ಶಹಾಪುರ,
ನಗರದ ದಾನೇಶ್ವರಿ ಈಜುಕೊಳ ಸೇರಿದಂತೆ ವಿವಿಧ ಈಜುಕೊಳಗಳಲ್ಲಿ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆರೋಪಿಸಿ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ (ರಿ) ಜಿಲ್ಲಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ನಗರಸಭೆ ಪೌರಾಯುಕ್ತರಿಗೆ ದೂರು ಸಲ್ಲಿಸಿದೆ.
ಸಂಘದ ಮುಖಂಡ ಪ್ರದೀಪ್ ಅಣಬಿ ಈಜುಕೊಳಗಳಲ್ಲಿ ನೀರಿನ ಶುದ್ಧೀಕರಣಕ್ಕಾಗಿ ಬಳಸುವ ರಾಸಾಯನಿಕಗಳ ಪ್ರಮಾಣ ಮತ್ತು ನೀರಿನ ಗುಣಮಟ್ಟವನ್ನು ತಾಂತ್ರಿಕವಾಗಿ ಪರೀಕ್ಷಿಸಿ, ನಿಯಮ ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಈ ಹಿಂದೆ ನಗರಸಭೆಗೆ ದೂರು ನೀಡಲಾಗಿದ್ದು, ನೋಟಿಸ್ ಜಾರಿಯಾದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕರ, ವಿಶೇಷವಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಈಜುಕೊಳಗಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.