನವ ದಿನಗಳನ್ನು 125ಕ್ಕೆ ಹೆಚ್ಚಿಸಲಾಗಿದ್ದು, ಒಟ್ಟು 318 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಗ್ರಾಮೀಣ ಜನರಿಗೆ ಅನುಕೂಲವಾಗುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕೇವಲ ನಾಮಕವಸ್ತುವಿನಂತೆ ಕೆಲಸ ಮಾಡದೆ, ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇ-ಕೆವೈಸಿ ಶೇ.100 ಸಾಧನೆ, ಪ್ರತಿದಿನ ಎನ್‌ಎಂಆರ್ ದಾಖಲಾತಿ, ಕ್ರಿಯಾ ಯೋಜನೆ ರೂಪಿಸಿ ಕೆಲಸ ಹಂಚಿಕೆ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಮಳೆ ಕೊರತೆಯಿಂದ ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ತಡೆಯಲು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಕಾಮಗಾರಿಗಳನ್ನು ಆರಂಭಿಸಬೇಕು. ನಿಯಮಾನುಸಾರ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಬಿ-ಜಿ ರಾಮ್-ಜಿ ಯೋಜನೆಯ ಕುರಿತು ಗ್ರಾಮೀಣ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಿ, ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲು ಗ್ರಾಮ ಕಾಯಕ ಮಿತ್ರರು ಹಾಗೂ ಬಿಎಫ್‌ಟಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್, ಟಿಎಂಐಎಸ್ ಮಲ್ಲಿಕಾರ್ಜುನ, ಎಡಿಎಮ್ ದೇವಮ್ಮ, ತಾಂತ್ರಿಕ ಸಹಾಯಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.