ಯಾದಗಿರಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ (ಡಿ.ಜಿ. ಸಾಗರ ಬಣ) ವತಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರನ್ನು ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಪ್ಪ ಸಂಕೀನ್, ಮಾಧ್ಯಮಗಳು ಧ್ವನಿಯಿಲ್ಲದವರು ಹಾಗೂ ಶೋಷಿತರ ಪರವಾಗಿ ನಿಂತಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಮಾಧ್ಯಮಗಳ ಮೇಲೆ ಅಪಾರ ವಿಶ್ವಾಸವಿಟ್ಟಿದ್ದಾರೆ. ಈ ವಿಶ್ವಾಸವನ್ನು ಉಳಿಸಿಕೊಂಡು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದು ಪತ್ರಕರ್ತರ ಕರ್ತವ್ಯವಾಗಿದೆ ಎಂದರು.
ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಮಾಧ್ಯಮಗಳು ನಿರ್ಭಯವಾಗಿ ಕೆಲಸ ಮಾಡಿದಾಗ ಮಾತ್ರ ಬಲಿಷ್ಠ ಹಾಗೂ ಸಮಾನತೆಯ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಸಂಘಟನಾ ಸಂಚಾಲಕ ಚಂದಪ್ಪ ಮುನೆಪ್ಪನೋರ, ಶಿವಲಿಂಗ ಹಸನಾಪುರ, ಮರೆಪ್ಪ ಕ್ರಾಂತಿ, ದೇವು ಹುಲ್ಕಲ್ (ಜೆ), ಶರಣಪ್ಪ ಮಾಲಹಳ್ಳಿ, ತಾಯಪ್ಪ ಭಂಡಾರಿ, ನಾಗರಾಜ ಕೋಡಮನಹಳ್ಳಿ ಹಾಗೂ ಸಂತೋಷ ಗುಂಡಳ್ಳಿ ಉಪಸ್ಥಿತರಿದ್ದರು.