
ಶಹಾಪುರ: ನಾಡಿನ ಹಿರಿಯ ಸಾಹಿತಿ, ಖ್ಯಾತ ಇತಿಹಾಸ ಸಂಶೋಧಕ ಹಾಗೂ ಲೇಖಕರಾದ ಡಿ.ಎನ್. ಅಕ್ಕಿಯವರ ‘ಹಕ್ಕಿಹಾಂಗ’ ಕವನ ಸಂಕಲನದಲ್ಲಿರುವ ‘ಭಾಗ್ಯರವಿ’ ಕವಿತೆಯು ಮಹಾರಾಷ್ಟ್ರ ಸರ್ಕಾರದ 6ನೇ ತರಗತಿಯ ಕನ್ನಡ ಬಾಲ ಭಾರತಿ ಪಠ್ಯಪುಸ್ತಕಕ್ಕೆ ಆಯ್ಕೆಯಾಗಿದೆ.
ಮಹಾರಾಷ್ಟ್ರ ರಾಜ್ಯ ಪಠ್ಯಪುಸ್ತಕ ನಿರ್ಮಿತಿ ಹಾಗೂ ಅಭ್ಯಾಸಕ್ರಮ ಮಂಡಳಿಯು ಕವಿತೆಯನ್ನು ಆಯ್ಕೆ ಮಾಡಿದ್ದು, ಕನ್ನಡ ಭಾಷಾ ಸಮಿತಿಯ ಅಧ್ಯಕ್ಷೆ ಡಾ. ಶೈಲಜಾ ದೇಶಪಾಂಡೆ ಸೇರಿದಂತೆ ಸಮಿತಿಯ ಸದಸ್ಯರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರಾದ ಡಿ.ಎನ್. ಅಕ್ಕಿ ಅವರು ಹಿರಿಯ ಸಾಹಿತಿ, ಇತಿಹಾಸ ಸಂಶೋಧಕ, ಲೇಖಕ, ಚಿತ್ರಕಲಾವಿದ, ಆದರ್ಶ ಶಿಕ್ಷಕ ಹಾಗೂ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಾಹಿತ್ಯ ಲೋಕಕ್ಕೆ 30ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಿದ್ದು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಅವರ ‘ಭಾಗ್ಯರವಿ’ ಕವಿತೆ ಮಹಾರಾಷ್ಟ್ರ ಸರ್ಕಾರದ ಶಾಲಾ ಪಠ್ಯದಲ್ಲಿ ಸ್ಥಾನ ಪಡೆದಿರುವುದು ಕಲ್ಯಾಣ ಕರ್ನಾಟಕ ಭಾಗಕ್ಕೆ ಹಾಗೂ ಕನ್ನಡ ಸಾಹಿತ್ಯಕ್ಕೆ ಸಂದ ಗೌರವವಾಗಿದೆ ಎಂದು ಉಪನ್ಯಾಸಕ ಡಾ. ರಾಘವೇಂದ್ರ ಹಾರಣಗೇರಾ ಸಂತಸ ವ್ಯಕ್ತಪಡಿಸಿದ್ದಾರೆ.