ಶಹಾಪುರ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯ ನಾಯಕ ಶಶೀಲ್ ಜಿ. ನಮೋಶಿ ಅವರಿಗೆ ಶಿಕ್ಷಕ ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕೆಂದು ಶಹಾಪುರದ ಬಿಜೆಪಿ ಮುಖಂಡ ಕರಣ ಸುಬೇದಾರ ಮನವಿ ಮಾಡಿದ್ದಾರೆ.
ಶಶೀಲ್ ನಮೋಶಿ ಅವರು ಹಲವು ದಶಕಗಳಿಂದ ಶಿಕ್ಷಕರ ಹಿತರಕ್ಷಣೆಗಾಗಿ ಶ್ರಮಿಸುತ್ತಿದ್ದು, ಅನುದಾನಿತ ಹಾಗೂ ಅನುದಾನರಹಿತ ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರ ಸಮಸ್ಯೆಗಳ ಕುರಿತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಶಿಕ್ಷಕರ ವೇತನ ತಾರತಮ್ಯ ನಿವಾರಣೆ, ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿ, ಸೇವಾ ಭದ್ರತೆ ಹಾಗೂ ಅನುದಾನ ಬಿಡುಗಡೆ ಸೇರಿದಂತೆ ಶಿಕ್ಷಕ ಸಮುದಾಯದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅನುಭವಿ ನಾಯಕತ್ವದ ಅಗತ್ಯವಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರು ಯಾವುದೇ ಗೊಂದಲಗಳಿಗೆ ಕಿವಿಗೊಡದೆ, ತಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯದ ಮತವನ್ನು ಶಶೀಲ್ ನಮೋಶಿ ಅವರಿಗೆ ನೀಡಿ ಬೆಂಬಲಿಸಬೇಕು ಎಂದು ಕರಣ ಸುಬೇದಾರ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.