ಶಹಾಪುರ,,

ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಗೆ ಬೇಕಾದ ಸಾಮಗ್ರಿಗಳ ಕೊರತೆಯಿಂದ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಇಂದು ತಾಲೂಕು ಆಡಳಿತ ವೈದ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು ಸರಕಾರಿ ಆಸ್ಪತ್ರೆಗಳು ಬಡವರಿಗೆ ಪ್ರಾಣ ಜೀವಾಳವಿದ್ದಂತೆ. ಹೆಚ್ಚಾಗಿ ಬಡವರು ಸಾರ್ವಜನಿಕ ಆಸ್ಪತ್ರೆಗೆ ಬರುತ್ತಾರೆ. ಔಷಧಿಗಳ ಕೊರತೆಯಿಂದ ಖಾಸಗಿ ಮೆಡಿಕಲ್ ಗಳಲ್ಲಿ ಔಷಧಿಗಳು ತೆಗೆದುಕೊಳ್ಳುವ ಸಂದರ್ಭ ಒದಗಿಬಂದಿದೆ. ಹೆಚ್ಚಿನ ಬೆಲೆಗೆ ಸಿಗುವ ಔಷಧಿಗಳು ಬಡ ರೋಗಿಗಳಿಗೆ ಹೊರೆಯಾಗುತ್ತಿವೆ. ಆದ್ದರಿಂದ ಸರಕಾರ ಔಷಧಿಗಳ ಕೊರತೆ ನೀಗಿಸಬೇಕು. ಬೇಗನೆ ಔಷಧಿಗಳನ್ನು ತಾಲೂಕು ಆಸ್ಪತ್ರೆಗಳಿಗೆ ಪೂರೈಸಬೇಕು. ಶಸ್ತ್ರಚಿಕಿತ್ಸೆಗೆ ಬೇಕಾದ ಸಾಮಗ್ರಿಗಳನ್ನು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅಂಬರೀಶ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೋರನಹಳ್ಳಿ, ಉಪಾಧ್ಯಕ್ಷ ದೇವು ಗಂಗಾನಗರ, ಆಂಜನೇಯ ಇಬ್ರಾಹಿಂಪುರ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೇವು ಹಾಲ್ಬಾವಿ ಹಾಗೂ ಸುರೇಶ ಉಮ್ಮರದೊಡ್ಡಿ, ಮೌನೇಶ ಬುದ್ಧನಗರ, ಸಿದ್ದು ಗುತ್ತಿಗೆದಾರ, ಖಾದರ್ ಬಾಬು ಸೇರಿದಂತೆ ಇತರರು ಇದ್ದರು.
ಗುರುವಾರದಂದು ಜಿಲ್ಲಾ ಆರೋಗ್ಯ ಕೇಂದ್ರದಿಂದ ತಾಲೂಕು ಆಸ್ಪತ್ರೆಗೆ ಔಷಧಿಗಳು ಬರಲಿವೆ.ಶಸ್ತ್ರ ಚಿಕಿತ್ಸೆಗೆ ಬೇಕಾದ ಸಾಮಗ್ರಿಗಳು ಆಸ್ಪತ್ರೆಯಲ್ಲಿವೆ. ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸೆ,ಹೆರಿಗೆ ಶಸ್ತ್ರಚಿಕಿತ್ಸೆ,ಸಾಮಾನ್ಯ ಶಸ್ತ್ರ ಚಿಕಿತ್ಸೆ, ಉದರ ದರ್ಶಕ ಮಹಿಳಾ ಸಂತಾನ ಹರಣ ಶಸ್ತ್ರಚಿಕಿತ್ಸೆಗಳು ಆಸ್ಪತ್ರೆಯಲ್ಲಿ ನಡೆಯುತ್ತಿವೆ. ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ.ತಾಂತ್ರಿಕ ತೊಂದರೆಯಿಂದಾಗಿ ಸಿಟಿ ಸ್ಕ್ಯಾನ್ ಆರಂಭವಾಗಿಲ್ಲ. ಇನ್ನೆರಡು ವಾರದೊಳಗೆ ಸಿಟಿ ಸ್ಕ್ಯಾನ್ ಆರಂಭಿಸಲಾಗುವುದು. ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೂ ಖಾಸಗಿ ಮೆಡಿಕಲ್ ಗಳಿಗೆ ಚಿಟ್ಟಿ ಬರೆದು ರೋಗಿಗಳನ್ನು ಕಳುಹಿಸಕೂಡದು ನಮ್ಮಲ್ಲಿಯೇ ಸಿಗುವ ಔಷಧಿಗಳನ್ನು ಬರೆದು ಕೊಡಬೇಕು ಎಂದು ವೈದ್ಯರಿಗೆ ಸೂಚಿಸಲಾಗಿದೆ.
ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್
ಆಡಳಿತ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಶಹಪುರ