ಪ್ರಜಾಸೇವಾ ಅಭಿಯಾನ ಅರ್ಜಿಗಳ ಪರಿಶೀಲನೆ : ಪರಿಹಾರಕ್ಕೆ ಕ್ರಮ – ದರ್ಶನಾಪುರ

ಶಹಾಪುರ:

ಪ್ರಜಾಸೇವಾ ಅಭಿಯಾನದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳನ್ನು ಆಯಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲಿಸಿ, ಅರ್ಹತೆ ಆಧರಿಸಿ ಸ್ಥಳದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಸೇವಾ ಅಭಿಯಾನದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ಪರಿಶೀಲನೆ, ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ರಹಿತರು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸುಮಾರು 5 ಸಾವಿರ ನಿವೇಶನ ರಹಿತರಿಂದ ಅರ್ಜಿಗಳು ಬಂದಿದ್ದು, ಈ ಪೈಕಿ ಸುಮಾರು 3,500ರಿಂದ 4,000 ಜನರನ್ನು ಅರ್ಹತೆ ಆಧಾರದಲ್ಲಿ ಗುರುತಿಸಲಾಗುತ್ತಿದೆ. ಈಗಾಗಲೇ ಯಾದಗಿರಿ ರಸ್ತೆ ಬದಿಯ 50 ಎಕರೆ ಜಾಗದಲ್ಲಿ ನಿವೇಶನ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನೂ 50 ಎಕರೆ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಮಲ್ಲಯ್ಯನಗುಡ್ಡದ ಬಳಿಯ ಸರ್ವೇ ನಂ.120ರ ಜಮೀನಿನಲ್ಲಿ ನಿವೇಶನಗಳನ್ನು ಸಿದ್ಧಪಡಿಸಲಾಗಿದ್ದು, ಈಗಾಗಲೇ ಹಂಚಿಕೆ ಪ್ರಕ್ರಿಯೆ ನಡೆದಿದೆ. ಅರ್ಹತೆ ಹೊಂದಿರುವ ಯಾವುದೇ ನಿವೇಶನ ರಹಿತರು ವಂಚಿತರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸುಮಾರು 5 ಸಾವಿರ ಜನರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.ಯುಜಿಡಿ, ನೀರು ಸರಬರಾಜು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರವು ಯಾದಗಿರಿ ಜಿಲ್ಲೆಗೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಸಿದ್ಧತೆ ನಡೆಸುತ್ತಿದ್ದು, ಪ್ರತಿಯೊಬ್ಬ ಅರ್ಹ ನಿವೇಶನ ರಹಿತನಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪ್ರಧಾನಮಂತ್ರಿ ಆವಾಸ ಯೋಜನೆ: ಕೇಂದ್ರದ ಪಾಲಿನ ಹಣ ಬಾಕಿ.ಸ್ವಂತ ನಿವೇಶನ ಹೊಂದಿರುವ ಅಥವಾ ಹಳೆಯ ಮನೆ ಬಿದ್ದಿರುವ ಜಾಗದಲ್ಲಿ ಹೊಸ ಮನೆ ನಿರ್ಮಿಸಿಕೊಳ್ಳುವವರಿಗೆ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ₹2.70 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹3 ಲಕ್ಷ ಸಹಾಯಧನ ನೀಡಲಾಗುತ್ತಿದೆ ಎಂದರು.

2021-22ರಿಂದ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಪಾವತಿಸುತ್ತಿದೆ. ಆದರೆ ಕೇಂದ್ರ ಸರ್ಕಾರದ ಪಾಲಿನ ಹಣ ಬಿಡುಗಡೆಯಾಗದ ಕಾರಣ ಕೆಲ ಫಲಾನುಭವಿಗಳಿಗೆ ಮನೆ ನಿರ್ಮಾಣ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸುಮಾರು ₹13ರಿಂದ ₹14 ಕೋಟಿ ಕೇಂದ್ರದ ಪಾಲಿನ ಹಣ ಬರಬೇಕಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ದರ್ಶನಾಪುರ ಹೇಳಿದರು.

ಬರ ಪರಿಹಾರ ಶೀಘ್ರ ಘೋಷಣೆ.ರಾಜ್ಯದಾದ್ಯಂತ ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ ಶಹಾಪುರದಲ್ಲಿ ಶೇ.50ರಷ್ಟು ಬರ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಉಳಿದ ತಾಲೂಕುಗಳಲ್ಲಿ ಶೇ.20ರಿಂದ 30ರಷ್ಟು ಬರ ಪರಿಸ್ಥಿತಿ ವರದಿಯಾಗಿದೆ. ಹೀಗಾಗಿ ಕೆಲವು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸುವಲ್ಲಿ ವಿಳಂಬವಾಗಿದೆ ಎಂದರು.

ಕೃಷ್ಣಾ ಕಾಡಾ ವ್ಯಾಪ್ತಿಗೆ ಮಹಾರಾಷ್ಟ್ರದಿಂದ ನೀರು ಹರಿದು ಬಂದ ಕಾರಣ ಮೊದಲ ಬೆಳೆಗೆ ಸ್ವಲ್ಪ ಅನುಕೂಲವಾಗಿದೆ. ಆದರೆ ಭತ್ತ, ಹತ್ತಿ ಸೇರಿದಂತೆ ಪ್ರಮುಖ ಬೆಳೆಗಳ ಇಳುವರಿ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಹತ್ತಿ ಬೆಳೆ ಎರಡು ಬಾರಿ ಒಣಗಿದರೂ ರೈತರು ಮರುಬಿತ್ತನೆ ಮಾಡಿದ್ದಾರೆ. ಆದರೂ ಸಮರ್ಪಕ ಬೆಳೆ ಬಂದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ ಎಂದರು.

ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಅಧಿವೇಶನ ಮುಗಿದ ಬಳಿಕ ಬರ ಘೋಷಣೆ ಮಾಡುವ ಸಾಧ್ಯತೆ ಇದೆ. ರೈತರು ಆತಂಕಕ್ಕೊಳಗಾಗದೆ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.

ಅರ್ಜಿಗಳ ಪರಿಶೀಲನೆ:ನಗರಸಭೆ ಕಚೇರಿಯಲ್ಲಿ ನಡೆದ ಪರಿಶೀಲನಾ ಸಂದರ್ಭದಲ್ಲಿ ಪ್ರಜಾಸೇವಾ ಅಭಿಯಾನದಲ್ಲಿ ಸಲ್ಲಿಕೆಯಾಗಿದ್ದ ಬಾಕಿ ಅರ್ಜಿಗಳನ್ನು ಪರಿಶೀಲಿಸಲಾಯಿತು. ಇದೇ ವೇಳೆ ಸಾರ್ವಜನಿಕರಿಂದ ಹೊಸದಾಗಿ ಸಲ್ಲಿಸಲಾದ ಅಹವಾಲುಗಳನ್ನೂ ಸ್ವೀಕರಿಸಲಾಯಿತು.ಈ ಸಂದರ್ಭದಲ್ಲಿ ಪೌರಾಯುಕ್ತರಾದ ಜೀವನ್ ಕುಮಾರ್ ಕಟ್ಟಿಮನಿ ಹಾಗೂ ವಸಂತ ಸುರಪುರಕರ್ ಇದ್ದರು.

 

 

 

Leave a Reply

Your email address will not be published. Required fields are marked *