Blog

ಹೇಮರೆಡ್ಡಿ ಮಲ್ಲಮ್ಮ ಸೌಹಾರ್ಧ ಸಹಕಾರಿ ಸಂಘ ಪ್ರಕರಣ: ಬಸನಗೌಡ ಮರ್ಕಲ್ ನಿಧನ; ವೈರಲ್ ವಿಡಿಯೋ ಹಲವು ಪ್ರಶ್ನೆಗಳಿಗೆ ಕಾರಣ!

ಶಹಾಪುರ : ಮಹಾಶರಣೆ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ಧ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಬಸನಗೌಡ ಮರ್ಕಲ್ ಅವರು ಮಂಗಳವಾರ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನದ ಬೆನ್ನಲ್ಲೇ, ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅವರು ಈ ಹಿಂದೆ ದಾಖಲಿಸಿದ್ದ ವಿಡಿಯೋ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೇಮರೆಡ್ಡಿ ಮಲ್ಲಮ್ಮ ಸೌಹಾರ್ಧ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕಳೆದ ಕೆಲವು ತಿಂಗಳುಗಳಿಂದ ಕೇಳಿಬರುತ್ತಿದ್ದು, ಈ ಸಂಬಂಧ ತನಿಖೆಯೂ ನಡೆಯುತ್ತಿದೆ. ಇದೇ ಪ್ರಕರಣದ ಕುರಿತು ಬಸನಗೌಡ ಮರ್ಕಲ್ ಅವರು ದಾಖಲಿಸಿದ್ದ ವಿಡಿಯೋದಲ್ಲಿ ತಮ್ಮ ನಿಲುವು ಹಾಗೂ ನೋವನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಅವರು, ತಮ್ಮ ಸಹಿಯನ್ನು ನಕಲಿ (ಫೋರ್ಜರಿ) ಮಾಡಿ ಹಣ ದುರುಪಯೋಗಪಡಿಸಿಕೊಂಡಿರುವುದು ಹಾಗೂ ಅಕ್ರಮ ಹಣ ವರ್ಗಾವಣೆ ನಡೆದಿರುವುದನ್ನು ಪತ್ತೆಹಚ್ಚಿದ ಬಳಿಕ 2026ರ ಏಪ್ರಿಲ್ 13ರಂದು ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ನಂತರ ನಡೆದ ಸಭೆಯಲ್ಲಿ ಹಣ ದುರುಪಯೋಗಪಡಿಸಿಕೊಂಡವರು ಹಾಗೂ ಸಾಲ ಪಡೆದವರು ಹಣ ಮರುಪಾವತಿಗೆ ಒಪ್ಪಿಕೊಂಡಿದ್ದರು ಎಂದೂ ಹೇಳಿದ್ದಾರೆ.

ಹಿರಿಯರು ನೀಡಿದ ಸೂಚನೆಯಂತೆ ತಾವು ತಮ್ಮ ಪಾಲಿನ ಸಾಲದ ಸಂಪೂರ್ಣ ಮೊತ್ತವನ್ನು ನಿಗದಿತ ಅವಧಿಯೊಳಗೆ ಜಮಾ ಮಾಡಿದ್ದರೂ, ಉಳಿದವರು ಮಾತಿನಂತೆ ಹಣ ಪಾವತಿಸದ ಕಾರಣ ಎಫ್‌ಡಿ ಠೇವಣಿದಾರರಿಗೆ ಹಣ ಮರಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

“ನಾನು ಮಾತ್ರ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಉಳಿದವರು ಹಣ ಜಮಾ ಮಾಡದ ಕಾರಣ ಠೇವಣಿದಾರರಿಗೆ ನೀಡಿದ ಭರವಸೆಯನ್ನು ಈಡೇರಿಸಲಾಗುತ್ತಿಲ್ಲ. ಇದರಿಂದ ನನಗೆ ತೀವ್ರ ಮಾನಸಿಕ ನೋವಾಗುತ್ತಿದೆ. ನೇರವಾಗಿ ಠೇವಣಿದಾರರ ಎದುರು ಹೋಗುವ ಧೈರ್ಯವೂ ಇಲ್ಲದಂತಾಗಿದೆ,” ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.

ಸಿಬ್ಬಂದಿಯನ್ನು ಅತಿಯಾಗಿ ನಂಬಿದ್ದೇ ಇಂದಿನ ದುಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿರುವ ಅವರು, ಪ್ರಕರಣದ ನಂತರ ತಾವು ಮತ್ತು ತಮ್ಮ ಕುಟುಂಬ ನಿರಂತರ ಮಾನಸಿಕ ಹಿಂಸೆ, ಅವಮಾನ ಹಾಗೂ ಒತ್ತಡ ಅನುಭವಿಸುತ್ತಿದ್ದೇವೆ ಎಂದಿದ್ದಾರೆ. ಕೆಲವರು ಬ್ಯಾಂಕ್ ವಿಚಾರವಾಗಿ ಮನೆಗೆ ಬಂದು ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿರುವುದರಿಂದ, ಬ್ಯಾಂಕ್ ಸಮಸ್ಯೆಯನ್ನು ಕುಟುಂಬದೊಂದಿಗೆ ತಾಳೆ ಹಾಕಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದೇ ವೇಳೆ, ಸಾಲ ಪಡೆದವರು ಹಾಗೂ ಹಣ ದುರುಪಯೋಗಪಡಿಸಿಕೊಂಡವರು ಎಲ್ಲರೂ ತಮ್ಮ ಬಾಕಿ ಮೊತ್ತವನ್ನು ಪಾವತಿಸಿದರೆ ಮಾತ್ರ ಎಫ್‌ಡಿ ಠೇವಣಿದಾರರಿಗೆ ಹಣ ಮರಳಿಸಲು ಸಾಧ್ಯವಾಗುತ್ತದೆ ಎಂದು ಅವರು ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

ಬಸನಗೌಡ ಮರ್ಕಲ್ ಅವರ ನಿಧನದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಇತರ ತನಿಖಾ ವರದಿಗಳ ನಂತರವೇ ಅಧಿಕೃತ ಮಾಹಿತಿ ಹೊರಬೀಳಲಿದೆ. ವೈರಲ್ ಆಗಿರುವ ವಿಡಿಯೋವನ್ನು ಕೂಡ ತನಿಖೆಯ ಭಾಗವಾಗಿ ಅಧಿಕಾರಿಗಳು ಪರಿಶೀಲಿಸುವ ಸಾಧ್ಯತೆ ಇದೆ.
ಇತ್ತ, ಮರ್ಕಲ್ ಅವರ ನಿಧನದಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಂಘದ ಸದಸ್ಯರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ, ಸಹಕಾರಿ ಸಂಘದ ಆರ್ಥಿಕ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯತ್ತ ಸಾರ್ವಜನಿಕರ ಗಮನ ನೆಟ್ಟಿದ್ದು, ತನಿಖೆಯ ಬಳಿಕವೇ ಪ್ರಕರಣದ ಸಂಪೂರ್ಣ ಸತ್ಯಾಂಶ ಬೆಳಕಿಗೆ ಬರುವ ನಿರೀಕ್ಷೆಯಿದೆ.