ಪತ್ರಕರ್ತರ ಮೇಲೆ ಪೊಲೀಸರ ದರ್ಪ,ಅಮಾನವೀಯ ನಡೆ ಆಘಾತಕಾರಿ

ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ಮಲ್ಲಪ್ಪ ಸಂಕೀನ್ ಆಗ್ರಹ


ಶಹಾಪುರ: ಮೈಸೂರಿನ ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯ ವೇಳೆ ವರದಿ ಮಾಡಲು ತೆರಳಿದ ಪತ್ರಕರ್ತರ ಮೇಲೆ ದರ್ಪ ತೋರಿಸಿದ ಪೋಲಿಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ಕೂಡಲೇ ಅಮಾನತು ಮಾಡಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾಡಳಿತ ಅಧಿಕೃತವಾಗಿ ಪಾಸ್ ನೀಡಿದ್ದರೂ ಕೂಡ ವಿಜಯದಶಮಿಯ ದಿನ ಮೆರವಣಿಗೆ ವರದಿ ಮಾಡಲು ಅರಮನೆ ಆವರಣದೊಳಗೆ ಪ್ರವೇಶ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಎಸಗಿದಂತಾಗಿದೆ ಎಂದು ಹೇಳಿದರು.

ವಿಶ್ವವಿಖ್ಯಾತ ಮೈಸೂರಿನ ದಸರಾ ಉತ್ಸವದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಪ್ರಾಮಾಣಿಕವಾಗಿ ಪತ್ರಕರ್ತರು ಮಾಡಲು ಮುಂದಾಗಿದ್ದರೂ ವಿನಾಕಾರಣ ಪೊಲೀಸರು ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ. ನಿಜಕ್ಕೂ ಕೂಡ ಇದು ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತವನೆ ಮಾಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮದವರಿಗೆ ಈ ಪರಿಸ್ಥಿತಿ ಮಾಡಿದರೇ ಜನಸಾಮಾನ್ಯರೊಂದಿಗೆ ಯಾವ ರೀತಿಯಿಂದ ಇವರು ವರ್ತಿಸುತ್ತಾರೆ ಎಂಬುದು ಊಹಿಸಲು ಸಹ ಕಷ್ಟವಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣೀಸಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಪತ್ರಕರ್ತರ ಮೇಲೆ ಪದೇ ಪದೇ ದೌರ್ಜನ್ಯಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಕೇವಲ ಬಾಯಿ ಮಾತಿನಲ್ಲಿ ಮಾಧ್ಯಮ 4ನೇ ಅಂಗ ಎಂದು ಹೇಳಿದರೂ ಸಾಲದು. ರಾಜ್ಯ ಸರಕಾರ ಪತ್ರಕರ್ತರು ಯಾವುದೇ ಆತಂಕವಿಲ್ಲದೇ ಕೆಲಸ ಮಾಡುವಂತಹ ವಾತಾವರಣ ನಾಡಿನಲ್ಲಿ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾಡಳಿತ ನೀಡಿದ ಪಾಸ್‌ಗಳಿಗೆ ಯಾವುದೇ ಕಿಮ್ಮತ್ತು ಇಲ್ಲದಂತೆ ಪೊಲೀಸ್ ಅಧಿಕಾರಿಗಳು ಮಾಡಿದ್ದಾರೆ. ನಿಜಕ್ಕೂ ಇದು ಆತಂಕದ ಬೆಳವಣಿಗೆಯಾಗಿದೆ. ಪತ್ರಕರ್ತರಿಗೆ ಅಡ್ಡಿಪಡಿಸುವ ಮೂಲಕ ಅಧಿಕಾರಿಗಳು ತಮಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ ಎಂಬುದು ತೋರ್ಪಡಿಸದಂತೆ ಕಾಣುತ್ತಿದೆ ಎಂಬುದು ಅವರು ನಡೆದುಕೊಂಡ ರೀತಿಯೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *