Blog

ಹಾರಣಗೇರಾ ಗ್ರಾಮಕ್ಕೆ ಅನುದಾನ ನೀಡದಂತೆ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ

ಶಹಾಪುರ :: ತಾಲೂಕಿನ ಉಕ್ಕಿನಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಹಾರಣಗೇರಾ ಗ್ರಾಮಕ್ಕೆ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಮತ್ತು ನರೇಗಾದಿಂದ ಯಾವುದೇ ರೀತಿಯ ಕಾಮಗಾರಿಗಳ ಅನುದಾನ ನೀಡಬಾರದೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕರಾದ ರಾಯಪ್ಪ ಸಾಲಿಮನಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಹಾರಣಗೇರಾ ಗ್ರಾಮಕ್ಕೆ ಸಾರ್ವಜನಿಕ ನರೇಗಾ ಸೇರಿದಂತೆ 15ನೇ ಹಣಕಾಸು ಯೋಜನೆಯ ಕಾಮಗಾರಿಗಳು ಮೂರು ವರ್ಷಗಳಿಂದ ನಡೆದಿಲ್ಲ. ಸಂಪೂರ್ಣವಾಗಿ ಗ್ರಾಮ ಪಂಚಾಯಿತಿಯವರು ಹಾರಣಗೇರಾ ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ. ಗ್ರಾಮದಲ್ಲಿರುವ ಚರಂಡಿ, ಸಿಸಿ ರಸ್ತೆ, ಕ್ಷೇತ್ರ ಬದು, ಕೃಷಿ ಹೊಂಡ, ದನದ ಕೊಟ್ಟಿಗೆ, ಎರೆಹುಳು ಘಟಕ, ಇವೆಲ್ಲ ಕಾಮಗಾರಿಗಳು ಕಳೆದ ಮೂರು ವರ್ಷಗಳಿಂದ ನಡೆದಿಲ್ಲ ಎಂದು ಆರೋಪಿಸಿದ್ದಾರೆ. ಮುಂದೆಯೂ ಸಹ ಆಗುವುದು ಬೇಡ. ಗ್ರಾಮ ಪಂಚಾಯಿತಿಯ ಯಾವುದೇ ಹಣ ಹಾರಣಗೇರಾ ಗ್ರಾಮಕ್ಕೆ ಬಳಕೆಯಾಗಬಾರದು. ಒಂದು ವೇಳೆ ಕಾಮಗಾರಿಗಳು ನಿರ್ವಹಿಸಿದರೆ ಅಂತಹವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಸರ್ಕಾರಕ್ಕೆ ಹಣ ಹಿಂದಿರುಗಿಸಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

About The Author