ಬಸವರಾಜ ಕರೇಗಾರ
ಬೆಂಗಳೂರು: 2028ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ನಾಯಕತ್ವದ ಕುರಿತು ಚರ್ಚೆ ತೀವ್ರಗೊಂಡಿದೆ. ಆದರೆ ಚುನಾವಣೆಯಿಂದ ದೂರ ಉಳಿಯುವುದು ರಾಜಕೀಯ ನಿವೃತ್ತಿ ಎಂದರ್ಥವಲ್ಲ ಎಂಬುದನ್ನು ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಈ ನಿರ್ಧಾರವನ್ನು ಕೇವಲ ವೈಯಕ್ತಿಕ ಚುನಾವಣಾ ನಿವೃತ್ತಿಯೆಂದು ನೋಡುವುದಕ್ಕಿಂತ, 2028ರ ಕಾಂಗ್ರೆಸ್ ರಾಜಕಾರಣದ ಮೇಲೆ ಬೀರುವ ಪರಿಣಾಮದ ದೃಷ್ಟಿಯಿಂದ ನೋಡುವುದು ಅಗತ್ಯ. ಐದು ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಅನುಭವ, ಮುಖ್ಯಮಂತ್ರಿ ಹುದ್ದೆ ಹಾಗೂ ಹಿಂದುಳಿದ ವರ್ಗಗಳ ರಾಜಕೀಯದಲ್ಲಿ ಅವರ ಪ್ರಭಾವ ಇವೆಲ್ಲವೂ ಕಾಂಗ್ರೆಸ್‌ನ ಚುನಾವಣಾ ಲೆಕ್ಕಾಚಾರದಲ್ಲಿ ಪ್ರಮುಖ ಅಂಶಗಳಾಗಿವೆ.
ಕುರುಬ ಸಮುದಾಯದ ರಾಜಕೀಯ ಪ್ರಶ್ನೆ..
ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಪ್ರಮುಖ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರದಿಂದ 2028ರ ವೇಳೆಗೆ ಕುರುಬ ಸಮುದಾಯದ ರಾಜಕೀಯ ನಾಯಕತ್ವ ಯಾರ ಕೈಯಲ್ಲಿ ಇರಲಿದೆ? ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.
ರಾಜ್ಯದ ಹಲವು ಕ್ಷೇತ್ರಗಳಲ್ಲಿ ಕುರುಬ ಮತದಾರರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಅವರು ನಿರ್ಣಾಯಕ ಮತಬ್ಯಾಂಕ್ ಆಗಿದ್ದರೆ, ಇನ್ನೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವು-ಸೋಲಿನ ಮೇಲೆ ಪ್ರಭಾವ ಬೀರುವಷ್ಟು ಸಂಖ್ಯಾಬಲ ಹೊಂದಿದ್ದಾರೆ ಎಂಬುದು ಸ್ಥಳೀಯ ರಾಜಕೀಯ ಚರ್ಚೆಯಾಗಿದೆ.
ಶಹಾಪುರ, ಸುರಪುರ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿಯೂ ಕುರುಬ ಮತದಾರರ ರಾಜಕೀಯ ಪ್ರಾಮುಖ್ಯತೆ ಚರ್ಚೆಯಲ್ಲಿದೆ. ಹೀಗಾಗಿ 2028ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಅಭ್ಯರ್ಥಿಯಾಗದೇ ಇದ್ದರೂ, ಅವರ ರಾಜಕೀಯ ನಿಲುವು ಮತ್ತು ಸಾಮಾಜಿಕ ಪ್ರಭಾವವು ಚುನಾವಣಾ ಚರ್ಚೆಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ ಎನ್ನುವುದು ಸುಲಭದ ನಿರ್ಣಯವಲ್ಲ.
ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ..
ಸಿದ್ದರಾಮಯ್ಯ ಅವರ ನಂತರ ಕಾಂಗ್ರೆಸ್‌ನ ಮುಂದಿನ ಮುಖ ಯಾರು ಎಂಬ ಪ್ರಶ್ನೆ ಈಗಾಗಲೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಆಡಳಿತ ಮತ್ತು ಪಕ್ಷದ ಸಂಘಟನೆಯ ಮೇಲೆ ಅವರ ಪಾತ್ರ ಹೆಚ್ಚಾಗಿದೆ.
ಆದರೆ ಇದನ್ನು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಸಂಪೂರ್ಣವಾಗಿ ಬದಿಗೊತ್ತುತ್ತಿದೆ ಎಂಬುದಕ್ಕೆ ನೇರ ಸಾಕ್ಷ್ಯವೆಂದು ಹೇಳಲು ಸಾಧ್ಯವಿಲ್ಲ. ಸೆಪ್ಟೆಂಬರ್‌ನಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ ಇನ್ನೂ ಸಂಘಟಿತವಾಗಿದೆ ಎಂಬ ಚಿತ್ರಣವೂ ಕಂಡುಬಂದಿದೆ. ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಕೂಡ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಕೇವಲ ಮುಖ್ಯಮಂತ್ರಿ ಹುದ್ದೆಯಿಂದ ಅಳೆಯಬಾರದು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಹಿಂದ, ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಹಿಂದುಳಿದ ವರ್ಗಗಳ ರಾಜಕೀಯ ವಿಚಾರಗಳನ್ನು ಮತ್ತೆ ಪ್ರಸ್ತಾಪಿಸಿರುವುದು ಗಮನಾರ್ಹವಾಗಿದೆ. ಇದನ್ನು ಕೆಲವರು ಅವರ ದೀರ್ಘಕಾಲದ ರಾಜಕೀಯ ನಿಲುವಿನ ಮುಂದುವರಿಕೆಯೆಂದು ನೋಡಿದರೆ, ಇನ್ನೂ ಕೆಲವರು 2028ರ ಮುನ್ನ ತಮ್ಮ ಸಾಮಾಜಿಕ-ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳುವ ಪ್ರಯತ್ನವೆಂದು ವಿಶ್ಲೇಷಿಸುತ್ತಿದ್ದಾರೆ.
ಕಲಬುರಗಿ ಮೂರ್ತಿ ಪ್ರಕರಣ: ರಾಜಕೀಯ ಸಂದೇಶವೇ?..
ಇತ್ತೀಚೆಗೆ ಕಲಬುರಗಿಯಲ್ಲಿ ಸಿದ್ದರಾಮಯ್ಯ ಅವರ ಒಂಬತ್ತು ಅಡಿ ಎತ್ತರದ ಮೂರ್ತಿಯನ್ನು ಅನುಮತಿಯಿಲ್ಲದೆ ಸ್ಥಾಪಿಸಿ ನಂತರ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ ಘಟನೆ ಕಾಂಗ್ರೆಸ್‌ನ ಆಂತರಿಕ ರಾಜಕೀಯ ಚರ್ಚೆಗೆ ಮತ್ತಷ್ಟು ಇಂಧನ ನೀಡಿದೆ.
ಮೂರ್ತಿ ಸ್ಥಾಪನೆಯ ಹಿಂದೆ ಸಿದ್ದರಾಮಯ್ಯ ಬೆಂಬಲಿಗರಿದ್ದರು ಎಂದು ವರದಿಯಾಗಿದ್ದು, ಅನುಮತಿ ಪಡೆಯದ ಕಾರಣಕ್ಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಘಟನೆ ಡಿ.ಕೆ. ಶಿವಕುಮಾರ್ ಅವರ ಕಲಬುರಗಿ ಪ್ರವಾಸದ ಸಂದರ್ಭದಲ್ಲೇ ನಡೆದಿದ್ದರಿಂದ ರಾಜಕೀಯ ವಲಯದಲ್ಲಿ ಹಲವು ವ್ಯಾಖ್ಯಾನಗಳು ಕೇಳಿಬಂದಿವೆ. ಆದರೆ ಈ ಮೂರ್ತಿ ತೆರವು ಕಾಂಗ್ರೆಸ್ ಹೈಕಮಾಂಡ್ ಅಥವಾ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ನಡೆದಿದೆ ಎಂಬುದಕ್ಕೆ ಸಾರ್ವಜನಿಕವಾಗಿ ದೃಢವಾದ ಸಾಕ್ಷ್ಯ ಇಲ್ಲ.
“ನನ್ನದೇನು ನಡೆಯುತ್ತಿದೆ?” ಎಂಬ ಪ್ರಶ್ನೆಯ ರಾಜಕೀಯ ಅರ್ಥವೇನು?..
ಸರ್ಕಾರದಲ್ಲಿ ತಮ್ಮ ಮಾತಿಗೆ ಸೂಕ್ತ ಪ್ರಾಮುಖ್ಯತೆ ಸಿಗುತ್ತಿಲ್ಲ ಎಂಬ ರೀತಿಯ ಸಿದ್ದರಾಮಯ್ಯ ಅವರ ಹಿಂದಿನ ಹೇಳಿಕೆಗಳು ಹಾಗೂ ನಂತರದ ಬೆಳವಣಿಗೆಗಳನ್ನು ಒಟ್ಟಾಗಿ ನೋಡಿದಾಗ ಕಾಂಗ್ರೆಸ್‌ನೊಳಗಿನ ಅಧಿಕಾರ ಸಮೀಕರಣದ ಬಗ್ಗೆ ಚರ್ಚೆ ನಡೆಯುವುದು ಸಹಜ..
ಸಿದ್ದರಾಮಯ್ಯರ ರಾಜಕೀಯ ಅಧ್ಯಾಯ ಮುಗಿದಿದೆಯೇ?..
ಇಲ್ಲಿಯವರೆಗೆ ಲಭ್ಯವಿರುವ ಬೆಳವಣಿಗೆಗಳನ್ನು ನೋಡಿದರೆ ಸಿದ್ದರಾಮಯ್ಯರ ಚುನಾವಣಾ ರಾಜಕಾರಣದ ಅಧ್ಯಾಯ ಮುಕ್ತಾಯದತ್ತ ಸಾಗುತ್ತಿದೆ ಎಂಬುದು ಅವರ ಸ್ವಂತ ಘೋಷಣೆಯಿಂದ ಸ್ಪಷ್ಟ; ಆದರೆ ಅವರ ರಾಜಕೀಯ ಪ್ರಭಾವದ ಅಧ್ಯಾಯ ಮುಗಿದಿದೆ ಎಂದು ಹೇಳಲು ಸಾಧ್ಯವಿಲ್ಲ.
2028ರಲ್ಲಿ ಅವರು ಅಭ್ಯರ್ಥಿಯಾಗದಿದ್ದರೂ, ಕಾಂಗ್ರೆಸ್‌ನ ಅಭ್ಯರ್ಥಿಗಳ ಆಯ್ಕೆ, ಹಿಂದುಳಿದ ವರ್ಗಗಳ ರಾಜಕೀಯ, ಅಹಿಂದ ಸಮೀಕರಣ ಹಾಗೂ ಪಕ್ಷದ ಚುನಾವಣಾ ಕಾರ್ಯತಂತ್ರದ ಮೇಲೆ ಅವರ ನಿಲುವು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಹೀಗಾಗಿ ಈಗಿನ ಕರ್ನಾಟಕ ರಾಜಕಾರಣದ ನಿಜವಾದ ಪ್ರಶ್ನೆ ಸಿದ್ದರಾಮಯ್ಯ ನಿವೃತ್ತರಾಗುತ್ತಾರೆಯೇ? ಎನ್ನುವುದಕ್ಕಿಂತ ಚುನಾವಣೆಯಿಂದ ದೂರ ಉಳಿದ ಸಿದ್ದರಾಮಯ್ಯರ ರಾಜಕೀಯ ಪ್ರಭಾವವನ್ನು ಕಾಂಗ್ರೆಸ್ ಹೇಗೆ ನಿರ್ವಹಿಸಲಿದೆ? ಎಂಬುದಾಗಿದೆ.
ಬಿಜೆಪಿ ಪಕ್ಷ ಯಡಿಯೂರಪ್ಪನವರನ್ನು ಬಿಟ್ಟು 2023ರಲ್ಲಿ ಚುನಾವಣೆ ಎದುರಿಸಿ ಸೋತಿತ್ತು. ಅದೇ ರೀತಿಯಾಗಿ ಸಿದ್ದರಾಮಯ್ಯನವರನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲು ಕಷ್ಟ..!
2028ರ ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ನಾಯಕತ್ವ, ಕುರುಬ ಸಮುದಾಯದ ರಾಜಕೀಯ ಪಾತ್ರ ಮತ್ತು ಕಾಂಗ್ರೆಸ್‌ನ ಮುಂದಿನ ಸಾಮಾಜಿಕ ಸಮೀಕರಣ ಕರ್ನಾಟಕ ರಾಜಕಾರಣದ ಪ್ರಮುಖ ಚರ್ಚಾ ವಿಷಯಗಳಾಗುವ ಸಾಧ್ಯತೆ ಇದೆ..?