
ಶಹಾಪುರ: ಬುರ್ರಕಥಾ ಹಾಡುಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಹಿರಿಯ ಜಾನಪದ ಕಲಾವಿದೆ ಲಕ್ಷ್ಮಿಭಾಯಿ ರೇವಲ್ (78) ನಿಧನರಾಗಿದ್ದಾರೆ. ಶಹಾಪುರ ನಗರದ ಹೊಸ ಬಸ್ ನಿಲ್ದಾಣದ ಬಸ್ ಡಿಪೋ ಹಿಂಭಾಗದ ಆಶ್ರಯ ಕಾಲೋನಿಯಲ್ಲಿ ಅವರು ವಾಸವಾಗಿದ್ದರು.


ಜಾನಪದ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಅವರಿಗೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ 34ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿದ್ದವು. ಅವರ ನಿಧನಕ್ಕೆ ಕಲಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ನಾಳೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.