ಮಲಮೂತ್ರಗಳ ತಾಣವಾದ ಶಹಾಪುರ ಹಳೆಯ ಬಸ್ ನಿಲ್ದಾಣ

ಬಸವರಾಜ ಕರೇಗಾರ

ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರ ಪರದಾಟ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ

ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಳೆಯ ಬಸ್ ನಿಲ್ದಾಣ ಇಂದು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯ ಕೇಂದ್ರವಾಗಿದ್ದು, ಸ್ವಚ್ಛತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯ ಅಭಾವದಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗಾಗಿ ಅಳವಡಿಸಲಾಗಿರುವ ನೀರಿನ ದಂಡಿಗಳು ಇದ್ದರೂ ನಲ್ಲಿಗಳಲ್ಲಿ ನೀರು ಬಾರದ ಕಾರಣ ಪ್ರಯಾಣಿಕರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಬೇಸಿಗೆ ಹಾಗೂ ಮಳೆಗಾಲದಲ್ಲಿ ಸಾವಿರಾರು ಜನರು ಬಸ್ ನಿಲ್ದಾಣವನ್ನು ಬಳಸುತ್ತಿದ್ದು, ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, ಬಸ್ ನಿಲ್ದಾಣದ ಖಾಲಿ ಜಾಗಗಳಲ್ಲಿ ಕಸದ ರಾಶಿ ತುಂಬಿಕೊಂಡಿದ್ದು, ಸ್ವಚ್ಛತೆ ಸಂಪೂರ್ಣ ಹಾಳಾಗಿದೆ. ಸಾರ್ವಜನಿಕ ಶೌಚಾಲಯಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕೆಲವರು ಬಯಲು ಪ್ರದೇಶದಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದ ಬಸ್ ನಿಲ್ದಾಣದ ಸುತ್ತಮುತ್ತ ದುರ್ವಾಸನೆ ಆವರಿಸಿಕೊಂಡು ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ.

ಸ್ಥಳೀಯರ ಪ್ರಕಾರ, ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಈ ಸಮಸ್ಯೆ ತಂದರೂ ಶಾಶ್ವತ ಪರಿಹಾರ ದೊರಕಿಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ದೊಡ್ಡ ಮಟ್ಟದ ಘೋಷಣೆಗಳು ಕೇಳಿಬರುತ್ತಿದ್ದರೂ, ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸಾರ್ವಜನಿಕರು ಹಾಗೂ ಪ್ರಯಾಣಿಕರು ತಕ್ಷಣ ಬಸ್ ನಿಲ್ದಾಣದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ವಹಣೆ ಹಾಗೂ ಕಸದ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 ಸಾರ್ವಜನಿಕರ ಪ್ರಶ್ನೆಗಳು

* ಬಸ್ ನಿಲ್ದಾಣದಲ್ಲಿ ನೀರಿನ ದಂಡಿಗಳಿದ್ದರೂ ನೀರಿಲ್ಲ. 
* ಕಸದ ರಾಶಿ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆ ಮುಂದಾಗದಿರುವುದು ಏಕೆ?
* ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಯಾರ ಜವಾಬ್ದಾರಿ?
* ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯ ಒದಗಿಸಲು ಅಭಿವೃದ್ಧಿ ನಿಧಿಯಲ್ಲಿ ಹಣವಿಲ್ಲವೇ?
* ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವುದು ಯಾವಾಗ?


ಅಭಿವೃದ್ಧಿಯ ಮಾತುಗಳಿಗಿಂತ ಮೊದಲು ಸಾರ್ವಜನಿಕರಿಗೆ ಸ್ವಚ್ಛತೆ, ಕುಡಿಯುವ ನೀರು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅತ್ಯಗತ್ಯ” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *