ತಾಲೂಕಾಡಳಿತದಿಂದ ಬಸವ ಜಯಂತಿ ಆಚರಣೆ |ಕಾಯಕ ತತ್ವದ ಮೂಲಕ ಸಮ ಸಮಾಜವನ್ನು ನಿರ್ಮಿಸಿದರು ಬಸವಣ್ಣನವರು : ಸಚಿವ ದರ್ಶನಾಪುರ 

ಶಹಾಪುರ,,

12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು.ಕಾಯಕ ತತ್ವದ ಮೂಲಕ ಸಮ ಸಮಾಜವನ್ನು ನಿರ್ಮಿಸಿದರು.ಅವರ ತತ್ವಗಳು, ಆದರ್ಶಗಳು ಇಂದಿಗೂ ಪ್ರಸ್ತುತ.ಅವರ ಜ್ಞಾನ, ಭಕ್ತಿ ಎಲ್ಲರಿಗೂ ಪ್ರೇರಣೆ. ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲ ಎಂದು ಬೋಧಿಸಿದರು ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ ಮತ್ತು ನಗರಸಭೆ ವತಿಯಿಂದ ಬಸವಣ್ಣನವರ 893ನೇ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು ಸಮಾಜ ಸುಧಾರಕ ಮತ್ತು ಅಭಿವೃದ್ಧಿ ಹರಿಕಾರರಾಗಿದ್ದರು. ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ, ಜ್ಞಾನದ ಬೆಳಕು ಚೆಲ್ಲಿದರು. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಳುವಳಿಯ ನೇತಾರರಾಗಿದ್ದರು ಎಂದು ಹೇಳಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲದಾಪುರ ಮಾತನಾಡಿ, ಬಸವಣ್ಣನವರ ಆಶಯ ಮಾನವೀಯತೆಯ ಮೌಲ್ಯಗಳನ್ನು ಹೊಂದಿರುವ ಸಮಾಜವನ್ನು ನಿರ್ಮಿಸುವುದಾಗಿತ್ತು. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದರು.ಅವರ ವಿಚಾರಗಳು ಇಂದಿಗೂ ಆದರ್ಶವಾಗಿವೆ ಎಂದರು.

ಆರಂಭದಲ್ಲಿ ಚರಬಸವೇಶ್ವರ ಕಮಾನಿನಿಂದ ಬಸವಣ್ಣನವರ ಭಾವಚಿತ್ರ ಅದ್ದೂರಿಯಾಗಿ ಮೆರವಣಿಗೆ ಜರುಗಿತು.ಕಲಬುರಗಿ ಮಹಿಳಾ ಕಾಲೇಜು ಸಮಾಜ ಶಾಸ್ತ್ರ ಅಧ್ಯಾಪಕರಾದ ಡಾ.ಮಹೇಶಕುಮಾರ ಉಪನ್ಯಾಸ ನೀಡಿದರು. ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಖಜಾನಾಧಿಕಾರಿ ಮೊನಪ್ಪ ಶಿರವಾಳ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಸಿದ್ದಣ್ಣ ಸಾಹು ಆರಬೋಳ,ಪಿಐ ಶರಣಗೌಡ, ಮಲ್ಲಿಕಾರ್ಜುನ ಎಸ್.ಎಂ.ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.