Blog

ಇಂದು ಬಸವಾದಿ ಶರಣರ ಜಾಗೃತಿ ಸಮಾವೇಶ : ಜಾಗತಿಕ ಲಿಂಗಾಯತ ಮಹಾಸಭೆ ನೇತೃತ್ವದಲ್ಲಿ ಸಮಾವೇಶ : ಚನ್ನಪ್ಪ ಆನೆಗುಂದಿ

ಶಹಾಪುರ,,

ಮೇ.15 ರಂದು ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಸಂಜೆ 5 ಗಂಟೆಗೆ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಸವಾದಿ ಶರಣರ ಜಾಗೃತಿ ಸಮಾವೇಶ ನಡೆಯಲಿದ್ದು, ವಿವಿಧ ಮಠಾಧೀಶರು, ಚಿಂತಕರು, ಪ್ರಗತಿಪರರು ಭಾಗವಹಿಸಲಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಮುಖಂಡ ಚನ್ನಪ್ಪ ಆನೆಗುಂದಿ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.18 ರಂದು ಹಮ್ಮಿಕೊಂಡ ಬಸವಾದಿ ಶಿವಶರಣರ ಹಿಂದೂ ಬೃಹತ್ ಸಮಾವೇಶದ ವಿರುದ್ಧ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ ಮುಖ್ಯವಾಗಿ ನಾವು ಹಿಂದೂ ಎಂಬ ಪದವನ್ನು ಬಳಸಿ ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಮಹಾನ್ ದಾರ್ಶನಿಕ ಬಸವಣ್ಣನವರ ಮತ್ತು ಶರಣರ ಹೆಸರು ಬಳಸುತ್ತಿರುವದಕ್ಕೆ ನಮ್ಮ ವಿರೋಧವಿದೆ. ಹಿಂದೂ ಸಮಾವೇಶದಲ್ಲಿ ದಾರ್ಶನಿಕರನ್ನು ಎಳೆ ತರುವದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಮುಂದಿಟ್ಟ ಅವರು, ತಾವೂ ಹಮ್ಮಿಕೊಂಡ ಬಸವಾದಿ ಶರಣರ ಜಾಗೃತಿ ಸಮಾವೇಶ ಜನರಲ್ಲಿ ಜಾಗೃತಿ ಮೂಡಿಸುವಂತದ್ದಾಗಿದೆ. ನಮ್ಮ ವಿಚಾರಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಸಮಾಜದಲ್ಲಿ ಹಿಂದೂ ವಿಷ ಬೀಜ ಬಿತ್ತುವ ಮೂಲಕ ಯುವ ಪೀಳಿಗೆ ಭವಿಷ್ಯ ಹಾಳಾಗುತ್ತಿದೆ. ಆ ನಿಟ್ಟಿನಲ್ಲಿ ನಾವು ಸರ್ವಧರ್ಮ, ಸರ್ವ ಸಮುದಾಯದವರು ಸೇರಿ ವಿವಿಧ ಸಂಘಟನೆಗಳೊಂದಿಗೆ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದೇವೆ ಒಡೆಯುವ ಕೆಲಸವಲ್ಲ ಎಂದರು.

ಪ್ರಗತಿಪರ ಮುಖಂಡರಾದ ಹಿರಿಯ ವಕೀಲರಾದ ಆರ್.ಚನ್ನಬಸವ, ಗಿರೆಪ್ಪಗೌಡ ಬಾಣತಿಹಾಳ, ನೀಲಕಂಠ ಬಡಿಗೇರ, ಶಿವಣ್ಣ ಇಜೇರಿ ಮಾತನಾಡಿದರು. ದಲಿತ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ಭೀಮರಾಯ ಹೊಸಮನಿ ಮತ್ತು ಸಣ್ಣ ನಿಂಗಪ್ಪ ನಾಯ್ಕೋಡಿ, ಅಯ್ಯಣ್ಣ ಕನ್ಯಾಕೋಳೂರ, ಸೈದುದ್ದೀನ್ ಖಾದ್ರಿ, ಷಣ್ಮುಖ ಅಣಬಿ ಇತರರಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾದ ಬ್ಯಾನರನಡಿ ವಿವಿಧ ಸಂಘಟನೆಗಳೊಂದಿಗೆ ತಾವೂ ಕಾರ್ಯಕ್ರಮ ಮಾಡುತ್ತಿದ್ದು, ಇಲ್ಲಿವರೆಗೂ ಜಾಗತಿಕ ಮಹಾಸಭಾ ಆಗಲಿ ಅಥವಾ ವೀರಶೈವ ಲಿಂಗಾಯತ ಮಹಾಸಭಾದಲ್ಲಾಗಲಿ ಅನ್ಯ ಜಾತಿಯ ಅಥವಾ ಉಪ ಪಂಗಡಗಳು ಎಂದು ಕರೆಯುವ ಯಾವುದೇ ಸಮುದಾಯದ ಓರ್ವರನ್ನು ಪದಾಧಿಕಾರಿಗಳನ್ನಾಗಿ ಮಾಡಿದ್ದೀರಾ.? ಎಂಬ ಪತ್ರಕರ್ತ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಅವರು, ಅದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತೇವೆ ಎಂದು ಚನ್ನಪ್ಪ ಆನೇಗುಂದಿ ಮತ್ತು ಆರ್.ಚನ್ನಬಸು ವನದುರ್ಗ ತಿಳಿಸಿದರು.ಅದೇ ರೀತಿ ಬಸವ ಅನುಯಾಯಿಗಳಲ್ಲಿ, ಬಸವಣ್ಣನವರ ತತ್ವ ಅನುಸರಿಸುವ ವಿಚಾರವಾದಿಗಳಾದ ತಮ್ಮಲ್ಲಿ ಯಾರಾದರೂ ಇದುವರೆಗೆ ಅನ್ಯ ಜಾತಿಯರೊಂದಿಗೆ ಮದುವೆ ಮಾಡಿದ ಉದಾಹರಣೆ ಇದೆಯೇ..? ಎಂಬ ಮಾತಿಗೆ ಅವರ ಸಂಘಟನೆಯ ಕೆ.ನೀಲಾ ಅವರು ಕುಟುಂಬದಲ್ಲಿ ಅನ್ಯ ಜಾತಿಯ ಬಡ ಕುಟುಂಬದವರೊಂದಿಗೆ ಮದುವೆ ಮಾಡಿಸಿದ್ದಾರೆಂದು ತಿಳಿಸಿದರು. ಅಲ್ಲದೆ ತಾವೂಗಳು ಸಹ ಶಹಾಪುರದಲ್ಲಿ ಮುಂದಿನ ದಿನಗಳಲ್ಲಿ ಆ ಹೆಜ್ಜೆ ಇಡಲಿದ್ದೇವೆ ಎಂದು ಆನೇಗುಂದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಮಾರು ಐವತ್ತು ವರ್ಷಗಳಿಂದ ಸಮ ಸಮಾಜ ನಿರ್ಮಾಣಕ್ಕೆ ತಾವೆಲ್ಲ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೀರಿ, ಅದರ ಸಾಧನೆ ನಿಮ್ಮ ಜೊತೆಗೆ ಇರಬೇಕಿತ್ತಲ್ಲ ಎಂಬ ಪ್ರಶ್ನೆಗೆ ಅವರಲ್ಲಿ ಸಮರ್ಪಕ ಉತ್ತರವಿರಲಿಲ್ಲ. ಹೌದು ಶೂನ್ಯ ಸಾಧನೆಯೇ ನಮ್ಮದು ಎಂದು ಒಪ್ಪಿಕೊಂಡ ಅವರು, ಆದರೆ ನಮ್ಮಲ್ಲಿ ಬಂಡವಾಳಶಾಹಿಗಳು ಕೆಲ ಪಟ್ಟಭದ್ರ ಶಕ್ತಿಗಳಿಂದಾಗಿ ಸುಧಾರಣೆಯತ್ತ ಜನ ಹೆಜ್ಜೆ ಹಾಕುತ್ತಿಲ್ಲ ಹಿಂದೇಟು ಹಾಕುವಂತಾಗಿದೆ. ಆದರೆ ನಾವುಗಳು ಹಿಂದೆ ಸರಿಯುವದಿಲ್ಲ ಗೋಲಿ ಬಾರ್ ಮಾಡಿದರೂ ನಾವು ಮುಂದಿಟ್ಟ ಹೆಜ್ಜೆ ಹಿಂದೆ ಇಡುವದಿಲ್ಲ. ಜನರಲ್ಲಿ ಪ್ರಜ್ಞೆ ಬರುವವರೆಗೆ ನಮ್ಮ ಹೋರಾಟ, ಚಿಂತನೆ,ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ.ಜನ ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ಅದು ಅವರಿಗೆ ಬಿಟ್ಟಿದ್ದು ಎಂದು ಉತ್ತರಿಸಿದರು.