Blog
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ : ಎಲ್ಲರೂ ಕೂಡಿಕೊಂಡು ಸಂಘ ಕಟ್ಟೋಣ: ಮಲ್ಲಪ್ಪ ಸಂಕೀನ್ ಕರೆ
ಯಾದಗಿರಿ,’
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028ನೇ ಸಾಲಿನ ಅವಧಿಗೆ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ನಾಮ ನಿರ್ದೇಶನದ ಅಧಿಕಾರವನ್ನು ಅಧ್ಯಕ್ಷರ ವಿವೇಚನೆಗೆ ಬಿಟ್ಟ ಹಿನ್ನೆಲೆಯಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿಗಳಾಗಿ ವೆಂಕಟಗಿರಿ ದೇಶಪಾಂಡೆ ಹಾಗೂ ನರಸಪ್ಪ ನಾರಾಯಣೋರ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನುಮಂತು ಪಿ., ಗಣೇಶ ಪಾಟೀಲ್, ಗವಿಸಿದ್ದೇಶ ಹೊಗರಿ, ನಾಗರಾಜ ಕೋಟೆ ಹಾಗೂ ಭೀಮಣ್ಣ ವಡವಟ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಸಂಘದ ಬಲವರ್ಧನೆಗೆ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪತ್ರಕರ್ತರ ಹಕ್ಕುಗಳು, ಸೌಲಭ್ಯಗಳು ಹಾಗೂ ವೃತ್ತಿಪರ ಹಿತಾಸಕ್ತಿಗಳ ರಕ್ಷಣೆಗೆ ಸಂಘವು ನಿರಂತರವಾಗಿ ಶ್ರಮಿಸಬೇಕಿದೆ ಎಂದು ಮಲ್ಲಪ್ಪ ಸಂಕೀನ್ ಹೇಳಿದರು.
ಪತ್ರಕರ್ತರ ವಿಶ್ವಾಸವನ್ನು ಉಳಿಸಿಕೊಳ್ಳಲು ಜವಾಬ್ದಾರಿಯುತ ಕಾರ್ಯನಿರ್ವಹಣೆ ಅಗತ್ಯವಾಗಿದ್ದು, ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ ಎಂದು ಅವರು ಕರೆ ನೀಡಿದರು.