ಶಿವಾನಂದ ತಗಡೂರು ವಿರುದ್ಧ ಸಲ್ಲದ ಆರೋಪ ಸಹಿಸಲ್ಲ: ಬಸವರಾಜ ಕರೇಗಾರ

ಶಹಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ವಿರುದ್ಧ ಕೆಲವರು ಮಾಡುತ್ತಿರುವ ಸಲ್ಲದ ಹಾಗೂ ಆಧಾರರಹಿತ ಆರೋಪಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ಕರೇಗಾರ ತಿಳಿಸಿದ್ದಾರೆ.

ಶಿವಾನಂದ ತಗಡೂರು ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಅವರ ಶ್ರಮ, ಪ್ರತಿಭೆ ಹಾಗೂ ಹಲವು ವರ್ಷಗಳ ದುಡಿಮೆಗೆ ದೊರೆತ ಗೌರವವಾಗಿದೆ. ಇದನ್ನು ಕೆಲವರು ಸಹಿಸಿಕೊಳ್ಳಲಾಗದೆ ಅನಗತ್ಯ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ. ಪ್ರಶಸ್ತಿಯನ್ನು ಪ್ರಶ್ನಿಸುವ ಬದಲು ಅವರ ಸಾಧನೆಯನ್ನು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘದ ಬೆಳವಣಿಗೆಯಲ್ಲಿ ಶಿವಾನಂದ ತಗಡೂರು ಅವರ ಕೊಡುಗೆ ಅಪಾರವಾಗಿದೆ. ಸಂಘದ ಸದಸ್ಯರನ್ನು ಕುಟುಂಬದ ಸದಸ್ಯರಂತೆ ಪರಿಗಣಿಸಿ, ಅವರ ಸಂಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಅನೇಕ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಮೂಲಕ ಪರಿಹಾರ ಹಾಗೂ ನೆರವು ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೈದ್ಯಕೀಯ ನೆರವು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಿದ್ದಾರೆ.

ಸಂಘದ ಸದಸ್ಯರು ನಿಧನರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರ್ಕಾರದಿಂದ ₹5 ಲಕ್ಷದವರೆಗೂ ಸಹಾಯಧನ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ರಾಜ್ಯದ ಯಾವುದೇ ಭಾಗದ ಪತ್ರಕರ್ತರು ಸಮಸ್ಯೆ ಹೇಳಿಕೊಂಡು ಬಂದರೂ ಅವರಿಗೆ ಸ್ಪಂದಿಸುವ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ ಎಂದು ಬಸವರಾಜ ಕರೇಗಾರ ತಿಳಿಸಿದ್ದಾರೆ.

ಶಿವಾನಂದ ತಗಡೂರು ಅವರು ರಾಜ್ಯಾಧ್ಯಕ್ಷರಾಗಿ ಬಂದ ನಂತರ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯಾದ್ಯಂತ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಸಂಘದ ಸದಸ್ಯರ ಹಿತಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಇಂತಹ ವ್ಯಕ್ತಿಯ ವಿರುದ್ಧ ವೈಯಕ್ತಿಕ ದ್ವೇಷ ಹಾಗೂ ಹೊಟ್ಟೆಕಿಚ್ಚಿನಿಂದ ಆರೋಪ ಮಾಡುವುದು ಸರಿಯಲ್ಲ. ಸಂಘದ ಸದಸ್ಯರು ಅವರ ಕಾರ್ಯವೈಖರಿಯನ್ನು ನೋಡಿದ್ದಾರೆ ಮತ್ತು ಅವರೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಶಿವಾನಂದ ತಗಡೂರು ಅವರ ಏಳಿಗೆಯನ್ನು ಸಹಿಸದ ಕೆಲವರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ರಾಜ್ಯದಾದ್ಯಂತ ಇರುವ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಅವರ ಬೆಂಬಲಕ್ಕೆ ನಿಂತಿದ್ದು, ಇಂತಹ ಆರೋಪಗಳಿಗೆ ಯಾವುದೇ ಮಹತ್ವ ನೀಡುವುದಿಲ್ಲ. ಸಂಘದ ಒಗ್ಗಟ್ಟು ಮತ್ತು ಸದಸ್ಯರ ಹಿತವೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಬಸವರಾಜ ಕರೇಗಾರ ಸ್ಪಷ್ಟಪಡಿಸಿದ್ದಾರೆ.

 

–

Leave a Reply

Your email address will not be published. Required fields are marked *