2028ರ ಚುನಾವಣೆ ಮೇಲೆ ಕಣ್ಣು: ಗ್ರಾಮಗಳತ್ತ ಅಮೀನ್ ರೆಡ್ಡಿ ಯಾಳಗಿ ನಡೆ

ಶಹಾಪುರ: ವಿಧಾನಸಭೆ ಚುನಾವಣೆ ಇನ್ನೂ ದೂರವಿದ್ದರೂ ಶಹಾಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ನಿಧಾನವಾಗಿ ಗರಿಗೆದರತೊಡಗಿವೆ. ಬಿಜೆಪಿಯ ಶಹಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಅವರು ಸದ್ದಿಲ್ಲದೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, 2028ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದಂತಾಗಿದೆ.

ಗೋಗಿ ಕೆ, ತಳ್ಳಳ್ಳಿ, ಮುಡಬೂಳ, ಗೋಗಿಪೇಟ, ನಾಗನಟಗಿ ತಾಂಡಾ, ಸಗರ, ತಿಪ್ಪನಟಗಿ, ಕಂಚನಕವಿ, ವನದುರ್ಗ, ಹೊಸಕೆರಾ, ಮಾಲಗಿತ್ತಿ, ನಾಗನಟಗಿ, ಉಕ್ಕಿನಾಳ, ಖಾನಾಪುರ ಎಸ್.ಕೆ., ಬೋದನೂರು, ಬಳಬೋಡಗಿ ಸೇರಿದಂತೆ ಹಲವು ಗ್ರಾಮಗಳಿಗೆ ಅವರು ಭೇಟಿ ನೀಡಿ ಸ್ಥಳೀಯರೊಂದಿಗೆ ಬೆರೆಯುತ್ತಿದ್ದಾರೆ. ಶಹಾಪುರ ನಗರದ ಗಣೇಶನಗರ ಸೇರಿದಂತೆ ನಗರದ ಹಲವು ಕಡೆ ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದಾರೆ.

ವಿಶೇಷವೆಂದರೆ, ಬಹಿರಂಗ ರಾಜಕೀಯ ಸಭೆ, ದೊಡ್ಡ ಮಟ್ಟದ ಪ್ರಚಾರಕ್ಕಿಂತ ಗ್ರಾಮಗಳಿಗೆ ತೆರಳಿ ಜನರ ಮಧ್ಯೆ ಕುಳಿತು ಚಹಾ ಸೇವಿಸುತ್ತಾ ಸ್ಥಳೀಯರ ಸಮಸ್ಯೆಗಳನ್ನು ಆಲಿಸುವುದು ಅವರ ಭೇಟಿಯ ಪ್ರಮುಖ ಭಾಗವಾಗಿದೆ. ರೈತರ ಸಮಸ್ಯೆ, ರಸ್ತೆ, ಕುಡಿಯುವ ನೀರು, ಮೂಲಸೌಕರ್ಯ, ಸರ್ಕಾರಿ ಸೌಲಭ್ಯಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಜನರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಮಡ್ನಾಳ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿರುವ ಅವರು, ಕುಟುಂಬಗಳಿಗೆ ಧನಸಹಾಯ ನೀಡಿದ್ದು, ಗಾಯಾಳುಗಳಿಗೂ ನೆರವು ನೀಡಿದ್ದಾರೆ. ವಿವಿಧ ಗ್ರಾಮಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುವುದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವುದು ಸೇರಿದಂತೆ ವೈಯಕ್ತಿಕ ಸಂಪರ್ಕಕ್ಕೂ ಆದ್ಯತೆ ನೀಡುತ್ತಿದ್ದಾರೆ.

ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕೆಂಭಾವಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಅವರು, ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದಾರೆ. ಇದೇ ವೇಳೆ ವಿವಿಧ ಸಮುದಾಯಗಳ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಸಂಪರ್ಕ ಬೆಳೆಸುತ್ತಿದ್ದಾರೆ.


ಬೂತ್ ಮಟ್ಟದಲ್ಲಿ ಸಂಪರ್ಕ.

ಅಮೀನ್ ರೆಡ್ಡಿ ಯಾಳಗಿ ಅವರ ಗ್ರಾಮ ಪ್ರವಾಸವನ್ನು ಗಮನಿಸಿದರೆ, ಕೇವಲ ರಾಜಕೀಯ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಬೂತ್ ಮಟ್ಟದಲ್ಲಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಬೆಳೆಸುವ ಪ್ರಯತ್ನ ನಡೆಯುತ್ತಿರುವುದು ಗೋಚರಿಸುತ್ತಿದೆ. ಮನೆಮನೆಗೆ ಭೇಟಿ, ವೈಯಕ್ತಿಕವಾಗಿ ಸಮಸ್ಯೆ ಆಲಿಸುವುದು, ಕುಟುಂಬಗಳ ದುಃಖ-ಸಂತೋಷಗಳಲ್ಲಿ ಭಾಗಿಯಾಗುವುದು ಹಾಗೂ ವಿವಿಧ ಸಮುದಾಯಗಳ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ತಮ್ಮದೇ ಆದ ಜನಸಂಪರ್ಕ ಜಾಲವನ್ನು ರೂಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ, ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಮತ್ತು ವಿವಿಧ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆಗಿರುವ ಅನುಕೂಲ-ಅನಾನುಕೂಲಗಳ ಬಗ್ಗೆಯೂ ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂಬ ಆರೋಪವನ್ನು ಅವರು ವಿವಿಧೆಡೆ ಮಾಡುತ್ತಿದ್ದಾರೆ.

ಶಹಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ತಯಾರಿ ನಡೆಸಿದ ಅವರು ಬೂತ್‌ವಾರು ಜನಸಂಪರ್ಕಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಚುನಾವಣೆ ಘೋಷಣೆಯಾಗಲು ಇನ್ನೂ ಸಾಕಷ್ಟು ಕಾಲಾವಕಾಶವಿದ್ದರೂ, ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ಜನರೊಂದಿಗೆ ನೇರವಾಗಿ ಬೆರೆಯುತ್ತಿರುವುದು 2028ರ ಚುನಾವಣೆಯ ಪೂರ್ವ ತಯಾರಿಯ ಭಾಗವೇ ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಒಟ್ಟಿನಲ್ಲಿ, ಶಹಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧದ ಅಸಮಾಧಾನವನ್ನು ಗುರುತಿಸುವುದು, ಬಿಜೆಪಿ ಪರ ಜನಾಭಿಪ್ರಾಯ ರೂಪಿಸುವುದು ಹಾಗೂ ವೈಯಕ್ತಿಕ ಜನಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಅಮೀನ್ ರೆಡ್ಡಿ ಯಾಳಗಿ ಅವರ ಗ್ರಾಮ ಪ್ರವಾಸ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಈ ರಾಜಕೀಯ ನಡೆ ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *