
ಮಲ್ಲಪ್ಪ ಸಂಕೀನ್
ಜಿಲ್ಲಾಧ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಯಾದಗಿರಿ.
ಯಾದಗಿರಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ವರದಿ ಮಾಡಲು ತೆರಳಿದ್ದ ಮೂವರು ಮಹಿಳಾ ಪತ್ರಕರ್ತೆಯರಿಗೆ ಪೊಲೀಸರು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿತ ಪೊಲೀಸರನ್ನು ಕೂಡಲೇ ಬಂಧಿಸಿ, ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಿಳಾ ಪತ್ರಕರ್ತೆಯರನ್ನು ಎಳೆದಾಡಿ ಅನುಚಿತವಾಗಿ ವರ್ತಿಸಿರುವುದು ಖಂಡನೀಯ. ದೂರು ದಾಖಲಿಸಲು ತೆರಳಿದ ಪತ್ರಕರ್ತೆಯರನ್ನು ಠಾಣೆಯಲ್ಲಿ ಗಂಟೆಗಟ್ಟಲೆ ಕಾಯಿಸಿರುವುದು ಮತ್ತಷ್ಟು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದ್ದಾರೆ.
ಪತ್ರಕರ್ತರು ಮುಕ್ತವಾಗಿ ಕಾರ್ಯನಿರ್ವಹಿಸಲು ಭದ್ರತೆ ಹಾಗೂ ಸ್ವಾತಂತ್ರ್ಯ ಅಗತ್ಯವಿದೆ. ಆದರೆ ಭದ್ರತೆ ನೀಡಬೇಕಾದ ಪೊಲೀಸರೇ ಪತ್ರಕರ್ತೆಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿರುವುದು ಗಂಭೀರ ವಿಚಾರವಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಧಕ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಕರಣದಲ್ಲಿ ಆರೋಪಿತರಾಗಿರುವ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದೆಹಲಿ ಸರ್ಕಾರ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ಸಂತ್ರಸ್ತ ಮಹಿಳಾ ಪತ್ರಕರ್ತೆಯರಿಗೆ ನ್ಯಾಯ ದೊರಕಿಸಬೇಕು ಎಂದು ಮಲ್ಲಪ್ಪ ಸಂಕೀನ್ ಒತ್ತಾಯಿಸಿದ್ದಾರೆ.