ಶಹಾಪುರ:
ತಾಲೂಕಿನ ನಾಗನಟಗಿ, ಗಂಗನಾಳ ಸೇರಿದಂತೆ ಮೇಘನಾಯಕ ತಾಂಡ, ದಾಮುಲು-ಭೀಮಲು ನಾಯಕ ತಾಂಡ ಹಾಗೂ ಗಂಗೂನಾಯಕ ತಾಂಡಗಳಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಶುಕ್ರವಾರ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು.ನಾಗನಟಗಿ ಗ್ರಾಮದಲ್ಲಿ ವೀರಭದ್ರೇಶ್ವರ ಮಠದಿಂದ ಮೇಘನಾಯಕ ತಾಂಡಾದವರೆಗೆ ಲೋಕೋಪಯೋಗಿ ಇಲಾಖೆಯ ವಿಶೇಷ ಅನುದಾನದಡಿ 2025-26ನೇ ಸಾಲಿನಲ್ಲಿ ₹1 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಒಂದು ಕಿ.ಮೀ. ಉದ್ದದ ಡಾಂಬರೀಕರಣ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು. ಕಾಮಗಾರಿಯನ್ನು ಗುಣಮಟ್ಟದ ಮಾನದಂಡಗಳಂತೆ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಗಂಗನಾಳ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 2025-26ನೇ ಸಾಲಿನ ಅಕ್ಷರ ಆವಿಷ್ಕಾರ ಯೋಜನೆಯಲ್ಲಿ ₹74.99 ಲಕ್ಷ ವೆಚ್ಚದಲ್ಲಿ ಐದು ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ಬಳಿಕ ಗ್ರಾಮದ ಪ್ರಜ್ಞಾ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಅಗತ್ಯತೆಗಳು ಹಾಗೂ ಗ್ರಾಮಸ್ಥರ ಕುಂದುಕೊರತೆಗಳ ಕುರಿತು ಮಾಹಿತಿ ಪಡೆದರು.
ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಜನರೊಂದಿಗೆ ಚರ್ಚಿಸಿದ ಶಾಸಕರು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ವಿವಿಧ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಂತಪ್ಪ ಚಂದಾಪುರ, ಶಾಂತಗೌಡ ನಾಗನಟಗಿ, ಶಾಂತು ಪಾಟೀಲ್,ಜೆಇ ಶ್ರೀನಿವಾಸ್ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.