ಶಹಾಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಅನುಸೂಚಿಯ ರಕ್ಷಣೆ ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದ ಬಗ್ಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಸುಮಾರು 50 ಲಕ್ಷ ಪರಿಶಿಷ್ಟ ಪಂಗಡ, 1.50 ಕೋಟಿ ಪರಿಶಿಷ್ಟ ಜಾತಿ ಹಾಗೂ 2 ಕೋಟಿ ಹಿಂದುಳಿದ ವರ್ಗಗಳ ಜನಸಂಖ್ಯೆ ಇದೆ. ಸ್ವಾತಂತ್ರ್ಯ ದೊರೆತು ಎಂಟು ದಶಕಗಳು ಕಳೆದರೂ ಈ ಸಮುದಾಯಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಅವರ ಹಕ್ಕುಗಳ ರಕ್ಷಣೆಗೆ ಅಗತ್ಯವಾದ ಬದ್ಧತೆ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.
56% ಮೀಸಲಾತಿಗೆ ಸಂವಿಧಾನಿಕ ರಕ್ಷಣೆ ನೀಡಿ
2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹೆಚ್ಚಿಸಿ, ಹಿಂದುಳಿದ ವರ್ಗಗಳಿಗೆ ಶೇ.32ರಷ್ಟು ಮೀಸಲಾತಿ ಸೇರಿದಂತೆ ಒಟ್ಟಾರೆ ಶೇ.56ರಷ್ಟು ಮೀಸಲಾತಿ ಜಾರಿಗೆ ತಂದಿತ್ತು. ಆದರೆ ಈ ಮೀಸಲಾತಿಗೆ ಸಂವಿಧಾನದ 9ನೇ ಅನುಸೂಚಿಯ ರಕ್ಷಣೆ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ದೂರಿದರು.
ಮೀಸಲಾತಿ ಯಾರೊಬ್ಬರ ಸ್ವತ್ತಲ್ಲ
ಅದು ನಮ್ಮೆಲ್ಲರ ಹಕ್ಕು. ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಜಾರಿಯಲ್ಲಿದ್ದು, ಅದನ್ನು 9ನೇ ಅನುಸೂಚಿಗೆ ಸೇರಿಸಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಶೇ.56ರಷ್ಟು ಮೀಸಲಾತಿಯನ್ನೂ 9ನೇ ಅನುಸೂಚಿಗೆ ಸೇರಿಸಬೇಕು” ಎಂದು ಆಗ್ರಹಿಸಿದರು.
ಎಸ್‌ಟಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳಲ್ಲಿ ಅನ್ಯಾಯ.
ವೈದ್ಯಕೀಯ ಪ್ರವೇಶದಲ್ಲಿಯೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಉಗ್ರಪ್ಪ ಆರೋಪಿಸಿದರು. ಕಳೆದ ವರ್ಷ ಸುಮಾರು 9 ಸಾವಿರ ವೈದ್ಯಕೀಯ ಸೀಟುಗಳಲ್ಲಿ ಎಸ್‌ಟಿ ವಿದ್ಯಾರ್ಥಿಗಳಿಗೆ 346 ಸೀಟುಗಳು ದೊರೆತಿದ್ದರೆ, ಪ್ರಸಕ್ತ ವರ್ಷ ಸುಮಾರು 11 ಸಾವಿರ ಸೀಟುಗಳಿದ್ದರೂ ಕೇವಲ 178 ಸೀಟುಗಳು ದೊರೆತಿವೆ ಎಂದು ಹೇಳಿದರು.
ಸೀಟುಗಳ ಹಂಚಿಕೆಯಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ ಉಂಟಾಗಿದೆ ಎಂಬುದರ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಖರ್ಗೆ ಘಟನೆಗೆ ಖಂಡನೆ.
ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದ ಉಗ್ರಪ್ಪ, ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಲ್ಲಿರುವ ಅಸ್ಪೃಶ್ಯತೆಯ ಮನೋಭಾವಕ್ಕೆ ಉದಾಹರಣೆ ಎಂದು ಆರೋಪಿಸಿದರು.ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಬೇಕು ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕಕ್ಕೆ ₹25 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡಿ..
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಬರ ಅಧ್ಯಯನ ತಂಡವನ್ನು ಕಳುಹಿಸಿ ಅಗತ್ಯ ಪರಿಹಾರ ಒದಗಿಸಬೇಕು. ಕರ್ನಾಟಕಕ್ಕೆ ಕನಿಷ್ಠ ₹25 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.ರಾಜ್ಯದ 18 ಬಿಜೆಪಿ ಸಂಸದರು ಕರ್ನಾಟಕದ ಪರವಾಗಿ ಧ್ವನಿ ಎತ್ತಿ, ಕೇಂದ್ರದಿಂದ ಅಗತ್ಯ ಅನುದಾನ ಹಾಗೂ ಬರ ಪರಿಹಾರ ತರಲು ಮುಂದಾಗಬೇಕು ಎಂದು ಹೇಳಿದರು.
ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಮೀನಾಮೇಷ ಎಣಿಸುವ ಕೇಂದ್ರ ಸರ್ಕಾರ, ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲಗಳನ್ನು ವಸೂಲಾಗದ ಸಾಲವೆಂದು ಲೆಕ್ಕದಿಂದ ತೆಗೆದುಹಾಕುವ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಕರ್ನಾಟಕ ದೇಶಕ್ಕೆ ಹೆಚ್ಚಿನ ತೆರಿಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ಆದರೆ ರಾಜ್ಯಕ್ಕೆ ಬರ ಪರಿಹಾರ, ತೆರಿಗೆ ಪಾಲು ಹಾಗೂ ಅಗತ್ಯ ಅನುದಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದ ಹಕ್ಕಿನ ಅನುದಾನ ಮತ್ತು ಬರ ಪರಿಹಾರಕ್ಕಾಗಿ ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ವರದಾನೇಶ್ವರ ಮಹಾಸ್ವಾಮೀಜಿ,ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಹಣಮಂತರಾಯ ದಳಪತಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ತಾಲೂಕಾಧ್ಯಕ್ಷ ಮರಿಯಪ್ಪ ಪ್ಯಾಟಿ, ತಾಲೂಕು ಕಾರ್ಯದರ್ಶಿ ಹಣಮಂತರಾಯ ದೊರೆ, ರವಿ ಯಕ್ಷಿಂತಿ, ಶೇಖರ್ ದೊರೆ, ರಾಘವೇಂದ್ರ, ತಿರುಪತಿ, ಸಂಗಮೇಶ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.