ಶಹಾಪುರ: ನಗರದ ವೈಷ್ಣವಿ ಲೇಔಟ್‌ನಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ನಿರ್ಮಾಣಕ್ಕಾಗಿ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಮಾರಂಭ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನುಪುರ ಅವರ ನೇತೃತ್ವದಲ್ಲಿ ನೆರವೇರಿತು.ಅಡಿಗಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಶರಣಬಸನಗೌಡ ದರ್ಶನಾಪುರ, ವೈಷ್ಣವಿ ಲೇಔಟ್‌ನಿಂದ ಸುಮಾರು ₹1.65 ಕೋಟಿ ಮೌಲ್ಯದ ಸಿ.ಎ. ನಿವೇಶನವನ್ನು ಸರ್ಕಾರದ ಅನುಮೋದನೆಯೊಂದಿಗೆ ₹16 ಲಕ್ಷಕ್ಕೆ ಪಕ್ಷಕ್ಕೆ ದೊರೆತಿದೆ. ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ 2027ರ ಜನವರಿ 26ರಂದು ಕಚೇರಿಯನ್ನು ಉದ್ಘಾಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಎಸ್‌ಐಆರ್ ವಿರುದ್ಧ ಇಂಡಿಯಾ ಒಕ್ಕೂಟ ಆರಂಭದಿಂದಲೂ ಹೋರಾಟ ನಡೆಸುತ್ತಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ವಂಚಿತರಾಗದಂತೆ ಕಾಂಗ್ರೆಸ್ ಕಾರ್ಯಕರ್ತರು ಒಂದು ತಿಂಗಳ ಕಾಲ ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಅರ್ಜಿಗಳನ್ನು ಸಲ್ಲಿಸಲು ಸಹಕರಿಸಬೇಕು ಎಂದು ಕರೆ ನೀಡಿದರು. 2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇಂದು ಕರ್ನಾಟಕ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಗ್ಯಾರಂಟಿ ವಿಷಯದಲ್ಲಿ ಮಾದರಿಯಾಗಿದೆ ಟೀಕೆ ಮಾಡಿದವರಿಂದಲೇ ಗ್ಯಾರೆಂಟಿ ಯೋಜನೆಗಳು ಜಾರಿಗೆ ಬಂದಿವೆ. ಬಡವರಿಗೆ ಕಾಂಗ್ರೆಸ್ ಪಕ್ಷವೇ ಆಧಾರ ಎಂದರು.

ಸಂಸದ ಜಿ. ಕುಮಾರ್ ನಾಯಕ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಪ್ರತಿಯೊಂದು ತಾಲೂಕಿನಲ್ಲಿ ಸ್ವಂತ ಕಚೇರಿ ಹೊಂದಬೇಕು ಎಂಬ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಕಾರ್ಯಕರ್ತರು ಹೆಚ್ಚಿನ ಗಮನ ಹರಿಸಿ ಮತದಾರರ ಹಕ್ಕುಗಳ ರಕ್ಷಣೆಗೆ ಕೆಲಸ ಮಾಡಬೇಕು ಎಂದರು. ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತದಾರರ ಹಕ್ಕುಗಳ ರಕ್ಷಣೆಗೆ ಧ್ವನಿ ಎತ್ತುತ್ತಿದ್ದಾರೆ ಎಂದು ಹೇಳಿದರು.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಕಾಂಗ್ರೆಸ್ ಪಕ್ಷವು ದೇಶದ ಅಖಂಡತೆ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಪಕ್ಷವಾಗಿದೆ. ಪಂಡಿತ್ ಜವಾಹರಲಾಲ್ ನೆಹರು, ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಮೌಲ್ಯಗಳನ್ನು ಗೌರವಿಸಿ ದೇಶವನ್ನು ಮುನ್ನಡೆಸಿದ್ದಾರೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಂತಪ್ಪ ಸಾಹು ಸ್ವಾಗತಿಸಿದರು. ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸನಗೌಡ ಯಾಳಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಶೇಖರ ಆರಬೋಳ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

13 ವರ್ಷಗಳ ಬಿಜೆಪಿ ಆಡಳಿತದಲ್ಲಿ ಬಡವರು, ರೈತರು, ಯುವಕರು ಹಾಗೂ ಹಿಂದುಳಿದ ವರ್ಗಗಳಿಗೆ ಯಾವ ಹೊಸ ಒಳಿತಾಗಿದೆ ಎಂಬುದನ್ನು ಬಿಜೆಪಿ ಹೇಳಬೇಕು. ಜಾತಿ–ಜಾತಿ, ಧರ್ಮ–ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕುವ ರಾಜಕಾರಣ ದೇಶಕ್ಕೆ ಒಳ್ಳೆಯದಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾಷಣ ಮಾಡಿದರೆ ಸಾಕಾಗುವುದಿಲ್ಲ; ಜನರ ಬದುಕಿಗೆ ಸ್ಪರ್ಶಿಸುವ ಕೆಲಸ ಮಾಡಬೇಕು. 75 ವರ್ಷದ ನಿಯಮ ಹೇಳಿ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ ಬಿಜೆಪಿ, ಅದೇ ನಿಯಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಪಾಲಿಸುತ್ತಾರೆಯೇ ಎಂದು ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಪ್ರಶ್ನಿಸಿದರು.
ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರನ್ನು ವಂಚಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಬೆಳವಣಿಗೆಗಳು ಆತಂಕಕಾರಿ. ಚುನಾವಣೆ ಸಮೀಪಿಸುತ್ತಿರುವಾಗಲೇ ಎಸ್‌ಐಆರ್ ಜಾರಿಗೊಳಿಸುವುದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಸಾಮ್ರಾಜ್ಯಶಾಹಿ ಬ್ರಿಟಿಷರನ್ನೇ ದೇಶದಿಂದ ಓಡಿಸಿದ ನಾವು, ಈಗ ಪ್ರಜಾಪ್ರಭುತ್ವದ ರಕ್ಷಣೆಗೆ ಮತ್ತೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಮುಂಬರುವ ಗ್ರಾಪಂ. ತಾಪಂ.ಜಿಪಂ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಎಚ್ಚರಿಕೆಯಿಂದಿದ್ದು, ಯಾರೊಬ್ಬ ಮತದಾರರೂ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಜಿ. ಕುಮಾರನಾಯಕ್ ಹೇಳಿದರು.
ಕ್ಷೇತ್ರದಲ್ಲಿ ಮೀಸಲಿಟ್ಟ ಅನುಧಾನ
* ₹10 ಕೋಟಿ ಕ್ರೀಡಾ ಶಾಲೆ.
* ₹25 ಕೋಟಿ ಕಾರ್ಮಿಕ ವಸತಿ ಶಾಲೆ.
* ₹30 ಕೋಟಿ ಅಂಬೇಡ್ಕರ್ ವಸತಿ ಶಾಲೆ.
* ₹30 ಕೋಟಿ ತಾಯಿ ಮಕ್ಕಳ ಆಸ್ಪತ್ರೆ.
* ₹15 ಕೋಟಿ ಮೈನಾರಿಟಿ ಶಾಲೆ.
* ₹2.30 ಕೋಟಿ ಕನಕ ಭವನ.
* ₹1.50 ಕೋಟಿ ವಾಲ್ಮೀಕಿ ಭವನ.
* ₹2.40 ಕೋಟಿ ವೀರಶೈವ ಭವನ.
* ₹15 ಕೋಟಿ ಪ್ರಜಾಸೌಧ.
* ₹3 ಕೋಟಿ ಶಾದಿ ಮಹಲ್.
* ₹3 ಕೋಟಿ ಅಂಬಿಗರ ಚೌಡಯ್ಯ ಭವನ.
* ಶಾಶ್ವತ ಕುಡಿಯುವ ನೀರಿಗಾಗಿ ಸನ್ನತಿ ಬ್ರಿಜ್ ನೀರು.
* ಕೆಂಭಾವಿ ಮೌಲಾನ ಆಜಾದ್ ಶಾಲೆ
