ಸ್ಥಳೀಯ ಪತ್ರಿಕೆಗಳ ಕಡೆಗಣಿಸಿ ಸೋಲು ಕಂಡ ರಾಜಕೀಯ ನಾಯಕರು !

ಬಸವರಾಜ ಕರೇಗಾರ 

ಶಹಾಪುರ,,

ರಾಜಕೀಯದಲ್ಲಿ ಜನಾಭಿಪ್ರಾಯ ಎಷ್ಟು ಮಹತ್ವದ್ದೋ, ಸ್ಥಳೀಯ ಪತ್ರಿಕೆಗಳ ಪ್ರಭಾವವೂ ಅಷ್ಟೇ ಮಹತ್ವದ್ದು. ದೊಡ್ಡ ಮಾಧ್ಯಮಗಳಿಗಿಂತ ಸ್ಥಳೀಯ ಪತ್ರಿಕೆಗಳು ಜನರ ಮನಸ್ಸಿನ ನಾಡಿಯನ್ನು ಸ್ಪರ್ಶಿಸುವ ಶಕ್ತಿ ಹೊಂದಿವೆ. ಇದನ್ನು ಕಡೆಗಣಿಸಿದ ಹಲವರು ರಾಜಕೀಯವಾಗಿ ಬೆಲೆ ತೆತ್ತಿರುವ ಉದಾಹರಣೆಗಳು ರಾಜ್ಯದಲ್ಲಿ ಸಾಕಷ್ಟಿವೆ.ಮಾನ್ವಿ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿರವಾರ, ಪ್ರಸ್ತುತ ಹೊಸ ತಾಲೂಕಾಗಿದ್ದು, 2020ರ ಜುಲೈ ತಿಂಗಳಲ್ಲಿ ಅಲ್ಲಿನ VRS ಶಾಲಾ ಸಭಾಂಗಣದಲ್ಲಿ ಕರ್ನಾಟಕ ಜರ್ನಲಿಸಂ ಯೂನಿಯನ್ ವತಿಯಿಂದ ಪತ್ರಕರ್ತರ ಪುರಸ್ಕಾರ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕ್ಷೇತ್ರದ ಶಾಸಕರು ಭಾಷಣ ಮಾಡುವ ವೇಳೆ, ಪಟ್ಟಣದ ಒಂದು ಸ್ಥಳೀಯ ಪತ್ರಿಕೆ ಕಳಪೆ ಕಾಮಗಾರಿಗಳ ಬಗ್ಗೆ ವರದಿ ಪ್ರಕಟಿಸಿದ್ದನ್ನು ಉಲ್ಲೇಖಿಸಿ, “ಒಗ್ಗರಣೆ ಕಟ್ಟಲು ನಾಲಾಯಕ್ ಪತ್ರಿಕೆ” ಎಂದು ಟೀಕಿಸಿದ್ದರು ಎನ್ನಲಾಗುತ್ತದೆ.

ಈ ಮಾತು ಸ್ಥಳೀಯ ಪತ್ರಕರ್ತರ ಮನಸ್ಸಿಗೆ ನೋವುಂಟುಮಾಡಿತ್ತು. ನಂತರ ಚುನಾವಣೆ ಸಮೀಪಿಸಿದಾಗ ಸ್ಥಳೀಯ ಪತ್ರಿಕೆಗಳು ಕ್ಷೇತ್ರದ ವಿವಿಧ ಸಮಸ್ಯೆಗಳು, ಜನರ ಅಸಮಾಧಾನ ಮತ್ತು ಅಭಿವೃದ್ಧಿಯ ಕೊರತೆ ಕುರಿತು ನಿರಂತರ ವರದಿಗಳನ್ನು ಪ್ರಕಟಿಸಿವೆ. ಈ ಸುದ್ದಿಗಳು ಕ್ಷೇತ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದವು. 2023ರ ಚುನಾವಣೆಯಲ್ಲಿ ಆ ಶಾಸಕರ ಸೋಲಿಗೆ ಸ್ಥಳೀಯ ಪತ್ರಿಕೆಗಳ ಬರಹಗಳೂ ಒಂದು ಕಾರಣವಾಗಿದ್ದವು ಎಂಬ ಅಭಿಪ್ರಾಯಗಳು ಕೇಳಿಬಂದವು.
ಸ್ಥಳೀಯ ಪತ್ರಿಕೆಗಳ ಬರಹಗಳು ಸಾಮಾನ್ಯ ವರದಿಗಳಲ್ಲ. ಅವು ಜನರ ದೈನಂದಿನ ಸಮಸ್ಯೆಗಳು, ಅಸಮಾಧಾನಗಳು ಮತ್ತು ಸ್ಥಳೀಯ ವಾಸ್ತವ್ಯಗಳನ್ನು ನೇರವಾಗಿ ಪ್ರತಿಬಿಂಬಿಸುತ್ತವೆ. ರಾಷ್ಟ್ರೀಯ ಪತ್ರಿಕೆಗಳಿಗಿಂತ ಸ್ಥಳೀಯ ಮಾಧ್ಯಮಗಳ ಪ್ರಭಾವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಎನ್ನುವುದಕ್ಕೆ ಮಾನ್ವಿ ಕ್ಷೇತ್ರವೇ ಸಾಕ್ಷಿಯಾಗಿದೆ.

ಗೆಲ್ಲುವ ವಿಶ್ವಾಸದಲ್ಲಿದ್ದ ಮಾಜಿ ಸಚಿವರ ಸೋಲು!

2023ರ ದೇವದುರ್ಗ ಕ್ಷೇತ್ರದ ಚುನಾವಣೆಯಲ್ಲೂ ಇದೇ ರೀತಿಯ ರಾಜಕೀಯ ಬೆಳವಣಿಗೆ ಕಂಡುಬಂತು. ಕ್ಷೇತ್ರಕ್ಕೆ ಅಪಾರ ಅನುದಾನ ತಂದು, ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದ ಮಾಜಿ ಸಚಿವರು ಗೆಲುವಿನ ವಿಶ್ವಾಸದಲ್ಲಿದ್ದರು. ಸುಮಾರು 60 ಸಾವಿರ ವಸತಿ ಮನೆಗಳನ್ನು ಕ್ಷೇತ್ರಕ್ಕೆ ತಂದು ಹಂಚಿಕೆ ಮಾಡಿದ್ದುದೂ ಸಣ್ಣ ಸಾಧನೆಯಲ್ಲ.

ದೇವದುರ್ಗ ಇಂದು ಅಭಿವೃದ್ಧಿ ಕಂಡಿದೆ ಎಂದರೆ ಅದರಲ್ಲಿ ಮಾಜಿ ಸಚಿವರ ಪಾತ್ರ ಮಹತ್ತರವಾಗಿದೆ ಎಂದು ಹಲವರು ಹೇಳುತ್ತಾರೆ. ಆದರೆ ಚುನಾವಣೆಯ ವೇಳೆಗೆ ಮನೆ ಮನೆಗೆ ತೆರಳಿ, ಪ್ರತಿ ಹಳ್ಳಿಯ ಜನರನ್ನು ಭೇಟಿ ಮಾಡಿ, ಸಾಮಾನ್ಯ ಜನರ ಜೊತೆ ಬೆರೆತು, ಅನುಕಂಪ ಗಿಟ್ಟಿಸಿಕೊಂಡ ಜೆಡಿಎಸ್ ಅಭ್ಯರ್ಥಿ ಕರೆಮ್ಮನಾಯಕ್ ಜಯ ಸಾಧಿಸಿದರು.

ಅಭಿವೃದ್ಧಿ ಮಾತ್ರ ಸಾಕಾಗುವುದಿಲ್ಲ, ಜನರೊಂದಿಗೆ ನಂಟು ಹಾಗೂ ವಿನಯವೂ ಅಗತ್ಯ ಎಂಬ ಪಾಠವನ್ನು ಆ ಚುನಾವಣೆ ಕಲಿಸಿತು. “ನಾನು ಮಾಡಿದ ಅಭಿವೃದ್ಧಿಗಿಂತ ನನ್ನ ಅಹಂಕಾರವೇ ನನ್ನ ಸೋಲಿಗೆ ಕಾರಣವಾಯಿತು” ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬಂದವು.
ಸಾಮಾಜಿಕ ಜಾಲತಾಣಗಳ ಪ್ರಭಾವ
ಇಂದಿನ ರಾಜಕೀಯದಲ್ಲಿ ಪತ್ರಿಕೆಗಳಿಗಿಂತ ಸಾಮಾಜಿಕ ಜಾಲತಾಣಗಳ ಪ್ರಭಾವವೂ ವೇಗವಾಗಿ ಹೆಚ್ಚುತ್ತಿದೆ. ಒಂದು ಸುದ್ದಿ, ಒಂದು ವಿಡಿಯೋ ಅಥವಾ ಒಂದು ಅಭಿಪ್ರಾಯ ಕ್ಷಣಾರ್ಧದಲ್ಲಿ ಸಾವಿರಾರು ಜನರಿಗೆ ತಲುಪುತ್ತದೆ. ಮತದಾರರು ಮನಸ್ಸು ಮಾಡಿದರೆ ಘಟಾನುಘಟಿಗಳನ್ನೇ ಸೋಲಿಸಬಹುದು ಎಂಬುದಕ್ಕೆ ದೇಶ ಮತ್ತು ರಾಜ್ಯದಲ್ಲಿ ಅನೇಕ ಉದಾಹರಣೆಗಳಿವೆ.
ಕೇವಲ ಪಕ್ಷದ ಕಾರ್ಯಕರ್ತರ ಬಲದಿಂದ ಮಾತ್ರ ಗೆಲುವು ಸಾಧ್ಯವಿಲ್ಲ. ಮತದಾರರ ವಿಶ್ವಾಸ, ಜನಸಂಪರ್ಕ ಮತ್ತು ಸ್ಥಳೀಯ ಮಟ್ಟದ ಗೌರವ ರಾಜಕೀಯದಲ್ಲಿ ಅತ್ಯಂತ ಮುಖ್ಯ. ಸಣ್ಣವರೇಂದು ಯಾರನ್ನಾದರೂ ಕಡೆಗಣಿಸಿದರೆ, ಅದರ ಪರಿಣಾಮ ಮುಂದಿನ ದಿನಗಳಲ್ಲಿ ಗಂಭೀರವಾಗಬಹುದು.

ಕಾಂಗ್ರೆಸ್ ಪಕ್ಷಕ್ಕೂ ಪಾಠವಾದ ಜನಾಭಿಪ್ರಾಯ..

ಸರ್ವರಿಗೆ ಸಮಪಾಲು, ಸಮಾನತೆ” ಎಂಬ ತತ್ವದಡಿ ದೇಶವನ್ನು  ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಶಿಕ್ಷಣ, ಪಂಚವಾರ್ಷಿಕ ಯೋಜನೆಗಳು, ಅಲಿಪ್ತ ನೀತಿ, ವಿದೇಶಾಂಗ ನೀತಿ, ಉಳಿಗಮಾನ್ಯ ಪದ್ಧತಿ ಸೇರಿದಂತೆ ಹಲವು ಕಾರ್ಯಕ್ರಮಗಳು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದವು.
ಇಷ್ಟೊಂದು ಸಾಧನೆಗಳಿದ್ದರೂ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಸೋಲು ಕಂಡಿತು. ಇದು ಜನಾಭಿಪ್ರಾಯ ಎಷ್ಟು ವೇಗವಾಗಿ ಬದಲಾಗಬಹುದು ಎಂಬುದಕ್ಕೆ ದೊಡ್ಡ ಉದಾಹರಣೆ. ಕಳೆದ ಹಲವು ವರ್ಷಗಳಿಂದ ರಾಷ್ಟ್ರ ರಾಜಕೀಯದಲ್ಲಿ ಹೊಸ ಬದಲಾವಣೆಗಳು ಕಂಡುಬರುತ್ತಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ಮನೋಭಾವಗಳು ಚುನಾವಣಾ ಫಲಿತಾಂಶಗಳ ಮೇಲೆ ಮಹತ್ತರ ಪ್ರಭಾವ ಬೀರುತ್ತಿವೆ.
ಆದ್ದರಿಂದ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಸ್ಥಳೀಯ ಮಾಧ್ಯಮಗಳನ್ನು ಕಡೆಗಣಿಸುವುದು ರಾಜಕೀಯದಲ್ಲಿ ಅಪಾಯಕಾರಿ ಎನ್ನುವುದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ.

 

 

Leave a Reply

Your email address will not be published. Required fields are marked *