ವಿಜಯ್ ಗ್ಯಾಸ್ ಏಜೆನ್ಸಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ / ಸರದಿ ಸಾಲಿನಲ್ಲಿ ನಿಂತ ಗ್ರಾಹಕರು / ಸಿಲಿಂಡರ್ ಗಳನ್ನು ಮನೆಗೆ ತಲುಪಿಸುವಂತೆ ಏಜೆನ್ಸಿಗಳಿಗೆ ಸೂಚನೆ

ಶಹಾಪುರ,,

ಜಿಲ್ಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಮತ್ತು ಪೆಟ್ರೋಲ್ ಡೀಸೆಲ್ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ. ಸಾರ್ವಜನಿಕರ ಅಗತ್ಯಕ್ಕೆ ತಕ್ಕಷ್ಟು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ನಾರಾಯಣರಾವ್ ಬೋಯೆರ್ ಹೇಳಿದರು. ಬುಧುವಾರ ನಗರದ ವಿಜಯ ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಬಂಕ್ ಗಳಿಗೆ ಭೇಟಿ ನೀಡಿ ಮಾತನಾಡಿದರು. ಸರದಿ ಸಾಲಿನಲ್ಲಿ ನಿಂತ ಗ್ರಾಹಕರನ್ನು ಕಂಡ ಜಿಲ್ಲಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ಸಂದೇಶಗಳನ್ನು ಹರಿ ಬಿಡಲಾಗುತ್ತಿದ್ದು, ಅಂತಹ ಸಂದೇಶಗಳಿಗೆ ಯಾರೂ ಕಿವಿ ಕೊಡಬಾರದು. ಜಿಲ್ಲೆಯಲ್ಲಿ ಅಡುಗೆ ಅನಿಲ ಮತ್ತು ಪೆಟ್ರೋಲ್ ಡೀಸೆಲ್ ದ ಕೊರತೆ ಇಲ್ಲ. ಗ್ಯಾಸ್ ಸಿಲಿಂಡರನ್ನು ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ನಿಮ್ಮ ಮನೆ ಬಾಗಿಲಿಗೆ ತಂದು ಸಿಲಿಂಡರ್ ಒದಗಿಸುವರು ಎಂದು ತಿಳಿಸಿದರು.

ಶಹಾಪುರ ನಗರದ ಹಿರೇಮಠ ಪೆಟ್ರೋಲ್ ಬಂಕ್ ವೀಕ್ಷಿಸಿದ ಜಿಲ್ಲಾಧಿಕಾರಿ.

**********

ಗ್ರಾಹಕರು ಗ್ಯಾಸ್ ಸಿಲಿಂಡರನ್ನು ತೆಗೆದುಕೊಂಡು ಹೋಗುವಾಗ ಅಪಘಾತವಾದರೆ ಯಾರು ಜವಾಬ್ದಾರರು ?. ಏಜೆನ್ಸಿಯವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. 25 ರಿಂದ 30 ದಿನಗಳೊಳಗೆ ಬುಕ್ಕಿಂಗ್ ಮಾಡಿದ ನಂತರ ಏಜೆನ್ಸಿಯವರು ಮನೆಗೆ ಬಂದು ಗ್ಯಾಸ್ ಸಿಲಿಂಡರ್ ಕೊಡುವರು ಎಂದರು.

ರಾತ್ರಿ 12:00 ಗಂಟೆ ಯಿಂದ ಸರದಿ ಸಾಲಿನಲ್ಲಿ ನಿಂತ ಗ್ರಾಮೀಣ ಪ್ರದೇಶದಿಂದ ಬಂದ ಜನರು ದಯವಿಟ್ಟು ಇಂದು ಸಿಲಿಂಡರ್ ಗ್ಯಾಸ್ ಒದಗಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದನ್ನರಿತ ಜಿಲ್ಲಾಧಿಕಾರಿಗಳು ಗ್ರಾಹಕರ ಗ್ಯಾಸ್ ಸಿಲಿಂಡರ್ ಪುಸ್ತಕದ ಎಲ್ಲಾ ಗ್ರಾಹಕರ ನಂಬರ್ಗಳನ್ನು ತೆಗೆದುಕೊಳ್ಳುವಂತೆ ಏಜೆನ್ಸಿಗೆ ಸೂಚಿಸಿ ನಂತರ ಅವರ ಮನೆ ಬಾಗಿಲಿಗೆ ಗ್ಯಾಸ್ ಸಿಲಿಂಡರ್ ಒದಗಿಸಿ ಕೊಡಬೇಕೆಂದು ಏಜೆನ್ಸಿಯವರಿಗೆ ಎಚ್ಚರಿಸಿದರು. ನಾಳೆಯಿಂದ ಯಾರೂ ಕೂಡ ಅಂಗಡಿಯ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವಂತಿಲ್ಲ. ಈಗಾಗಲೇ ಅಂಗಡಿಯ ಮುಂದೆ ಬೋರ್ಡ್ ಹಾಕಲಾಗಿದ್ದು ಸರದಿ ಸಾಲಿನಲ್ಲಿ ನಿಂತರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳ ಎಚ್ಚರಿಕೆಗೆ ಗ್ಯಾಸ್ ಏಜೆನ್ಸಿಯವರು ಮನ್ನಣೆ ಕೊಟ್ಟು ಸಿಲಿಂಡರ್ ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವರೊ ಅಥವಾ ಸರದಿ ಸಾಲು ಮತ್ತೆ ಮುಂದುವರೆಯುತ್ತಿದೆಯೋ ಕಾದು ನೋಡಬೇಕಿದೆ !.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಶಹಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್, ತಾಲೂಕ ಆಹಾರ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಗ್ಯಾಸ್ ಏಜೆನ್ಸಿ ಮುಖಂಡರು, ಪೇಟ್ರೊಲ್ ಡಿಸೇಲ್ ಬಂಕ್ ಮಾಲೀಕರು ಹಾಗೂ ಸಾರ್ವಜನಿಕರು ಇದ್ದರು.