Blog

ದಿ.ಬಾಪುಗೌಡರ ದರ್ಶನಾಪುರ ಪುಣ್ಯಾರಾಧನೆ | ಹರಿದು ಬಂದ ಜನಸಾಗರ | ಬಾಪುಗೌಡರ ಪುತ್ತಳಿಗೆ ಮಾಲಾರ್ಪಣೆ

ಕಲ್ಯಾಣ ಕರ್ನಾಟಕದ ಹಸಿರು ಕ್ರಾಂತಿಯ ಹರಿಕಾರ ದಿ.ಬಾಪುಗೌಡರು : ತಿಪ್ಪಣ್ಣ ಕಮಕನೂರು

ಶಹಾಪುರ : ದೂರದೃಷ್ಟಿಯುಳ್ಳ ನಾಯಕ, ರೈತಬಂಧು, ಕೃಷ್ಣ ಮೇಲ್ದಂಡೆ ಯೋಜನೆಯನ್ನು ಸಗರನಾಡಿಗೆ ತಂದು ನೀರು ತಂದುಕೊಟ್ಟ ಪುಣ್ಯಾತ್ಮ, ದಿ.ಬಾಪುಗೌಡ ದರ್ಶನಾಪುರ ಅವರ 36ನೇ ಪುಣ್ಯಸ್ಮರಣೆಯ ಅಂಗವಾಗಿ ಇಂದು ಭೀಮರಾಯನ ಗುಡಿಯ ವೃತ್ತದಲ್ಲಿರುವ ಅವರ ಪುತ್ತಳಿಗೆ ಸಚಿವರನ್ನೊಳಗೊಂಡು ಅಪಾರ ಅಭಿಮಾನಿಗಳು ಸಂಬಂಧಿಕರು ಹಿತೈಷಿಗಳೊಂದಿಗೆ ಮಾಲಾರ್ಪಣೆ ಮಾಡಲಾಯಿತು.ನಂತರ ಚರಬಸವೇಶ್ವರ ಪ್ರೌಢಶಾಲಾ ಸಭಾಂಗಣದಲ್ಲಿ ಪೂಜ್ಯರಾದ ವೇ. ಬಸವಯ್ಯ ಶರಣರು, ಹೆಗ್ಗಣದೊಡ್ಡಿ ಶರಣರ ಸಾನಿಧ್ಯದಲ್ಲಿ ಸಭೆ ಆರಂಭವಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣ ಕಮಕನೂರು ಮಾತನಾಡಿ,ಸಗರನಾಡಿಗೆ ನೀರು ತಂದ ಪುಣ್ಯಾತ್ಮ, ಕಲ್ಯಾಣ ಕರ್ನಾಟಕದ ಹಸಿರು ಕ್ರಾಂತಿಯ ಹರಿಕಾರ ದಿ.ಬಾಪುಗೌಡರು ಮಾಡಿದ ಅಭಿವೃದ್ಧಿ ಕಾರ್ಯಗಳು ಇಂದು ಜೀವಂತವಾಗಿವೆ.ಸರಕಾರದಿಂದ 5000 ಮನೆಗಳನ್ನು ತಂದು ಬಡವರಿಗೆ ಹಂಚಿಕೆ ಮಾಡಿದರು.ಇಂದಿಗೂ ನಾವು ಬಾಪುಗೌಡ ನಿಲಯ ಎನ್ನುವ ಹೆಸರನ್ನು ಕಾಣುತ್ತೇವೆ. ಬಡವರ ಬಗ್ಗೆ ಅಪಾರ ಕಾಳಜಿ ಬಾಪುಗೌಡರಲ್ಲಿತ್ತು. ಶಾಸಕರಾಗಿ ಸಚಿವರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಮಗನಾದ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕೂಡ ತಂದೆಯಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ,, ಶಾಪುರದ ಚರಂಡಿ ನಿರ್ಮಾಣಕ್ಕಾಗಿ 400 ಕೋಟಿ, ತಾಲೂಕಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಾವಿರದ ಆರುನೂರು ಕೋಟಿ, ಎಲ್ಲಾ ಸಮುದಾಯದ ಭವನಕ್ಕಾಗಿ 10 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಸಗರನಾಡಿನಲ್ಲಿಯೇ ಶಹಪುರದಲ್ಲಿ ಉತ್ತಮ ರಸ್ತೆಗಳನ್ನು ಕಾಣಬಹುದು. ಅಂಬಿಗರ ಚೌಡಯ್ಯ, ಸಂಗೊಳ್ಳಿ ರಾಯಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ
ಹಣವನ್ನು ಒದಗಿಸಿ ಕೊಟ್ಟಿದ್ದಾರೆ. ಅಂತಹ ಸಹನಾ ಮೂರ್ತಿ ಸಚಿವರಾಗಿದ್ದು ಕೊಟ್ಟ ಮಾತನ್ನು ಯಾವತ್ತಿಗೂ ತಪ್ಪಿದವರಲ್ಲ ಎಂದು ಹೇಳಿದರು.ಶ್ರೀಶೈಲದಲ್ಲಿ ಬಸವರಾಜಪ್ಪಗೌಡ ದರ್ಶನಾಪುರವರ ನೇತೃತ್ವದಲ್ಲಿ ಶಿವರಾತ್ರಿ ಮತ್ತು ಯುಗಾದಿಯ ಸಂದರ್ಭದಲ್ಲಿ ಸಾವಿರಾರು ಜನರಿಗೆ ಉಚಿತ ದಾಸೋಹ ಪ್ರತಿ ವರ್ಷ ನೀಡಲಾಗುತ್ತದೆ ಎಂದರು.

ರೈತ ನಾಯಕರಾದ ಕೇದಾರಲಿಂಗಯ್ಯ ಹಿರೇಮಠ್ ರವರು ಮಾತನಾಡಿ ಬಾಪುಗೌಡರು ಸಗರನಾಡಿಗೆ ನೀರು ಕೊಟ್ಟರು‌. ಭೀಮರಾಯನ ಗುಡಿಯ ಕೃಷ್ಣ ಮೇಲ್ದಂಡೆ ಯೋಜನಾ ಕಚೇರಿಯನ್ನು ಹೋರಾಟ ಮಾಡಿ ತರಿಸಿಕೊಂಡು ಅದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ದರಾಗಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯ ಸಂದರ್ಭದಲ್ಲಿ ಮುಖ್ಯ ಸಚೇತಕರಾಗಿದ್ದರೂ. ಸಣ್ಣ ಕೈಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು ಬಾಪುಗೌಡರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದರಂತೆ ಅವರ ಮಗನೂ ಕೂಡ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಜೇವರಗಿಯಲ್ಲಿ ತೊಗರಿ ಬೆಳೆಗಾಗಿ ನೀರು ಬೇಕಾದ ಅನಿವಾರ್ಯ ಸಂದರ್ಭದಲ್ಲಿ ನವೆಂಬರ್ 16ರವರೆಗೆ ಸತತವಾಗಿ ನಾರಾಯಣಪುರ ಜಲಾಶಯದಿಂದ ವಾರ ಬಂದಿ ಇಲ್ಲದೆ ಕಾಲುವೆಗಳಿಗೆ ನೀರು ಹರಿಸಿ ರೈತಮಿತ್ರ ಎನಿಸಿಕೊಂಡರು.

ಕಾರ್ಯಕ್ರಮದ ಮೊದಲಿಗೆ ದೀಪ ಬೆಳಗಿಸುವುದರ ಮೂಲಕ ಪೂಜ್ಯರ ಸಾನಿಧ್ಯದಲ್ಲಿ ಉದ್ಘಾಟಿಸಲಾಯಿತು. ನಂತರ ಬಾಪುಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಚರಬಸವೇಶ್ವರ ಶಾಲೆಯಲ್ಲಿ 2023-24ನೇ ಸಾಲಿನಲ್ಲಿ 10ನೇ ತರಗತಿಯಿಂದಿಡಿದು ಪದವಿಯವರಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಬಾಪುಗೌಡರ ಅಭಿಮಾನಿಗಳು ಹಿತೈಷಿಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದರು.

ದಿ:ಬಾಪುಗೌಡರ ಪುಣ್ಯಾರಾಧನೆ ನಿಮಿತ್ತ 
ಚರಬಸವೇಶ್ವರ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೇಣುಕಾ ತಂದೆ ಭೀಮಣ್ಣ ಎನ್ನುವ ವಿದ್ಯಾರ್ಥಿಗೆ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿಯವರು ಪ್ರೋತ್ಸಹ ಧನ ನೀಡಿದರು.
**********

ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಬಸವರಾಜಪ್ಪಗೌಡ ದರ್ಶನಾಪುರ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಚನ್ನಾರೆಡ್ಡಿ ತುನ್ನೂರು, ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಚೇತನ್ ಗೋನಾಯಕ್, ವಿನೋದ್ ಪಾಟೀಲ್ ದೋರನಹಳ್ಳಿ, ಸಂತೋಷ್ ನಾಯಕ್, ರವಿ ಸಾಹು ಆಲ್ದಾಳ,ಶಾಂತಗೌಡ ನಾಗನಟಗಿ,ಸೇರಿದಂತೆ ಹಿತೈಷಿಗಳು ಅಪಾರ ಅಭಿಮಾನ ಬಂಧುಗಳು, ಶಾಲಾ ಮಕ್ಕಳು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author