ಹಾರಣಗೇರಾ ಗ್ರಾಮದ ಜಾತ್ರೆ : ಮಾ. ೧೪ರಿಂದ ಪ್ರವಚನ ಕಾರ್ಯಕ್ರಮ

ಶಹಾಪುರ,,

ಐತಿಹಾಸಿಕ ಸಾಂಸ್ಕೃತಿಕ ಪರಂಪರೆ ಪ್ರಮುಖ ತಾಣವಾಗಿರುವ ಹಾರಣಗೇರಾ ಗ್ರಾಮದಲ್ಲಿರುವ ಬೃಹತ್ ಗಾತ್ರದಲ್ಲಿ ಕುಳಿತ ನಂದಿ ವಿಗ್ರಹ ಈ ಭಾಗದ ಬಹುಜನರ ಆರಾಧ್ಯ ದೈವ. ಈ ನಂದಿ ಬಸವಣ್ಣನ ಜಾತ್ರಾ ಮಹೋತ್ಸವ ನಿಮಿತ್ಯ ಮಾರ್ಚ ೧೪ ರಿಂದ ೧೮ರ ವರೆಗೆ ಚಿಕ್ಕರೂಗಿಯ ಪೂಜ್ಯ ಈರಣ್ಣ ಶಾಸ್ತಿçಗಳಿಂದ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.

ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ವೇದಮೂರ್ತಿ ಬಸವಯ್ಯ ಸ್ವಾಮಿಜಿ, ಹಾಗೂ ಶಹಾಪುರದ ವಿಶ್ವಕರ್ಮ ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಜಿ ಮತ್ತು ಚಾಮನಾಳದ ಬಸಯ್ಯ ಸ್ವಾಮಿಜಿ, ಭೀಮರಾಯಗುಡಿ ಸಿದ್ಧಾರೂಡ ಮಠದ ಮಾತೋಶ್ರೀ ಜ್ಞಾನೇಶ್ವರಿ ತಾಯಿಯವರು ಸಾನಿಧ್ಯ ವಹಿಸುವರು. ಹಿರಿಯ ಮುಖಂಡರಾದ ಬಸವರಾಜಪ್ಪಗೌಡ ದರ್ಶನಾಪುರ ಅವರು ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಂಗೀತ ಕಲಾವಿದರಾದ ಕಲ್ಲಯ್ಯಸ್ವಾಮಿ ಹಿರೇಮಠ ಮತ್ತು ರಾಜಶೇಖರ ಗೆಜ್ಜಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವದು. ಪ್ರತಿದಿನ ಸಾಯಂಕಾಲ ಶರಣರ ವಚನಗಳ ಹಾಗೂ ಚಿಂತನೆಗಳ ಆಧಾರಿಸಿ ಪ್ರವಚನ ಕಾರ್ಯಕ್ರಮ ಜರುಗುವುದು.

ಮಾರ್ಚ ೧೬ರಂದು ಸೋಮವಾರ ಸಾಯಂಕಾಲ ೦೫ ಗಂಟೆ ನಂದಿ ಬಸವಣ್ಣನವರ ಪಲ್ಲಕ್ಕಿಯನ್ನು ತೆಗೆದುಕೊಂಡು ಸುರಪುರ ತಾಲ್ಲೂಕಿನ ಯಮನೂರಿನಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಗಂಗಾಸ್ನಾನ ಮಾಡಿಸಿಕೊಂಡು ಯಮನೂರು, ದೊಡ್ಡಸಗರ, ನಾಗನಟಗಿ, ಗೋಗಿ, ದರ್ಶನಾಪುರದಲ್ಲಿ ಮೆರವಣಿಗೆ ಮಾಡುತ್ತ, ಭಕ್ತರಿಗೆ ದರ್ಶನ ನೀಡುತ್ತಾ ಮಾರ್ಚ ೧೮ರಂದು ಬುಧುವಾರ ಯುಗಾದಿ ಅಮಾವಸ್ಸೆಯ ಸಂಜೆ ಹಾರಣಗೇರಾ ತಲುಪಿ ನಂತರ ಬೆಳಗಾಗುವರೆಗೂ ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ.

ಮಾರ್ಚ ೧೯ ರಂದು ಗುರುವಾರ ಸಾಯಂಕಾಲ ೦೫ ಗಂಟೆಗೆ ನಂದಿ ಬಸವಣ್ಣನ ಮಹಾರಥೋತ್ಸವ ಅದ್ದೂರಿಯಾಗಿ ಜರುಗುತ್ತದೆ. ಬೊರಿಗಿಯ ವಿಶ್ವರಾದ್ಯ ಮಠದ ತಪೋರತ್ನ ಮಹಾಲಿಂಗೇಶ್ವರ ಸ್ವಾಮಿಜಿಯವರು ಸಾನಿಧ್ಯ ವಹಿಸುವರು. ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ರಥೋತ್ಸವಕ್ಕೆ ಚಾಲನೆ ನೀಡುವರು. ಹಾರಣಗೇರಾ ಮತ್ತು ದರ್ಶನಾಪುರ ಗ್ರಾಮಸ್ಥರು ಕೂಡಿಕೊಂಡು ನಂದಿಬಸವಣ್ಣನ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ವೈವಿಧ್ಯಮಯವಾಗಿ ನಡೆಸುತ್ತಾರೆ. ಅದೇ ದಿನ ರಾತ್ರಿ ೧೦-೩೦ಕ್ಕೆ ಸೊಕ್ಕಿನ ಸೊಸಿ ಅರ್ಥಾತ್ ತಾಯಿ ಕರಳು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವದು.

ಮಾರ್ಚ ೧೯ ರಿಂದ ಬೃಹತ್ ಪ್ರಮಾಣದ ಧನಗಳ ಜಾತ್ರೆ ಪ್ರಾರಂಭವಾಗುವುದು. ಮಾರ್ಚ ೨೦ರಂದು ಶುಕವಾರ ಮಧ್ಯಾಹ್ನ ೨ ಗಂಟೆಗೆ ಜಂಗಿ ಕುಸ್ತಿ ಕಾಳಗ ಹಮ್ಮಿಕೊಳ್ಳಲಾಗಿದೆ. ಮಾಚ ೨೧ ರಂದು ರಾತ್ರಿ ೧೦-೩೦ ಗಂಟೆಗೆ ಜಮೀನ್ದಾರರ ಸೊಸೆ ಎಂಬ ನಾಟಕ ಜರುಗುತ್ತದೆ. ಮಾರ್ಚ ೨೩ ರಂದು ಸೋಮವಾರ ಕಡುವಿನ ಕಾಳಗ ನಡೆಯುತ್ತದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.