Blog

ಕಾಂಗ್ರೆಸ್ ಬಿಟ್ಟು ಬಿಜೆಪಿ ಬನ್ನಿ-ಕುರುಬ ಸಮಾಜಕ್ಕೆ ಪ್ರಹ್ಲಾದ ಜೋಶಿಯ ಆಹ್ವಾನ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಣದಿಂದ ಕುರುಬ ಸಮಾಜ ಕಾಂಗ್ರೆಸ್‌ನೊಂದಿಗೆ ಇದೆ. ಆದರೆ ಈಗ ಕಾಂಗ್ರೆಸ್‌ನಲ್ಲಿ ಎಲ್ಲವೂ ಮುಗಿದಿದ್ದು, ಕುರುಬ ಸಮಾಜ ಬಿಜೆಪಿ ಸೇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಹ್ವಾನ ನೀಡಿದರು.

ನಗರದಲ್ಲಿ ಆಯೋಜಿಸಿದ್ದ ನೂತನ ರಾಜ್ಯಸಭಾ ಸದಸ್ಯ  ನಾಗರಾಜ ಅವರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಮೇಲ್ವರ್ಗದವರ ಪಕ್ಷ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ ಸಂಪುಟದಲ್ಲಿ 47 ಮಂದಿ ಹಿಂದುಳಿದ ವರ್ಗದವರಿದ್ದು, ದೇಶಾದ್ಯಂತ ಬಿಜೆಪಿಯ ಸುಮಾರು 1,800 ಶಾಸಕರಲ್ಲಿ 790 ಮಂದಿ ಹಿಂದುಳಿದ ವರ್ಗದವರಾಗಿದ್ದಾರೆ. ಬಿಜೆಪಿ ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಸಾಗುವ ಪಕ್ಷವಾಗಿದೆ ಎಂದು ತಿಳಿಸಿದರು.

ಕುರುಬ ಸಮಾಜಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವ ಚಿಂತನೆ ಪಕ್ಷಕ್ಕಿದ್ದು, ಎರಡು ಜಿಲ್ಲೆಗಳಿಗೆ ಒಬ್ಬರಂತೆ ಟಿಕೆಟ್ ನೀಡುವ ಬಗ್ಗೆ ಯೋಚನೆ ಇದೆ ಎಂದು ಹೇಳಿದರು. ಕುರುಬ ಸಮಾಜಕ್ಕೆ ಬಿಜೆಪಿ ಎಲ್ಲ ರೀತಿಯ ಅವಕಾಶಗಳನ್ನು ನೀಡಿದ್ದು, ಹಾಲುಮತ ಸಮಾಜ ನಮ್ಮೊಂದಿಗೆ ಬಂದರೆ “ನಾವು ಸಕ್ಕರೆಯಾಗಿ ಇರುತ್ತೇವೆ” ಎಂದು ಜೋಶಿ ಹೇಳಿದರು.

ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಹಲವು ಮುಖಂಡರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.