ಕುರುಬ ಸಮಾಜಕ್ಕೆ MLC ನೀಡುವಂತೆ ಮಲ್ಲಣ್ಣ ಐಕೂರ ಆಗ್ರಹ

ಶಹಾಪೂರ: ಜಿಲ್ಲೆಯ ಕುರುಬ ಸಮಾಜಕ್ಕೆ ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನ ನೀಡುವ ಮೂಲಕ ರಾಜಕೀಯ ನ್ಯಾಯ ಒದಗಿಸಬೇಕು ಎಂದು ಕುರುಬ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಯಾದಗಿರಿ ಜಿಲ್ಲೆಯಲ್ಲಿ ಕುರುಬ ಸಮಾಜವು ಗಣನೀಯ ಸಂಖ್ಯೆಯಲ್ಲಿದ್ದು, ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ವಿಜಯಕ್ಕೆ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಆದರೆ, ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ಕುರುಬ ಸಮಾಜಕ್ಕೆ ಶಾಸಕ, ವಿಧಾನ ಪರಿಷತ್ ಸದಸ್ಯ ಸೇರಿದಂತೆ ವಿವಿಧ ರಾಜಕೀಯ ಸ್ಥಾನಮಾನಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜವನ್ನು ಕೇವಲ ಮತಬ್ಯಾಂಕ್ ಆಗಿ ಪರಿಗಣಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಜುಲೈ ತಿಂಗಳಲ್ಲಿ ತೆರವಾಗಲಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಯಾದಗಿರಿ ಜಿಲ್ಲೆಯ ಅರ್ಹ ಹಾಗೂ ಪಕ್ಷನಿಷ್ಠ ಕುರುಬ ಸಮಾಜದ ಮುಖಂಡರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯದಲ್ಲಿ ವಿಶೇಷ ಗಮನ ಹರಿಸಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಕುರುಬ ಸಮಾಜದ ಅನೇಕ ಮುಖಂಡರು 40 ವರ್ಷಗಳಿಗೂ ಹೆಚ್ಚು ಕಾಲ ಪಕ್ಷ ಸಂಘಟನೆಗಾಗಿ ದುಡಿದಿದ್ದರೂ ಅವರಿಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ನಿರೀಕ್ಷೆಯನ್ನು ಕಾಂಗ್ರೆಸ್ ವರಿಷ್ಠರು ಈಡೇರಿಸಬೇಕು ಎಂದು ಹೇಳಿದರು.

ಒಂದು ವೇಳೆ ಈ ಬಾರಿಯೂ ಸಮಾಜವನ್ನು ಕಡೆಗಣಿಸಿದರೆ, ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಮಲ್ಲಣ್ಣ ಐಕೂರ ಎಚ್ಚರಿಸಿದರು.

ಕುರುಬ ಸಮಾಜದ ಹಕ್ಕು ಮತ್ತು ಪ್ರಾತಿನಿಧ್ಯದ ಪ್ರಶ್ನೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿ, ಸಮಾಜದ ಅರ್ಹ ನಾಯಕರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.

 

 

Leave a Reply

Your email address will not be published. Required fields are marked *