ಬೀರನೂರು ಗ್ರಾಮದಲ್ಲಿ ಬಾವಿ ನೀರು ಸೇವಿಸಿ 10ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ; ಆಸ್ಪತ್ರೆಗೆ ದಾಖಲು

ಶಹಾಪುರ, ಜೂ.17: ತಾಲೂಕಿನ ಬೀರನೂರು ಗ್ರಾಮದಲ್ಲಿ ಕಲುಷಿತ ಬಾವಿ ನೀರು ಸೇವಿಸಿದ ಪರಿಣಾಮ 10ಕ್ಕೂ ಹೆಚ್ಚು ಗ್ರಾಮಸ್ಥರು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.ಗ್ರಾಮದಲ್ಲಿನ ಬೋರ್‌ವೆಲ್ ಕೆಟ್ಟುಹೋದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅನಿವಾರ್ಯವಾಗಿ ಬಾವಿಯ ನೀರನ್ನು ಬಳಸಿದ್ದು, ಇದರ ಪರಿಣಾಮವಾಗಿ ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ಸೇರಿದಂತೆ ಹಲವರಲ್ಲಿ ವಾಂತಿ-ಭೇದಿ ಲಕ್ಷಣಗಳು ಕಾಣಿಸಿಕೊಂಡಿವೆ. ಅಸ್ವಸ್ಥಗೊಂಡವರು ಸಮೀಪದ ಹತ್ತಿಗೂಡೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತಾಲೂಕು ಆರೋಗ್ಯಾಧಿಕಾರಿ ರಮೇಶ್ ಗುತ್ತೇದಾರ, “ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಸದ್ಯ ಪರಿಸ್ಥಿತಿ ಸಾಮಾನ್ಯವಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ಸಮತಾ ಸೈನಿಕ ದಳ ಜಿಲ್ಲಾ ಅಧ್ಯಕ್ಷ ಶರಣರೆಡ್ಡಿ ಹತ್ತಿಗೂಡೂರು ಅವರು, ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಜೆಜೆಎಂ (ಜಲ ಜೀವನ ಮಿಷನ್) ಕಾಮಗಾರಿಗಳ ಕಳಪೆ ನಿರ್ವಹಣೆ, ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ದೂರಿದ್ದಾರೆ.

ಗ್ರಾಮದ ಮುಖಂಡರಾದ ಮೌನೇಶ್ ಬೀರೂರು ಮತ್ತು ರವಿಕುಮಾರ ದಂಡಂಬಳಿ ಮಾತನಾಡಿ, “ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇತ್ತು. ಜನರು ಅಸ್ವಸ್ಥಗೊಂಡ ಬಳಿಕವೂ ಅಧಿಕಾರಿಗಳು ತಕ್ಷಣ ಸ್ಪಂದಿಸಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

ಪಿಡಿಓ ಸ್ಪಷ್ಟನೆ….

“ಬೀರನೂರು ಗ್ರಾಮದಲ್ಲಿ ಬಾವಿ ನೀರು ಬಳಕೆಯಿಂದ ಕೆಲವರಿಗೆ ಆರೋಗ್ಯ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಬೇರೆ ಸ್ಥಳದಿಂದ ಬೋರ್‌ವೆಲ್ ನೀರಿನ ವ್ಯವಸ್ಥೆ ಮಾಡಲಾಗಿದೆ. ಒಂದು ವಾರ್ಡಿನಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಪ್ರಸ್ತುತ ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.”

ದೇವರಾಜ ಮೌರ್ಯ.
ಪಿಡಿಓ..ಬೀರನೂರು ಗ್ರಾಮ ಪಂಚಾಯಿತಿ. 

Leave a Reply

Your email address will not be published. Required fields are marked *