ಸ್ವಾಭಿಮಾನಿ ಅಳಿಯ ಮಾವನ ಮನೆಯಲ್ಲಿ ಇರಬಾರದು ಎನ್ನುತ್ತಾರೆ ಕನಕದಾಸರು!

ಕನಕ ವಿಚಾರ ಮಂಥನ :15

 ಸ್ವಾಭಿಮಾನಿ ಅಳಿಯ ಮಾವನ ಮನೆಯಲ್ಲಿ ಇರಬಾರದು ಎನ್ನುತ್ತಾರೆ ಕನಕದಾಸರ

ಲೇಖನ : ಮುಕ್ಕಣ್ಣ ಕರಿಗಾರ

       ಕನಕದಾಸರು ಸಮಾಜ ಜೀವನವನ್ನು ಅದರ ಅರೆಕೊರೆಗಳ ಸಮೇತ ಆರೈದು ನೋಡಿದವರು.ಸಮಾಜ ಜೀವನವನ್ನು ಚಿಕಿತ್ಸಕಬುದ್ಧಿಯಿಂದ ನೋಡಿದ ಕನಕದಾಸರು ತಮ್ಮ ಕೀರ್ತನೆಗಳು ಮತ್ತು ಕಾವ್ಯಗಳಲ್ಲಿ ತಮ್ಮ ಸಮಕಾಲೀನ ಸಮಾಜಜೀವನವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.ಸಮಾಜದ ಕಂದಾಚಾರ- ಮೂಢನಂಬಿಕೆಗಳ ವಿರುದ್ಧ ಕನಕದಾಸರಲ್ಲಿ ಸಾತ್ವಿಕ ಆಕ್ರೋಶವಿದ್ದರೆ ಸಮಾಜಜೀವಿಯಾದ ಮನುಷ್ಯರ ವರ್ತನೆಗಳನ್ನು ಕೆಣಕಿ ನುಡಿದಿದ್ದಾರೆ.ಸ್ವಾಭಿಮಾನಿಯಾದ ಅಳಿಯ ಮಾವನ ಮನೆಯಲ್ಲಿ’ ಅಳಿಯ ಕೂಳು’ ತಿನ್ನಬಾರದು ಎನ್ನುತ್ತಾರೆ ಕನಕದಾಸರು ತಮ್ಮ ಒಂದು ಕೀರ್ತನೆಯಲ್ಲಿ.

‘ ಅಳಿಯಕೂಳು’ ಬೇಡ ಎನ್ನುವ ಕನಕದಾಸರ ಈ ಕೀರ್ತನೆಯು ಮನುಷ್ಯರ ವರ್ತನೆಯ ಮೇಲೆ ಬೆಳಕು ಚೆಲ್ಲುತ್ತದೆಯಲ್ಲದೆ ಕನಕದಾಸರ ಬದುಕಿನಲ್ಲಿ ಘಟಿಸಿದ ಪ್ರಸಂಗವೂ ಆಗಿರಬಹುದು ಎನ್ನುವ ಕಾರಣದಿಂದ ಈ ಕೀರ್ತನೆ ಮಹತ್ವ ಪಡೆಯುತ್ತದೆ.ಕುಹಕಿಗಳ ಕುಟಿಲತಂತ್ರದಿಂದ ತಿಮ್ಮಪ್ಪ ಡಣ್ಣಾಯಕ ತನ್ನ ಡಣ್ಣಾಯಕ ಪದವಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ತನ್ನ ಮಾವನ ಮನೆಯಲ್ಲಿ ತಂಗಿರಬೇಕು ಕೆಲವು ದಿನ.ಮಾವನ ಮನೆಯಲ್ಲಿ ತಮಗಾದ ಅಹಿತಕರ ಅನುಭವಗಳನ್ನು ಮನಮುಟ್ಟುವಂತೆ ಹಾಡಿದ್ದಾರೆ’ ಮಾವನ ಮನೆಯೊಳಿರಬಹುದೆ ಕೋವಿದರು’ ಎನ್ನುವ ಕೀರ್ತನೆಯಲ್ಲಿ. ತಂದೆಯ ಮನೆ ಮಾವನ ಮನೆ ಎರಡು ಒಂದೇ ಅಲ್ಲ ಎನ್ನುವ ಸಾಮಾಜಿಕನೆಲೆಬೆಲೆಯು ಈ ಕೀರ್ತನೆಯ ಅಂತಃಸತ್ತ್ವ.ಮಕ್ಕಳಾದವರಿಗೆ ತಂದೆಯ ಮನೆ ಸ್ವಂತ ಮನೆಯಾಗುತ್ತದೆ,ಆ ಮನೆಯ ಮೇಲೆ ಮಕ್ಕಳಿಗೆ ಸಹಜ ಹಕ್ಕು ಪ್ರಾಪ್ತಿಯಾಗುತ್ತದೆ. ಆದರೆ ಮಾವನ ಮನೆಗೆ ಅಳಿಯ ಹೊರಗಿನವನು.ಮಾವ ಮತ್ತು ಅವನ ಮನೆಯವರು ಅಳಿಯನನ್ನು ಎಷ್ಟೇ ಪ್ರೀತಿ,ಗೌರವಗಳಿಂದ ಕಂಡರೂ ಮಾವನ ಮನೆ ಸ್ವಂತ ಮನೆಯಾಗುವುದಿಲ್ಲ.ಅಳಿಯನಾದವನು ತನ್ನ ಅಪ್ಪನ ಮನೆಯಲ್ಲಿ ವರ್ತಿಸಿದಂತೆ ಮಾವನ ಮನೆಯಲ್ಲಿ ಅಧಿಕಾರ ಚಲಾಯಿಸಲಾಗದು.ಮಾವನ ಮನೆಯಲ್ಲಿ ತನ್ನ ಹೆಂಡತಿ ಜೊತೆಗೆ ಅವಳ ಅಣ್ಣ ತಮ್ಮಂದಿರು ಇರುತ್ತಾರೆ,ಅವರ ಹೆಂಡಿರು ಮಕ್ಕಳು ಇರುತ್ತಾರೆ.ಅವರಿಗೆ ಅಳಿಯ ಕೆಲವು ದಿನಗಳಿಗಷ್ಟೇ ಆಪ್ತ.ಬಹುದಿನಗಳಾದರೆ ‘ ಎಂದು ತೊಲಗುವುದೊ’ ಎಂದು ಆಡಿಕೊಳ್ಳುವ ‘ ಪೀಡೆ’ ಯಾಗುತ್ತಾನೆ ಎನ್ನುವುದನ್ನು ಕನಕದಾಸರು ಬಹು ಸೊಗಸಾಗಿ ವಿವರಿಸಿದ್ದಾರೆ .ಆ ಕೀರ್ತನೆಯನ್ನು ಒಂದು ಸಾರೆ ಇಡಿಯಾಗಿ ಓದಿ,ಮುಂದುವರೆಯೋಣ ಅದರ ಭಾವ ಪ್ರಪಂಚದಲ್ಲಿ.

ಮಾವನ ಮನೆಯೊಳಿರಬಹುದೆ ಕೋವಿದರು //ಪ//

ಹಾವು ಹಿಡಿಯಲು ಬಹುದು ಹರಣ ನೀಡಲು ಬಹುದು /

ಬೇವ ಕಿಚ್ಚನು ಹಿಡಿದು ನುಂಗಬಹುದು/

ಭಾವೆಯಳ ತಂದೆ ಮನೆಯಲಿ ಜೀವಿಪುದಕಿಂತ /

ಸಾವುದೇ ಲೇಸು ಅಭಿಮಾನಗಳಿಗೆ //೧//

 

ಪರರ ಸೇರಲು ಬಹುದು ಪತಿತರಲ್ಲಿರಬಹುದು/

ಕೊರಳ ಘಾತಕಂಗೆ ಶಿರ ಒಪ್ಪಿಸಬಹುದು /

ತರಣಿಯ ತೌರು ಮನೆಯಲಿ ಇರುವುದಕಿಂತ

ತರುಗಿರಿ ಗುಹೆಯಲ್ಲಿ ಇದ್ದು ಜೀವಿಸಬಹುದು //೨//

 

ಮಾವ ಅತ್ತೆಯು ನೊಂದು ಅತ್ತಿಗೆಯು ತಾ ಜರಿದು/

ಹೇವವನಿಕ್ಕಿ ಚೂರ್ಣ ಮಾಡಲು/

ಆವಾಗ ನೋಡಿದರು ಎನಗೆ ಹಿತರಿಲ್ಲೆಂದು /

ಮಾವ ಹೊರಗಾಡುವನು ಚಿಕ್ಕ ನುಡಿಗಳನು //೩//

 

ಬಂದೊಂದು ತಿಂಗಳೊಳು ಬಹುಮಾನ ನಡತೆಗಳು /

ಬಂದೆರಡು ತಿಂಗಳೊಳಗೆ ಹಿತವಾದವು/

ಒಂದೊಂದಭದ್ರ ನುಡಿ ಒಡಲೊಳಗೆ ಹುಟ್ಟುವವು /

ಸಂದೇಹವೇಕೆ ಸಂಸಾರಿಗಳಿಗೆ //೪//

 

 ಈ ಪರಿಯಲುಂಬಂಥ ಅಳಿಯ ಭೋಜನಕಿಂತ /

ಗೋಪಾಳ ಲೇಸು ಅಭಿಮಾನಗಳಿಗೆ /

ಶ್ರೀಪತಿ ನೆಲೆಯಾದಿಕೇಶವನ ಚರಣ, ಸ /

ಮೀಪದಲಿ ವಾಸಿಸುವುದೆ ವಾಸಿ ಮನವೆ //೫//

 

ಸ್ವಾಭಿಮಾನಿಯಾದ ಅಳಿಯ ಮಾವನ ಮನೆಯಲ್ಲಿ ಜೀವಿಸಬಾರದು ಎನ್ನುತ್ತಾರೆ ಕನಕದಾಸರು. ಮಾವನ ಮನೆಯಲ್ಲಿ ಅಳಿಯ ಕೂಳು ತಿನ್ನುವುದಕ್ಕಿಂತ ಗುಡಿ ಗುಂಡಾರಗಳಲ್ಲಿ ವಾಸಿಸಬಹುದು,ತಿರುಪೆ ಬೇಡಿ ತಿನ್ನಬಹುದು ಎನ್ನುವುದರ ಹಿಂದೆ ಅವರು ಅನುಭವಿಸಿದ ನೋವು ಇರಬಹುದು. ಇಲ್ಲವೆ ಅವರು ದಾಸರಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಯಾರಾದರೊಬ್ಬ ಅಳಿಯನ ದೈನ್ಯಸ್ಥಿತಿ ಕಂಡು ಮರುಗಿರಬೇಕು.ಅಂತೂ ಮಾವನ ಮನೆಗೆ ಎರಡನೆಯವನು ಆಗುವ ಅಳಿಯತನದ ಹಂಗಿನ ಕೂಳು ಬೇಡ ಎನ್ನುವ ಕನಕದಾಸರ ಹಿತೋಕ್ತಿ ಸ್ವಾಭಿಮಾನಿಗಳಿಗೆಲ್ಲ ಅನುಸರಣಯೋಗ್ಯಮಾತು.

ಮದುವೆಯಾದ ಹೊಸತರಲ್ಲಿ ಅಳಿಯ ಮಾವನ ಮನೆಗೆ ಬಂದಾಗ ಮಾವನ ಮನೆಯಲ್ಲಿ ಹಬ್ಬದ ವಾತಾವರಣ ಏರ್ಪಡುತ್ತದೆ.ಹೋಳಿಗೆ ಹುಗ್ಗಿ ಪಾಯಸವಾದಿ ಬಗೆಬಗೆಯ ಭಕ್ಷ್ಯಭೋಜ್ಯಗಳಿಂದ ಅಳಿಯನನ್ನು ಸತ್ಕರಿಸುತ್ತಾರೆ.ನೆರೆ ಹೊರೆಯವರು ಬಂದು ಅಳಿಯನನ್ನು ಮಾತನಾಡಿಸುತ್ತಾರೆ,ಅವರ ಮನೆಗಳಿಗೆ ಕರೆದೊಯ್ದು ಸತ್ಕರಿಸುತ್ತಾರೆ.ಬಂಧು ಬಾಂಧವರುಗಳೆಲ್ಲ ಬಂದು ಅಳಿಯನ ಆದರಾತಿಥ್ಯ ಮಾಡುತ್ತಾರೆ.ಬರಬರುತ್ತ ಈ ಪ್ರೀತಿ,ಆದರಗಳು ಕಡಿಮೆಯಾಗಿ ಅಳಿಯ ಮಾವನ ಮನೆಗೆ ಬರುವುದು ಸಾಮಾನ್ಯ ಸಂಗತಿಯಾಗುತ್ತದೆ.ಅದರಲ್ಲೂ ಅಳಿಯ ಯಾವುದಾದರೂ ದುರ್ದೆಸೆಗೆ ಸಿಕ್ಕು ಮಾವನ ಮನೆಯಲ್ಲಿ ಉಳಿಯುವಂತಹ ಸ್ಥಿತಿಬಂದೊದಗಿದಾಗ ಅವನ ಪಾಡು ನಾಯಿಪಾಡು ಆಗುತ್ತದೆ.ಬುದ್ಧಿವಂತರಾದವರು ಮಾವನ ಮನೆಯಲ್ಲಿರಬಹುದೆ? ಸ್ವಾಭಿಮಾನಿಗಳು ಮಾವನ ಮನೆಯ ಹಂಗಿಗರಾಗಬಾರದು ಎಂದು ಹಿತನುಡಿಯುವ ಕನಕದಾಸರು ಮಾವನ ಮನೆಯಲ್ಲಿ ಇರುವುದು ಯಾವ ಕಾರಣಕ್ಕೂ ಶೋಭೆಯನ್ನುಂಟು ಮಾಡದು ಎನ್ನುವ ಸಂಗತಿಯನ್ನು ಎಷ್ಟು ಸ್ವಾರಸ್ಯವಾಗಿ ವಿವರಿಸಿದ್ದಾರೆ ನೋಡಿ.ಮಾವನ ಮನೆಯಲ್ಲಿ ಇರುವುದಕ್ಕಿಂತ ಹಾವನ್ನು ಹಿಡಿಯಬಹುದಂತೆ,ಜೀವ ಕಳೆದುಕೊಳ್ಳಬಹುದಂತೆ.ಉರಿವ ಬೆಂಕಿಯನ್ನು ಗಂಟಲಲ್ಲಿ ನುಂಗಬಹುದಂತೆ ಆದರೆ ಹೆಂಡತಿಯ ತಂದೆಯ ಮನೆಯಲ್ಲಿರುವುದಕ್ಕಿಂತ ಸಾಯುವುದೇ ಮೇಲು.ಗತಿಗೆಟ್ಟು ಇತರರ ಮನೆಗಳ ಎಡತಾಕಬಹುದು,ವಿಶ್ವಾಸಘಾತುಕರಿಗೆ ಶಿರವನ್ನೊಪ್ಪಿಸಬಹುದು,ಹೆಂಡತಿಯ ತೌರು ಮನೆಯಲ್ಲಿರುವುದಕ್ಕಿಂತ ಕಾಡು,ಗುಡ್ಡ ಗುಹೆಗಳಲ್ಲಿ ಇರಬಹುದು.ಬಹುಕಾಲ ಮಾವನ ಮನೆಯಲ್ಲಿ ಇದ್ದರೆ ಮಾವನ ಮನೆಯಲ್ಲಿ ಅಶಾಂತಿ,ಅಸಮಧಾನಗಳುಂಟಾಗುತ್ತವೆ.ಮಾವನ ಮಕ್ಕಳು, ಸೊಸೆಯಂದಿರು ಜಗಳ ಮಾಡುತ್ತಾರೆ. ಇದರಿಂದ ಅತ್ತೆ ಮಾವರನಡುವೆ ಮನಸ್ತಾಪ ಉಂಟಾಗುತ್ತದೆ. ಅತ್ತೆ ಮಗಳ ಮೇಲಿನ ಪ್ರೇಮದಿಂದ ಅಳಿಯನ ಪಕ್ಷವಹಿಸಿ ‘ಅಳಿಯ ಇರಲಿ ಬಿಡು,ಅದರಿಂದ ಕೇಡೇನು’ ಎಂದರೆ ಮಕ್ಕಳು ಸೊಸೆಯಂದಿರ ಮಾತುಗಳನ್ನು ಕೇಳಲೇಬೇಕಾದ ಅನಿವಾರ್ಯತೆಗೆ ಒಳಗಾದ ಮಾವ ತನ್ನ ಹೆಂಡತಿಗೆ ಮಕ್ಕಳು ಸೊಸೆಯಂದಿರು ಆಡಿಕೊಳ್ಳುತ್ತಿರುವುದರಿಂದ ಅಳಿಯನನ್ನು ಅವನ ಮನೆಗೆ ಕಳಿಸುವುದು ಲೇಸು ಎನ್ನುವ ಬುದ್ಧಿಮಾತನ್ನು ಕೇಳದೆ ಅತ್ತೆ ಮಾವನೊಂದಿಗೆ ಜಗಳಕ್ಕಿಳಿದಾಗ ಮಾವ ‘ ಎಂದಿಗೂ ನನಗೆ ಹಿತವರಿಲ್ಲ’ ಎಂದು ನೊಂದು ನುಡಿಯುವ ಸಂಕಟಕ್ಕೆ ಗುರಿಯಾಗುವನು.ಮನೆಯಲ್ಲಿ ತನ್ನ ಮಾತು ನಡೆಯದು ಎಂಬ ಕಾರಣಕ್ಕೆ ಮಾವನು ಹೊರಗೆ ಅವರಿವರಮುಂದೆ ಸಣ್ಣಮಾತುಗಳನ್ನಾಡಿ ಅಳಿಯನನ್ನು ನಿಂದಿಸುವನು.

ಹೊಸತಾಗಿ ಮದುವೆಯಾಗಿ ಮಾವನ ಮನೆಗೆ ಬಂದ ಸಂದರ್ಭದಲ್ಲಿ ಅಳಿಯನನ್ನು ಸತ್ಕರಿಸಿ,ಸನ್ಮಾನಿಸುವರು.ಒಂದೆರಡು ತಿಂಗಳುಗಳ ಕಾಲ ಅಳಿಯ ಮಾವನ ಮನೆಯಲ್ಲಿ ಇದ್ದರೆ ಎಲ್ಲರಿಗೂ ಹಿತವೆನಿಸುವುದು.ಅದಕ್ಕೂ ಮೀರಿ ಹಲವು ತಿಂಗಳುಗಳ ಕಾಲ ಮಾವನ ಮನೆಯಲ್ಲಿದ್ದರೆ ಎಂದು ಹೋಗುವನೋ ಪುಣ್ಯಾತ್ಮ ಎನ್ನುವಂತಹ ಸಾಗುಹಾಕುವ ಮಾತುಗಳು ಕೇಳಿ ಬರುತ್ತವೆ.ಮಾವನ ಮನೆಯವರು ಅಳಿಯನನ್ನು ಬಹುಕಾಲ ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬಯಸುವುದಿಲ್ಲ ಎನ್ನುವ ಮಾತಿನಲ್ಲಿ ಯಾವ ಅಳಿಯಂದಿರಿಗೂ ಸಂದೇಹಬೇಡ ಎನ್ನುವ ಕನಕದಾಸರು ಇಂಥ ಬೇಡವಾದ,ಹಂಗಿನ ಅಳಿಯಭೋಜನವನ್ನುಂಬುವದಕ್ಕಿಂತ ಹರಿದಾಸರು ಹೆಗಲಿಗೆ ಹಾಕಿಕೊಳ್ಳುವ ಭಿಕ್ಷೆ ಬೇಡುವ ಬಿದಿರುಬಟ್ಟಲು ಗೋಪಾಳಪುಟ್ಟಿಯೇ ಒಳ್ಳೆಯದು ಎನ್ನುತ್ತಾರೆ. ಮಾವನ ಮನೆಯಲ್ಲಿ ಇರುವುದಕ್ಕಿಂತ ಹರಿಯ ದೇವಸ್ಥಾನದಲ್ಲಿ ,ಅದರ ಅಕ್ಕಪಕ್ಕದಲ್ಲಿ ವಾಸಿಸುವುದು ಲೇಸು ಎನ್ನುತ್ತಾರೆ.

ಈ ಕೀರ್ತನೆಯಲ್ಲಿ ಅಳಿಯನೊಬ್ಬನು ಮಾವನ ಮನೆಯಲ್ಲಿ ಅನುಭವಿಸಿದ ಅಪಮಾನಕರ ಪ್ರಸಂಗವನ್ನು ಕಣ್ಣುಮುಂದೆ ಕಟ್ಟುವಂತೆ ಚಿತ್ರಿಸಿದ ಕನಕದಾಸರ ಕಾವ್ಯಪ್ರತಿಭೆಯ ಸೊಬಗು,ಸೊಗಸುಗಳು ಸಹೃದಯರ ಮನತಟ್ಟುತ್ತವೆ.ಅಳಿಯಕೂಳು ಹಂಗಿನ ಕೂಳು ಆಗುವುದರಿಂದ ಹಂಗಿನರಮನೆಗಿಂತ ಚಿಕ್ಕ ಮನೆಯಾದರೂ ಸರಿಯೆ ಇಲ್ಲವೆ ಗುಡಿಸಲು ಆದರೂ ಸರಿಯೆ ಸ್ವಾಭಿಮಾನಿಯಾದ ಅಳಿಯ ತನ್ನ ‘ವಿಂಗಡದಗುಡಿ’ ಯಲ್ಲಿ ಇರುವುದೇ ಶ್ರೇಯಸ್ಕರ ಎನ್ನುವ ಕನಕದಾಸರ ಹಿತೋಪದೇಶ ಅರಿತು ನಡೆಯಬೇಕು ಮಾವನ ಮನೆಯ ಆಸೆಯ ಅಳಿಯಂದಿರುಗಳು.ಕೆಲವು ಮಾವಂದಿರು ಅಳಿಯನನ್ನು ಪುತ್ರ ಸಮಾನವಾಗಿ ನೋಡಿಕೊಳ್ಳುವವರಿದ್ದಾರೆ‌.ಅಂಥವರ ಸಂಖ್ಯೆ ಕಡಿಮೆ.ಮಾವನ ಮನೆಯಲ್ಲಿ ಬಿಡಾರಹೂಡುವ ಅಳಿಯಂದಿರುಗಳನ್ನು ಸಮಾಜವು ಸಹ ಒಂದು ದೃಷ್ಟಿಯಿಂದ ನೋಡುತ್ತದೆ.ಮಾವನ ಆಸ್ತಿಗೆ ಬಂದವರನ್ನು ‘ ಅಳಿಯತನಕ್ಕೆ ಬಂದವರು’ ಎನ್ನುತ್ತಾರೆಯೇ ಹೊರತು ಆಸ್ತಿಯ ಸಹಜ ಹಕ್ಕುದಾರ ಎಂದು ಪರಿಗಣಿಸುವುದಿಲ್ಲ.ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ಕೂಡ ಒಂದು ತೀರ್ಪಿನಲ್ಲಿ ಅಳಿಯನಿಗೆ ಮಾವನ ಆಸ್ತಿಯಲ್ಲಿ ಸಹಜ ಹಕ್ಕು ಇರುವುದಿಲ್ಲ ಎಂದು ತೀರ್ಪು ನೀಡಿರುವುದನ್ನು ಗಮನಿಸಿದರೆ ಕನಕದಾಸರ ವಿಚಾರ ಎಷ್ಟು ಸ್ವಾಭಾವಿಕವಾದುದು,ಸತ್ತ್ವಯುತವಾದದ್ದು ಎಂದು ಮನದಟ್ಟಾಗುತ್ತದೆ.

 

             ೦೬.೦೪.೨೦೨೬