ಹಯ್ಯಾಳ ಬಿ ಜಿಪಂ ಕ್ಷೇತ್ರಕ್ಕೆ ಮತ್ತೆ ಎಸ್‌ಸಿ ಮಹಿಳಾ ಮೀಸಲಾತಿ: ಆಕ್ಷೇಪ, ಆಕ್ರೋಶ

ಹಿಂದುಳಿದ ವರ್ಗ ಅ ಮೀಸಲಾತಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ; ಮೀಸಲಾತಿ ಬದಲಾವಣೆ ಹಿಂದೆ ರಾಜಕೀಯ ಕೈವಾಡದ ಆರೋಪ..!

ಯಾದಗಿರಿ: ಹಯ್ಯಾಳ ಬಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಮತ್ತೆ ಪರಿಶಿಷ್ಟ ಜಾತಿ ಮಹಿಳಾ (ಎಸ್‌ಸಿ) ಮೀಸಲಾತಿ ನಿಗದಿಯಾಗಿರುವುದು ಕ್ಷೇತ್ರದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕಳೆದ ಬಾರಿ ಪರಿಶಿಷ್ಟ ಜಾತಿ ಮೀಸಲಾತಿ ಇದ್ದ ಕ್ಷೇತ್ರಕ್ಕೆ ಅದಕ್ಕೂ ಮೊದಲು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ನಿಗದಿಯಾಗಿತ್ತು. ಈ ಬಾರಿ ಹಿಂದುಳಿದ ವರ್ಗ ‘ಅ’ ಮೀಸಲಾತಿ ಬರಬಹುದು ಎಂಬ ನಿರೀಕ್ಷೆ ಸ್ಥಳೀಯರಲ್ಲಿತ್ತು. ಆದರೆ, ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಮತ್ತೆ ಎಸ್‌ಸಿ ಮಹಿಳೆಗೆ ಮೀಸಲಾತಿ ನೀಡಿರುವುದು ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಅಧಿಕೃತ ಗೆಜೆಟ್ ಪ್ರಕಟವಾಗುವ ಮುನ್ನ ಯಾದಗಿರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅದರಲ್ಲಿ ಹಯ್ಯಾಳ ಬಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮೀಸಲಾತಿ ನಿಗದಿಯಾಗಿದೆ ಎಂದು ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಇದರಿಂದ ಈ ಬಾರಿ ಹಿಂದುಳಿದ ವರ್ಗದವರಿಗೆ ಸ್ಪರ್ಧಿಸಲು ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದರೆ,ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಎಸ್‌ಸಿ ಮಹಿಳೆಗೆ ಅವಕಾಶ ಕಲ್ಪಿಸಿರುವುದು ಚರ್ಚೆಗೆ ಕಾರಣವಾಗಿದೆ.
ಕ್ಷೇತ್ರದ ಮೀಸಲಾತಿ ಬದಲಾವಣೆಯ ಹಿಂದೆ ಪ್ರಭಾವಿ ರಾಜಕೀಯ ಮುಖಂಡರ ಕೈವಾಡವಿದೆ ಎಂಬ ಆರೋಪಗಳು ಸ್ಥಳೀಯವಾಗಿ ಕೇಳಿಬರುತ್ತಿವೆ. ವಿಶೇಷವಾಗಿ ಅಧಿಕಾರದಲ್ಲಿರುವ ಕೆಲವರು ತಮ್ಮ ರಾಜಕೀಯ ಲೆಕ್ಕಾಚಾರಕ್ಕೆ ಅನುಗುಣವಾಗಿ ಮೀಸಲಾತಿ ಬದಲಾವಣೆಗೆ ಪ್ರಭಾವ ಬೀರಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳು ಅಥವಾ ದೃಢೀಕೃತ ಪುರಾವೆಗಳು ಬಹಿರಂಗವಾಗಿಲ್ಲ.
ಹಯ್ಯಾಳ ಬಿ ಜಿಲ್ಲಾ ಪಂಚಾಯಿತಿ‌ ಹಿಂದುಳಿದ ವರ್ಗದ ಜನಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದ್ದು, ಹಿಂದುಳಿದ ವರ್ಗ ‘ಅ’ ಮೀಸಲಾತಿ ಬಂದಿದ್ದರೆ ಹಿಂದುಳಿದ ಸಮುದಾಯದ ಆಕಾಂಕ್ಷಿಗಳಿಗೆ ಸ್ಪರ್ಧಿಸಲು ಅವಕಾಶ ಸಿಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ, ಮೀಸಲಾತಿ ಬದಲಾವಣೆಯಿಂದ ಹಿಂದುಳಿದ ಸಮುದಾಯಗಳ ರಾಜಕೀಯ ಅವಕಾಶಗಳಿಗೆ ಹಿನ್ನಡೆಯಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗುತ್ತಿದೆ. ಇದು ಉದ್ದೇಶಪೂರ್ವಕವಾಗಿ ನಡೆದಿದೆಯೇ ಅಥವಾ ಮೀಸಲಾತಿ ನಿಗದಿಯ ನಿಯಮಗಳ ಪ್ರಕಾರವೇ ಆಗಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಈ ನಡುವೆ, ಹಯ್ಯಾಳ ಬಿ ಕ್ಷೇತ್ರದ ಮೀಸಲಾತಿ ಕುರಿತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಕ್ಷೇತ್ರದಲ್ಲಿ ಜನಸಂಖ್ಯೆ ಮತ್ತು ಮೀಸಲಾತಿ ನಿಯಮಗಳನ್ನು ಪರಿಗಣಿಸಿ ಸಾಮಾನ್ಯ ವರ್ಗ ಅಥವಾ ಹಿಂದುಳಿದ ವರ್ಗ ‘ಅ’ ಮೀಸಲಾತಿ ನಿಗದಿಪಡಿಸುವ ಸಾಧ್ಯತೆ ಇತ್ತು ಎಂಬುದು ಆಕ್ಷೇಪಣೆ ಸಲ್ಲಿಸಿರುವವರ ವಾದವಾಗಿದೆ. ಆಕ್ಷೇಪಣೆಗೆ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.
ಒಟ್ಟಿನಲ್ಲಿ, ಹಯ್ಯಾಳ ಬಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮೀಸಲಾತಿ ಈಗ ಸ್ಥಳೀಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿದೆ. ಮೀಸಲಾತಿ ನಿಗದಿಯ ಮಾನದಂಡಗಳು, ಜನಸಂಖ್ಯೆಯ ಪ್ರಮಾಣ ಮತ್ತು ಆಕ್ಷೇಪಣೆಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಈ ಬೆಳವಣಿಗೆಗಳು ಮುಂದಿನ ಸ್ಥಳೀಯ ರಾಜಕೀಯದ ಮೇಲೂ ಪರಿಣಾಮ ಬೀರಲಿವೆಯೇ ಎಂಬುದನ್ನು ಕಾದುನೋಡಬೇಕಿದೆ.

 “ಹಯ್ಯಾಳ ಬಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸತತವಾಗಿ ಪರಿಶಿಷ್ಟ ಜಾತಿ ಮೀಸಲಾತಿ ನಿಗದಿಯಾಗಿರುವುದರಿಂದ ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಕಾಶ ಸೀಮಿತವಾಗಿದೆ. ಕ್ಷೇತ್ರದ ಜನಸಂಖ್ಯೆ ಮತ್ತು ಮೀಸಲಾತಿ ನಿಯಮಗಳನ್ನು ಸಮರ್ಪಕವಾಗಿ ಪರಿಶೀಲಿಸಿ ನ್ಯಾಯ ಒದಗಿಸಬೇಕು. ಈ ಕುರಿತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದು, ಸೂಕ್ತ ನ್ಯಾಯ ದೊರೆಯುವ ನಿರೀಕ್ಷೆಯಿದೆ.
ಭೀಮಾಶಂಕರ ಸೂಗುರು
ಹಯ್ಯಳ ಬಿ.ಗ್ರಾಮದ ಮುಖಂಡ.

“ಹಯ್ಯಾಳ ಬಿ ಕ್ಷೇತ್ರದಲ್ಲಿ ಕುರುಬ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಜನಸಂಖ್ಯೆ ಗಣನೀಯವಾಗಿದೆ. ಈ ಬಾರಿ ಹಿಂದುಳಿದ ವರ್ಗ ‘ಅ’  ಮೀಸಲಾತಿ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮತ್ತೆ ಎಸ್‌ಸಿ ಮಹಿಳೆಗೆ ಮೀಸಲಾತಿ ನೀಡಿರುವುದರಿಂದ ಅನೇಕ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಮೀಸಲಾತಿ ನಿಗದಿಯಲ್ಲಿ ಪಾರದರ್ಶಕತೆ ಇರಬೇಕು. ರಾಜಕೀಯ ಪ್ರಭಾವದ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಿ, ನಿಯಮಾನುಸಾರ ನ್ಯಾಯ ಒದಗಿಸಬೇಕು.
ಭಾಗಣ್ಣ/ಸಿದ್ದಪ್ಪ 
ತಡಿಬಿಡಿ ಗ್ರಾಮದ ಮುಖಂಡ

Leave a Reply

Your email address will not be published. Required fields are marked *