ಚಾಮರಾಜನಗರ,,
ಜಿಲ್ಲಾ ಪತ್ರಕರ್ತರ ಕ್ಷೇಮ ನಿಧಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ₹5 ಲಕ್ಷ ದೇಣಿಗೆ ನೀಡಿ ಪತ್ರಕರ್ತರ ಕಲ್ಯಾಣಕ್ಕೆ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರು,ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸಮ್ಮುಖದಲ್ಲಿ ₹5 ಲಕ್ಷದ ಚೆಕ್ ಅನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಅವರಿಗೆ ಹಸ್ತಾಂತರಿಸಿದರು.ಈ ದೇಣಿಗೆಯೊಂದಿಗೆ ಜಿಲ್ಲಾ ಪತ್ರಕರ್ತರ ಕ್ಷೇಮ ನಿಧಿಯ ಒಟ್ಟು ಮೊತ್ತ ₹11 ಲಕ್ಷಕ್ಕೆ ಏರಿಕೆಯಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಶಾಸಕ ಪುಟ್ಟರಂಗಶೆಟ್ಟಿ ಅವರ ಸಮಾಜಮುಖಿ ನಡೆಗೆ ಅಭಿನಂದನೆ ಸಲ್ಲಿಸಿದರು. ಪತ್ರಕರ್ತರ ಸಂಕಷ್ಟದ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ ರೂಪುಗೊಂಡಿರುವ ಕ್ಷೇಮನಿಧಿಗೆ ನೀಡಿರುವ ಈ ಕೊಡುಗೆ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಲಿ ಎಂದು ಅವರು ಆಶಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಶಾಸಕ ಪುಟ್ಟರಂಗಶೆಟ್ಟಿ ಅವರ ಉದಾರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು.