ಸಿದ್ದರಾಮಯ್ಯ ವಿರುದ್ಧ ಆಧಾರರಹಿತ ಆರೋಪ ಸರಿಯಲ್ಲ: ಅಯ್ಯಪ್ಪಗೌಡ

ಕವಿಡೆಸ್ಕ,,

ರಾಜಕೀಯ ಟೀಕೆ ಇರಲಿ, ಸುಳ್ಳು ಅಪಪ್ರಚಾರ ಬೇಡ; ಸಾಕ್ಷ್ಯಾಧಾರಗಳೊಂದಿಗೆ ಮಾತನಾಡಲಿ.


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಸುದ್ದಿ ಹಾಗೂ ಆಧಾರರಹಿತ ಆರೋಪಗಳನ್ನು ಹರಡುವುದು ಸರಿಯಲ್ಲ. ರಾಜಕೀಯವಾಗಿ ಟೀಕೆ ಮಾಡುವುದಕ್ಕೆ ಅವಕಾಶವಿದೆ, ಆದರೆ ವೈಯಕ್ತಿಕ ಘನತೆಗೆ ಧಕ್ಕೆ ತರುವ ಅಪಪ್ರಚಾರ ಸಲ್ಲದು ಎಂದು ಕೆಪಿಸಿಸಿ ಐಎನ್‌ಬಿಸಿಡಬ್ಲ್ಯುಎಫ್ ಯುವ ಘಟಕದ ರಾಜ್ಯಾಧ್ಯಕ್ಷ ಅಯ್ಯಪ್ಪಗೌಡ ಹೇಳಿದರು.

ಸಿದ್ದರಾಮಯ್ಯ ಅವರು ಹಲವು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತದ ಜವಾಬ್ದಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ದೇವರಾಜ ಅರಸು ಅವರ ನಂತರ ರಾಜ್ಯ ಕಂಡ ಧೀಮಂತ ಜನನಾಯಕರಲ್ಲಿ ಒಬ್ಬರಾದ ಅವರು, ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಹಿರಿಯ ರಾಜಕೀಯ ನಾಯಕರ ವಿರುದ್ಧ ಆರೋಪ ಮಾಡುವಾಗ ಸೂಕ್ತ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ಮಾತನಾಡಬೇಕು. ವೈಯಕ್ತಿಕ ದ್ವೇಷ ಅಥವಾ ರಾಜಕೀಯ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡುವುದು ಪ್ರಜಾಪ್ರಭುತ್ವದ ಆರೋಗ್ಯಕರ ವಾತಾವರಣಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ಘನತೆಗೆ ಧಕ್ಕೆ ತರುವ ಮಾಹಿತಿಗಳನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಆಧಾರರಹಿತ ಆರೋಪಗಳನ್ನು ಮಾಡುವುದು ಅಥವಾ ಸುಳ್ಳು ಮಾಹಿತಿಯನ್ನು ಹರಡುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಆರೋಪಗಳ ಸತ್ಯಾಸತ್ಯತೆಯನ್ನು ನಿರ್ಧರಿಸುವಾಗ ಕಾನೂನು ಮತ್ತು ನ್ಯಾಯಸಮ್ಮತ ಪ್ರಕ್ರಿಯೆಗೆ ಆದ್ಯತೆ ನೀಡಬೇಕು. ರಾಜಕೀಯದಲ್ಲಿ ಟೀಕೆ ಇರಲಿ, ಆದರೆ ಸುಳ್ಳು ಅಪಪ್ರಚಾರ ಬೇಡ. ಆರೋಪಗಳಿದ್ದರೆ ಸಾಕ್ಷ್ಯಾಧಾರಗಳೊಂದಿಗೆ ಮಾತನಾಡಬೇಕು. ವ್ಯಕ್ತಿಗಳ ಘನತೆಗೆ ಧಕ್ಕೆ ತರುವ ಹೇಳಿಕೆಗಳಿಂದ ದೂರವಿರಬೇಕು  ಆಗ್ರಹಿಸಿದರು.

ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವದಡಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಆಧಾರರಹಿತ ಆರೋಪಗಳ ಮೂಲಕ ವ್ಯಕ್ತಿಗಳ ಘನತೆಗೆ ಧಕ್ಕೆ ತರುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *