ಎಸ್‌ಟಿ ಪ್ರಮಾಣಪತ್ರದಲ್ಲಿ ತಾರತಮ್ಯ : ಯಾದಗಿರಿ ಡಿಸಿ ಕಚೇರಿ ಎದುರು ಕುರುಬ ಸಮಾಜದ ಅನಿರ್ದಿಷ್ಟ ಧರಣಿ

ಯಾದಗಿರಿ : ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ವಿತರಣೆಯಲ್ಲಿ ನಡೆಯುತ್ತಿರುವ ತಾರತಮ್ಯ ಮತ್ತು ಗೊಂದಲವನ್ನು ಖಂಡಿಸಿ ಅಕ್ಟೋಬರ್ 10 ರಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕೋಮರಾಮ್ ಭೀಮ್ ಗೊಂಡ ಕುರುಬ ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕುರುಬ ಸಮಾಜದ ಎಲ್ಲ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಬೀದರ್ ಜಿಲ್ಲೆ ಮತ್ತು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಗೊಂಡ ಕುರುಬ ಹೆಸರಿನಲ್ಲಿ ಸಿಂಧುತ್ವ ಪ್ರಮಾಣಪತ್ರ ನೀಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕಾಡು ಕುರುಬ ಮತ್ತು ಜೇನು ಕುರುಬರಿಗೆ ಎಸ್‌ಟಿ ಮೀಸಲಾತಿ ಜಾರಿಯಲ್ಲಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ನಿರಾಕರಿಸಲಾಗುತ್ತಿದೆ. ಒಂದೇ ಸಮುದಾಯಕ್ಕೆ ಒಂದೆಡೆ ಮಾನ್ಯತೆ, ಮತ್ತೊಂದೆಡೆ ನಿರಾಕರಣೆ ಮಾಡುವ ಹಿಂದಿನ ನಿಯಮವೇನು ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಬೇರೆ ಬೇರೆ ಕ್ರಮ ಅನುಸರಿಸಲಾಗುತ್ತಿದೆ. ಜಿಲ್ಲೆಯ ಗಡಿ ಬದಲಾದಂತೆ ಸಮುದಾಯದ ಹಕ್ಕುಗಳ ಮಾನದಂಡ ಬದಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಸರ್ಕಾರ ಕಾನೂನು ಮತ್ತು ಅಧಿಕೃತ ದಾಖಲೆಗಳ ಆಧಾರದಲ್ಲಿ ಪಾರದರ್ಶಕ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ರಾಜ್ಯ ಸರ್ಕಾರ ತನ್ನ ಶಿಫಾರಸಿನೊಂದಿಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಮತ್ತು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದರು.

ಸ್ಪಷ್ಟ ಆದೇಶ ಬರುವವರೆಗೆ ಹೋರಾಟ ನಿಲ್ಲುವುದಿಲ್ಲ. ಬೇಡಿಕೆ ಈಡೇರದಿದ್ದರೆ ಮೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಂಘಟಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕುರುಬರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಶಿವಕುಮಾರ ಮುನಗಲ್, ಬಾಲಾಜಿ ಜಬಾಡೆ, ಗೋಪಾಲ ಎಂ.ಪಿ., ಸಿದ್ದು ಪೂಜಾರಿ, ಎಸ್. ನಿಜಲಿಂಗಪ್ಪ, ದೇವಿಂದ್ರಪ್ಪ ಇದ್ದರು.

Leave a Reply

Your email address will not be published. Required fields are marked *