ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ; ಇದು ನ್ಯಾಯಕ್ಕಾಗಿ ಹೋರಾಟ : ಸಾಲೋಮನ್ ಆಲ್ಫ್ರೆಡ್

ಶಹಾಪುರ,
 ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ, ದೆಹಲಿಯ ಜಂತರ್-ಮಂತರ್‌ನಲ್ಲಿ ನಡೆದ ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಆಗ್ರಹಿಸಿ ಸಮಾನ ಮನಸ್ಕರ ವತಿಯಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ಸಮಾನ ಮನಸ್ಕರ ಮುಖಂಡ ಸಾಲೋಮನ್ ಆಲ್ಫ್ರೆಡ್ ತಿಳಿಸಿದ್ದಾರೆ.
 “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನ್ಯಾಯವಾಗಿದೆ. ಇದು ಕೇವಲ ವಿದ್ಯಾರ್ಥಿಗಳ ಸಮಸ್ಯೆಯಲ್ಲ, ದೇಶದ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಎದುರಾದ ದೊಡ್ಡ ಸವಾಲು. ಇದು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ,” ಎಂದು ಹೇಳಿದರು.
ದೆಹಲಿ ಜಂತರ್-ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಸತ್ ಭವನದತ್ತ ತೆರಳುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಹತ್ತಿಕ್ಕುವ ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಚೆನ್ನಪ್ಪ ಆನೆಗುಂದಿ ಮಾತನಾಡಿ, “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್ ಚೆನ್ನಬಸು ವನದುರ್ಗ,  ಗಿರಿಯಪ್ಪಗೌಡ ಬಾಣತಿಹಾಳ, ಎಸ್ಡಿಪಿಐನ ಖಾಲೀದ್, ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೊಸಮನಿ, ಶೇಖರ್ ದೊರೆ, ಭೀಮರಾಯ ಪೂಜಾರಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *